Advertisement

ಸಕಾರಾತ್ಮಕ ನಡೆ :ಮಕ್ಕಳ ಮೊಬೈಲ್‌ ಚಟ ಬಿಡಿಸಲು ನಿಯಮ

09:03 AM Sep 17, 2018 | Team Udayavani |

ಶಾಲಾ ಮಕ್ಕಳ ಮೊಬೈಲ್‌ ಚಟ ಬಿಡಿಸಲು ಶಿಕ್ಷಣ ಇಲಾಖೆ ನಿಯಮ ರಚಿಸಲು ಮುಂದಾಗಿರುವುದು ಒಂದು ಸಕಾರಾತ್ಮಕ ನಡೆ. ಈ ಕಾರ್ಯ ಎಂದೋ ಆಗಬೇಕಿತ್ತು. ಈಗಲಾದರೂ ಶಿಕ್ಷಣ ಇಲಾಖೆಗೆ ಸಾಮಾಜಿಕ ಮಾಧ್ಯಮಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎನ್ನುವುದು ಅರಿವಾಯಿತಲ್ಲ ಎನ್ನುವುದು ಸಮಾಧಾನ ಕೊಡುವ ಅಂಶ. ಮಕ್ಕಳ ಮೊಬೈಲ್‌ ಚಟ ಎನ್ನುವುದು ಶಿಕ್ಷಕರ ಮಾತ್ರವಲ್ಲದೆ ನೂರಾರು ತಂದೆ-ತಾಯಿಗಳ ನೆಮ್ಮದಿ ಕೆಡಿಸಿದ ವಿಷಯ. ಶೈಕ್ಷಣಿಕವಾಗಿ ಸಕ್ರಿಯರಾಗಿರಬೇಕಾದ ಮಕ್ಕಳು ಮೊಬೈಲ್‌ ಚಟ ಬೆಳೆಸಿಕೊಂಡು ಸಮಯ ಸಿಕ್ಕಿದಾಗಲೆಲ್ಲ ಅದರಲ್ಲಿ ತಲ್ಲೀನರಾಗುತ್ತಿರುವುದನ್ನು ನಾವು ಈಗ ಎಲ್ಲೆಡೆ ಕಾಣಬಹುದು. 

Advertisement

ಕಳೆದೆರಡು ದಶಕಗಳಲ್ಲಿ ಆಗಿರುವ ಅಂತರ್ಜಾಲ ಕ್ರಾಂತಿಯಿಂದ ಲಾಭದಷ್ಟೇ ಹಾನಿಯೂ ಇದೆ ಎನ್ನುವುದಕ್ಕೆ ಮಕ್ಕಳ ಮೊಬೈಲ್‌ ಚಟವೇ ಉತ್ತಮ ಉದಾಹರಣೆ. ಮೊಬೈಲ್‌ ಫೋನ್‌ಗಳು ಕೈಗೆಟಕುವ ಬೆಲೆಯಲ್ಲಿ ಸಿಗತೊಡಗಿದ ಬಳಿಕ; ಇಂಟರ್‌ನೆಟ್‌ ದರವೂ ಬಹಳ ಸೋವಿಯಾದ ಬಳಿಕ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಮನೆಯಲ್ಲೂ ಇವೆ. ಮಕ್ಕಳು ಇದನ್ನು ಪಡೆದುಕೊಳ್ಳಲು ಇಷ್ಟೇನೂ ಕಷ್ಟಪಡಬೇಕಾದ ಅಗತ್ಯವಿಲ್ಲ. ಇದರಿಂದಾಗಿ ಈಗಾಗಲೇ ಅದರ ದುಷ್ಪರಿಣಾಮ ಗೋಚರಿಸಲಾರಂಭಿಸಿದೆ. ಆಗಾಗ ಸುದ್ದಿಯಾಗುವ ಬ್ಲೂವೇಲ್‌, ಮೋಮೋದಂತಹ ಪ್ರಾಣಕ್ಕೆ ಎರವಾಗುವ ಅಪಾಯಕಾರಿ ಆಟಗಳತ್ತ ಮಕ್ಕಳು ಆಕರ್ಷಿತರಾಗುವುದು ಸಾಮಾಜಿಕ ಮಾಧ್ಯಮಗಳ ಮೂಲಕವೇ. 

ನಿರಂತರವಾಗಿ ಮೊಬೈಲ್‌ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಎಂದು ತಜ್ಞರು ಆಗಾಗ ಎಚ್ಚರಿಸುತ್ತಾ ಇದ್ದರೂ ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡಾ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವ ಮನೆಯಲ್ಲಿ ಹಿರಿಯರು ಮೊಬೈಲ್‌ ವ್ಯಸನಿಗಳಾಗಿರುತ್ತಾರೋ ಅ ಮನೆಯಲ್ಲಿ ಮಕ್ಕಳು ಕೂಡಾ ಮೊಬೈಲ್‌ ಚಟ ಹತ್ತಿಸಿಕೊಂಡಿರುತ್ತಾರೆ ಎನ್ನುವುದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿರುವ ಅಂಶ. ವಿಪರೀತ ಮೊಬೈಲ್‌ ಚಟ ಹೊಂದಿರುವ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದು ಸಾಮಾನ್ಯ ಸಂಗತಿ. 

ಹಿಂದೆ ಮಕ್ಕಳು ಮೊಬೈಲ್‌ ಹಿಡಿದುಕೊಂಡಿದ್ದಾರೆ ಎಂದರೆ ಯಾವುದೋ ಗೇಮ್‌ ಆಡುತ್ತಿದ್ದಾರೆ ಎಂದು ಭಾವಿಸುತ್ತಿದ್ದರು. ಆದರೆ ಈಗ ಮಕ್ಕಳು ಗೇಮ್‌ನಿಂದ ಮುಂದುವರಿದು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಬೆರಳ ತುದಿಯಲ್ಲೇ ಅವರಿಗೆ ಬೇಕಾದದ್ದು, ಬೇಡದ್ದು ಎಲ್ಲವೂ ಲಭ್ಯವಾಗುತ್ತಿದೆ. ಎಳೆ ಮನಸ್ಸುಗಳು ಬೇಡವಾದದ್ದಕ್ಕೆ ಆಕರ್ಷಿತವಾಗುವುದು ಸಹಜ. ಫೇಸ್‌ಬುಕ್‌, ವಾಟ್ಸಪ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌, ಲಿಂಕ್ಡ್ಇನ್‌, ಟ್ವಿಟ್ಟರ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಜತೆಗಿನ ಒಡನಾಟ ಮಕ್ಕಳಿಗೆ ಸಲೀಸಾಗಿದೆ. ಹತ್ತನೇ ತರಗತಿ ಪ್ರವೇಶಿಸುವುದಕ್ಕೂ ಮೊದಲೇ ಮಕ್ಕಳು ತಮ್ಮದೇ ಆದ ಫೇಸ್‌ಬುಕ್‌ ಖಾತೆ, ವಾಟ್ಸಪ್‌ ಗ್ರೂಪ್‌ಗ್ಳನ್ನೆಲ್ಲ ಹೊಂದಿರುತ್ತಾರೆ. 

ಎಲ್ಲ ಸಮಸ್ಯೆಗಳಿಗೂ ಮೊಬೈಲ್‌ನಲ್ಲಿ ಉತ್ತರಗಳು ಸಿಗುತ್ತಿರುವುದೂ ಕೂಡ ಮಕ್ಕಳಿಗೆ ಮೊಬೈಲ್‌ ಹೆಚ್ಚು ಹತ್ತಿರವಾಗಲು ಕಾರಣವಾಗಿದೆ. ಇದರಲ್ಲಿ ಶಾಲೆಗಳ ಪಾತ್ರವೂ ಇದೆ. ಮಕ್ಕಳಿಗೆ ಅತಿ ಕಠಿಣ ಹೋಮ್‌ ವರ್ಕ್‌ ಅಥವಾ ಪ್ರೊಜೆಕ್ಟ್ಗಳನ್ನು ನೀಡಿದಾಗ ಸಹಜವಾಗಿ ಮಕ್ಕಳು ಉತ್ತರಕ್ಕಾಗಿ ಅಂತರ್ಜಾಲದಲ್ಲಿ ಹುಡುಕಾಟ ಮಾಡುತ್ತಾರೆ. ಹೆತ್ತವರು ಕೂಡಾ ಬೇರೆ ಮೂಲಗಳನ್ನು ಒದಗಿಸಿಕೊಡದೆ ಇಂಟರ್‌ನೆಟ್‌ನಲ್ಲಿ ಹುಡುಕಿ ಉತ್ತರ ಬರೆ ಎಂದು ಹೇಳಿ ತಮ್ಮ ಹೊಣೆಯಿಂದ ಜಾರಿಕೊಳ್ಳುತ್ತಿದ್ದಾರೆ. ಹೀಗೆ ರೆಡಿಮೇಡ್‌ ಉತ್ತರ ಸಿಗುವುದರಿಂದ ಮಕ್ಕಳ ಚಿಂತಿಸುವ ಶಕ್ತಿ ದುರ್ಬಲವಾಗುತ್ತದೆ ಮತ್ತು ಅವರಲ್ಲಿ ಸೃಜನಶೀಲತೆ ಬೆಳೆಯುವುದಿಲ್ಲ. ಹೀಗಾಗಿ ಕೆಲವು ದೇಶಗಳು ಶಾಲೆಯಲ್ಲಿ ಮೊಬೈಲ್‌ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿವೆ. 

Advertisement

ಹಾಗೆಂದು ನಿಯಮ ರಚನೆಯಾದ ಕೂಡಲೇ ಮಕ್ಕಳು ಮೊಬೈಲ್‌ನಿಂದ ದೂರವಾಗುತ್ತಾರೆ ಎಂಬ ನಿರೀಕ್ಷಿಸುವಂತಿಲ್ಲ. ಮನೆಯಲ್ಲಿ ಹೆತ್ತವರು ಮತ್ತು ಶಾಲೆಯಲ್ಲಿ ಶಿಕ್ಷಕರು ಈ ನಿಟ್ಟಿನಲ್ಲಿ ಬಹಳ ಜವಾಬ್ದಾರಿಯುತವಾದ ಪಾತ್ರವನ್ನು ನಿಭಾಯಿಸಬೇಕಾದ ಅಗತ್ಯವಿದೆ. ಮಕ್ಕಳಿಗೆ ಮಾಹಿತಿಗಾಗಿ ಪರ್ಯಾಯ ಮೂಲಗಳನ್ನು ಒದಗಿಸಿಕೊಡುವುದು ಶಿಕ್ಷಕರು ಮತ್ತು ಪಾಲಕರು ಇಬ್ಬರ ಹೊಣೆಯೂ ಆಗಿದೆ. ಗದರಿಸಿ, ಹೊಡೆದು ಬಡಿದು ಈ ಚಟವನ್ನು ಬಿಡಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಅದರ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಇದಾಗಬೇಕಿದ್ದರೆ ಮೊದಲು ಹೆತ್ತವರು ಮತ್ತು ಶಿಕ್ಷಕರು ಹಾನಿಯ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಲಿ. 

Advertisement

Udayavani is now on Telegram. Click here to join our channel and stay updated with the latest news.

Next