ದಾವಣಗೆರೆ: ನವೆಂಬರ್ 10 ರಿಂದ 16ರ ವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಒಟ್ಟು 6 ದಿನಗಳ ಕಾಲ ಜಿಲ್ಲೆಯ ಎಲ್ಲಾ ತಾಲೂಕುಗಳ ಆಯ್ದ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 8ರಿಂದ 10ರ ವರೆಗೆ ಮಕ್ಕಳ ಚಲನ ಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಚಿತ್ರೋತ್ಸವದಲ್ಲಿ ಮಕ್ಕಳ ಕುರಿತಾದ ಚಲನ ಚಿತ್ರಗಳನ್ನು ರಿಯಾಯ್ತಿ ದರದಲ್ಲಿ ತೋರಿಸಲಾಗುವುದು. ಇದರ ಯಶಸ್ಸಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಪದ್ಮ ಬಸವಂತಪ್ಪ ಸೂಚಿಸಿದರು. ಹಾರೋ ಹಕ್ಕಿ ಮತ್ತು ಅರಿವು ಎಂಬ ಎರಡು ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಿತ್ರವನ್ನು ಯುಎಫ್‌ಓ ಮತ್ತು ಕ್ಯುಯುಬಿಇ ಮೂಲಕ ಸರ್ಕಾರದ ಮಂಜೂರಾತಿ ಪಡೆದಿರುವ ಸಂಸ್ಥೆಗಳು
ಪ್ರದರ್ಶಿಸಲಿವೆ. ಈ ಪ್ರದರ್ಶನಕ್ಕೆ ರಿಯಾಯ್ತಿ ದರ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಚಿತ್ರೋತ್ಸವದಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಚಿತ್ರ ವೀಕ್ಷಿಸಬಹುದಾಗಿದ್ದು, ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಮಕ್ಕಳು ಚಿತ್ರ ಪ್ರದರ್ಶನ ವೀಕ್ಷಿಸುವ, ಚಿತ್ರಮಂದಿರದಲ್ಲಿ ಆಸನಗಳ ವ್ಯವಸ್ಥೆ ಕುರಿತು ನಿಗಾ ವಹಿಸಲು ಅವರು ಸೂಚಿಸಿದರು. ನಗರದ ತ್ರಿಶೂಲ್, ತ್ರಿನೇತ್ರ, ಗೀತಾಂಜಲಿ, ವಸಂತ, ಅಶೋಕ, ಚನ್ನಗಿರಿ ತಾಲೂಕಿನ ವೀರಭದ್ರೇಶ್ವರ, ಲಕ್ಷ್ಮಿ, ಹರಿಹರದ ಜಯಶ್ರೀ, ಮಲೆಬೆನ್ನೂರಿನ ಜ್ಯೋತಿ, ಹೊನ್ನಾಳಿಯ ಬಸವೇಶ್ವರ, ಶಾಂತ, ನ್ಯಾಮತಿಯ ಶೈಲಾ, ಹರಪನಹಳ್ಳಿಯ ಬಸವರಾಜ್, ಕುಸುಮ ಮತ್ತು ಜಗಳೂರಿನ ನಟರಾಜ್ ಮತ್ತು ಭಾರತ್ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೋದಂಡರಾಮ, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ರಮೇಶ್, ಹೊಸಪೇಟೆಯ ಕರ್ನಾಟಕ ಸೋಷಿಯಲ್ ಸರ್ವಿಸ್ ಮಕ್ಕಳ ಚಲನಚಿತ್ರ ಪ್ರದರ್ಶಕ ಖಾಜಾ ಮೊಹಿದ್ದೀನ್, ವಿವಿಧ ಚಿತ್ರಮಂದಿರದ ಮಾಲೀಕರು ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.