Advertisement

ಕಸಾಪದಿಂದ ಮಕ್ಕಳ ಸಾಹಿತ್ಯ ಕಡೆಗಣನೆ

09:17 AM Jan 30, 2019 | Team Udayavani |

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳು ಮತ್ತು ಮಕ್ಕಳ ಸಾಹಿತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಆರೋಪಿಸಿದರು.

Advertisement

ನಾದ ಚೈತನ್ಯ, ಸಾಂಸ್ಕೃತಿಕ ಯುವ ಕಲಾ ವೇದಿಕೆ ಮತ್ತು ಸಂಸ್ಕಾರ ಭಾರತಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಗೀತ ಸಂಕ್ರಾಂತಿ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತದೆ. ಅದರಲ್ಲಿ ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ಗೋಷ್ಠಿಗಳನ್ನೂ ನಡೆಸುತ್ತದೆ. ಆದರೆ ಮಕ್ಕಳ ಗೋಷ್ಠಿ ಮಾತ್ರ ಆಯೋಜಿಸದೆ ನಿರ್ಲಕ್ಷಿಸಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಸಮ್ಮೇಳನ, ಕಾರ್ಯಕ್ರಮಗಳು ಮತ್ತು ಗೋಷ್ಠಿಗಳು ಎಲ್ಲೆಡೆ ನಡೆಯುತ್ತಿವೆ. ಆದರೆ ಮಕ್ಕಳ ಸಮ್ಮೇಳನಗಳು ಗೋಷ್ಠಿಗಳು ಕಂಡು ಬರುತ್ತಿಲ್ಲ ಎಂದು ವಿಷಾದಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳೇ ಮಕ್ಕಳನ್ನು ನಿರ್ಲಕ್ಷಿಸಿದರೆ ಅವರ ಸಾಹಿತ್ಯ ಉಳಿದು, ಬೆಳೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಮಕ್ಕಳ ಸಮ್ಮೇಳನ ಮತ್ತು ಅವರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವಂತೆ ವೇದಿಕೆಯಲ್ಲಿದ್ದ ಖ್ಯಾತ ಸಂಗೀತ ನಿರ್ದೇಶಕ ಉಪಾಸನಾ ಮೋಹನ್‌ ಅವರಿಗೆ ಸಲಹೆ ಮಾಡಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|ಸಿ.ರಮೇಶ್‌ ಮಾತನಾಡಿ, ತಮ್ಮ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ ವರ್ಷಕ್ಕೆ ಒಂದು ಮಕ್ಕಳ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವುದಾಗಿ ಭರವಸೆ ನೀಡಿದರು.

ಸಂಗೀತ ನಿರ್ದೇಶಕ ಉಪಾಸನಾ ಮೋಹನ್‌ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಟಿ.ವಿ ಕಾರ್ಯಕ್ರಮಗಳಿಗೆ ಕಳುಹಿಸುವುದನ್ನು ಬಿಟ್ಟು ಅವರಿಗೆ ಉತ್ತಮ ಸಾಹಿತ್ಯ ಕಲಿಸಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ನಾದಚೈತನ್ಯದ ಅಧ್ಯಕ್ಷ ಸಿ.ಆರ್‌.ಪ್ರೇಮ್‌ಕುಮಾರ್‌ ವಹಿಸಿದ್ದರು.

ನಾದ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ವಿವಿಧ ಗಾಯಕರಿಂದ ನಾಡಿನ ಖ್ಯಾತ ಕವಿಗಳು ರಚಿಸಿರುವ ಗೀತೆಗಳ ಗಾಯನ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಿರಿ ಪ್ರಶಸ್ತಿಗೆ ಪಾತ್ರರಾಗಿರುವ ನಿವೃತ್ತ ಉಪನ್ಯಾಸಕ ಚಂದ್ರಮೌಳಿ ಮತ್ತು ಉಪಾಸನಾ ಮೋಹನ್‌ ಅವರನ್ನು ಸನ್ಮಾನಿಸಲಾಯಿತು. ನಾದ ಚೈತನ್ಯ ಸಂಸ್ಥೆಯ ಮುಖ್ಯಸ್ಥೆ ರೇಖಾ ಪೇಮ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next