ಸದ್ಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಹವಾ ಜೋರಾಗಿದೆ. ಇದೇ ಸಂದರ್ಭದಲ್ಲಿ ಮತ್ತೂಂದು ಪ್ಯಾನ್ ಇಂಡಿಯಾ ಚಿತ್ರ ಸಿದ್ಧವಾಗಿದೆ. ಆದರೆ ಇದು ಯಾವುದೇ ಸ್ಟಾರ್ ಚಿತ್ರವಲ್ಲ ಬದಲಾಗಿ ಇದು ಮಕ್ಕಳ ಪ್ಯಾನ್ ಇಂಡಿಯಾ ಚಿತ್ರ. ಅದೇ “ಲಿಲ್ಲಿ’.
ನಿರ್ದೇಶಕ ಶಿವಂ ನಿರ್ದೇಶನ, “ಗೋಪುರಂ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಕೆ ಬಾಬು ರೆಡ್ಡಿ, ಜಿ ಸತೀಶ್ ಕುಮಾರ್ ನಿರ್ಮಾಣದಲ್ಲಿ ತಯಾರಾದ ಚಿತ್ರ “ಲಿಲ್ಲಿ’. ನಟಿ ರಾಗಿಣಿ ದ್ವಿವೇದಿ, ನಟ ಶಿವ ಕೃಷ್ಣ, ಡಾ.ಮೌಲಾನಾ ಶರೀಫ್ ಚಿತ್ರದ ಕನ್ನಡ ಪೋಸ್ಟರ್, ಹಾಡು, ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ನಿರ್ದೇಶಕ ಶಿವಂ ನಿರ್ದೇಶಕ ಮಾತನಾಡಿ, “ಲಿಲ್ಲಿ ಪ್ರೇಕ್ಷಕರಿಗೆ ಅವರ ಮೊದಲ ಗೆಳೆತನವನ್ನು ನೆನಪಿಸುತ್ತದೆ. ನಮ್ಮೆಲ್ಲರ ಒಂದು, ಎರಡನೇ ತರಗತಿಯ ಗೆಳೆಯರು, ಸ್ನೇಹ ನೆನಪಾಗುತ್ತದೆ. ಚಿತ್ರದಲ್ಲಿ ಮೂವರು ಮಕ್ಕಳ ನಡುವಿನ ಗೆಳೆತನದ ಭಾವನಾತ್ಮಕ ಬಂಧವನ್ನು ಹೇಳಿದ್ದೇವೆ. ಚಿತ್ರ ಲುಕೇಮಿಯಾ ಖಾಯಿಲೆ ಸುತ್ತ ಸಾಗುತ್ತದೆ. ಜೀವನದಲ್ಲಿ ಯಾವುದೇ ಸಮಸ್ಯೆ ಬಂದರು ಸಕಾರಾತ್ಮಕವಾಗಿ ಚಿಂತಿಸಿ ನಡೆಯಬೇಕು ಎನ್ನುವುದನ್ನು ಹೇಳಿದ್ದೇವೆ. ಚಿತ್ರ ಕನ್ನಡದಲ್ಲೂ ಮೂಡಿ ಬರಲು ಕಾರಣ ಚಿತ್ರದ ಮುಖ್ಯಪಾತ್ರಧಾರಿ ರಾಜ್ ವೀರ್’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು.
ನಿರ್ಮಾಪಕ ಕೆ. ಬಾಬು ರೆಡ್ಡಿ ಮಾತನಾಡಿ, ಇದು ಸಂಪೂರ್ಣ ಮಕ್ಕಳ ಚಿತ್ರ. ಇದರಲ್ಲಿ ಯಾವುದೇ ರೀತಿ ಫೈಟ್, ಕೆಟ್ಟ ಭಾಷೆ, ತಂಬಾಕು, ಮಧ್ಯ ಯಾವುದೇ ಕಂಟೆಂಟ್ ಇಲ್ಲ. ಮಕ್ಕಳ ಮುಗ್ಧತೆ, ಸ್ನೇಹ, ಸ್ನೇಹಕ್ಕಾಗಿ ಸ್ನೇಹಿತೆಯನ್ನು ಕಾಪಾಡಿಕೊಳ್ಳುವ ಕುರಿತ ಚಿತ್ರ ಇದಾಗಿದೆ. ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.
ಆಂಟೋ ಫ್ರಾನ್ಸಿಸ್ ಸಂಗೀತ, ಎಸ್ ರಾಜಕುಮಾರ್ ಛಾಯಾಗ್ರಹಣ, ಲೋಕೇಶ್ ಕಡಲಿ ಸಂಕಲನ , ವಿನಯ್ ಶಿವಗಂಗೆ ಸಾಹಿತ್ಯ ಚಿತ್ರಕ್ಕಿದೆ. ರಾಜ್‌ವೀರ್, ಶಿವ ಕೃಷ್ಣ, ಬೇಬಿ ನೇಹಾ, ಬೇಬಿ ಪ್ರನೀತಾ ರೆಡ್ಡಿ, ಮಾಸ್ಟರ್ ವೇದಾಂತ್ ವರ್ಮ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಕನ್ನಡ ಸೇರಿದಂತೆ ತೆಲಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ. ಶ್ರೀಘ್ರದಲ್ಲಿ ಚಿತ್ರ ತೆರೆಮೇಲೆ ಬರಲಿದೆ ಎನ್ನುವುದು ಚಿತ್ರತಂಡದ ಮಾತು.
ವಾಣಿ ಭಟ್ಟ