Advertisement

ಮಕ್ಕಳ ಪರೀಕ್ಷಾ ಕೇಂದ್ರ ಬಲುದೂರ !5, 8ನೇ ತರಗತಿ “ಮೌಲ್ಯಾಂಕನಕ್ಕೆ’ಹಲವು ಅಗ್ನಿ ಪರೀಕ್ಷೆ

01:01 AM Mar 04, 2023 | Team Udayavani |

ಮಂಗಳೂರು: ಇದೇ ಮೊದಲ ಬಾರಿಗೆ ನಡೆಯಲಿರುವ 5 ಮತ್ತು 8ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗೆ ನಿಗದಿ ಮಾಡಲಾದ ಪರೀಕ್ಷಾ ಕೇಂದ್ರಗಳು ಮಕ್ಕಳ ಪಾಲಿಗೆ ಬಹುದೂರವಾಗಿದೆ.

Advertisement

ಶಾಲಾವಾರು ಮಕ್ಕಳ ಸಂಖ್ಯೆ ಆಧರಿಸಿ 5ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಹಾಗೂ 8ನೇ ತರಗತಿಯ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಗ್ರಾಮಾಂತರ ಭಾಗದ ಹಲವು ಶಾಲೆಗಳ ಪುಟಾಣಿಗಳು ಪರೀಕ್ಷಾ ಕೇಂದ್ರಕ್ಕಾಗಿ ಕಿ.ಮೀ.ಗಟ್ಟಲೆ ಸಂಚರಿಸಬೇಕಾದ ಅನಿವಾರ್ಯ ಸೃಷ್ಟಿಸಿದೆ.
ಕೆಲವು ಕಡೆ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ 4-5 ಕಿ.ಮೀ. ದೂರವಿದೆ. ಇಲ್ಲಿಗೆ ಸರಕಾರಿ ಶಾಲೆಯ ಮಕ್ಕಳನ್ನು ಅಲ್ಲಿನ ಅಧ್ಯಾಪಕರೇ ಕರೆದುಕೊಂಡು ಹೋಗಬೇಕು. ಆದರೆ ಅಧ್ಯಾಪಕರ ಕೊರತೆ ಇರುವ ಶಾಲೆಗಳಲ್ಲಿ ಇದಕ್ಕೆ ಪರಿಹಾರವೇನು ಎಂಬುದು ಯಕ್ಷಪ್ರಶ್ನೆ. ಗ್ರಾಮಾಂತರ ಭಾಗದಲ್ಲಿ ಶಾಲೆಗಳು ದೂರದಲ್ಲಿ ಇರುವುದರಿಂದ ಪುಟಾಣಿಗಳ ಹೊಸ ಪರೀಕ್ಷೆ ಹೆತ್ತವರಿಗೂ ಅಗ್ನಿಪರೀಕ್ಷೆಯಾಗಿದೆ.

ಪರೀಕ್ಷಾ ಸಮಯಕ್ಕೆ ಆಕ್ಷೇಪ
ಇದೇ ಮೊದಲ ಬಾರಿಯ ಮೌಲ್ಯಾಂಕನ ಪರೀಕ್ಷೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯವನ್ನು ಬೆಳಗ್ಗೆ ಇರಿಸಬಹುದು ಎಂದು ಬಹುತೇಕರು ನಿರೀಕ್ಷಿಸಿದ್ದರು. ಆದರೆ ಕೆಲವು ಕೇಂದ್ರಗಳಲ್ಲಿ ಇದೇ ವೇಳೆ ದ್ವಿತೀಯ ಪಿಯು ಪರೀಕ್ಷೆ ನಡೆಯುವ ಕಾರಣ 5, 8ರ ಪರೀಕ್ಷೆ ಅಪರಾಹ್ನ 2.30ಕ್ಕೆ ಆರಂಭವಾಗಿ ಸಂಜೆ 4.30ರ ವರೆಗೆ ನಡೆಯಲಿದೆ. ಹೀಗಾಗಿ ಪುಟಾಣಿಗಳ ಪರೀಕ್ಷೆಗಾಗಿ ಹೆತ್ತವರು ರಜೆ ಮಾಡುವಂತಾಗಿದೆ !

ಕಲಿಕಾ ಚೇತರಿಕೆ-ಪಠ್ಯಪುಸ್ತಕ ಕಿರಿಕ್‌!
ಕೊರೊನಾ ಅನಂತರ ಮಕ್ಕಳ ಪರಿಹಾರ ಬೋಧನೆಗೆ ಅನುಕೂಲವಾಗಲು “ಕಲಿಕಾ ಚೇತರಿಕೆ’ ಪುಸ್ತಕ ಸಿದ್ಧಪಡಿಸಲಾಗಿತ್ತು. ಸರಕಾರಿ ಶಾಲೆಯವರು ಇದನ್ನೇ ಕಡ್ಡಾಯವಾಗಿ ಅಭ್ಯಸಿಸಬೇಕು ಹಾಗೂ ವರ್ಷದ ಪಠ್ಯಪುಸ್ತಕವನ್ನು ಕೇವಲ “ಗೈಡ್‌’ ಆಗಿ ಮಾತ್ರ ತೆಗೆದುಕೊಳ್ಳಲು ಸರಕಾರ ಸೂಚಿಸಿತ್ತು. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಾತ್ರ “ಕಲಿಕಾ ಚೇತರಿಕೆ’ ಇಲ್ಲ; ಅಲ್ಲಿ ಪಠ್ಯಪುಸ್ತಕ ಮಾತ್ರ ಬೋಧನೆ ಇದೆ. ಸದ್ಯ ಬಿಡುಗಡೆಯಾಗಿರುವ ಮಾದರಿ ಪ್ರಶ್ನೆಪತ್ರಿಕೆಯಲ್ಲಿ “ಕಲಿಕಾ ಚೇತರಿಕೆ’ ಪುಸ್ತಕದ ಪ್ರಶ್ನೆಗಳು ಬೆರಳೆಣಿಕೆಯಷ್ಟಿದ್ದು, “ಪಠ್ಯಪುಸ್ತಕ’ದ ಪ್ರಶ್ನೆಗಳು ಹೆಚ್ಚು ಇವೆ. ಹೀಗಾಗಿ ಇದು ಸರಕಾರಿ ಶಾಲೆ ಮಕ್ಕಳಿಗೆ ಸಮಸ್ಯೆ ಆಗಬಹುದು ಎಂಬ ಅಸಮಾಧಾನವೂ ಕೇಳಿಬಂದಿದೆ.

“ಕಲಿಕಾ ಚೇತರಿಕೆ’ಯನ್ನೇ ಓದುವಂತೆ ಇಲಾಖೆಯಿಂದ ನಮಗೆ ನಿರ್ದೇಶನ ಬಂದಿತ್ತು. ಅದರಂತೆ ಪಠ್ಯಕ್ಕೆ ಹೆಚ್ಚು ಒತ್ತು ನೀಡದೆ ಕಲಿಕಾ ಚೇತರಿಕೆಯನ್ನೇ ಪಾಠ ಮಾಡಿದ್ದೇವೆ. ಆದರೆ ಅನುದಾನಿತ ಹಾಗೂ ಅನುದಾನ ರಹಿತದಲ್ಲಿ ಕಲಿಕಾ ಚೇತರಿಕೆ ಇಲ್ಲ. ಸದ್ಯ ಏಕ ಸ್ವರೂಪದ ಮಾದರಿ ಪ್ರಶ್ನೆಪತ್ರಿಕೆ ಬಂದಿದೆ. ಇದು ಸರಕಾರಿ ಶಾಲೆಗೆ ಬಹುದೊಡ್ಡ ಹೊಡೆತ ಎಂದು ಸರಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ತಡವಾಗಿ ಬಂದ ಮಾದರಿ ಪ್ರಶ್ನೆಗಳು!
5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಪರೀಕ್ಷೆ ನಡೆಸುವ ಬಗ್ಗೆ ಡಿಸೆಂಬರ್‌ನಲ್ಲಿಯೇ ಸರಕಾರ ಘೋಷಿಸಿತ್ತು. ಜನವರಿ ಮೊದಲ ವಾರದಲ್ಲಿ ಮಾದರಿ ಪ್ರಶ್ನೆಪತ್ರಿಕೆ ಬರಲಿದೆ ಎಂದೂ ತಿಳಿಸಿದ್ದರು. ಆದರೆ ಬಂದದ್ದು ವಾರದ ಹಿಂದೆ. ಹೀಗಾಗಿ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಕಷ್ಟವಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗಿದೆ ಎಂದು ಕೆಲವು ಅಧ್ಯಾಪಕರು ತಿಳಿಸಿದ್ದಾರೆ.

ಇದುವರೆಗೆ 5, 8 ಮಕ್ಕಳಿಗೆ ಆಯಾ ಶಾಲೆಯಲ್ಲಿಯೇ ಯಶಸ್ವಿಯಾಗಿ ಪರೀಕ್ಷೆ ನಡೆದಿತ್ತು. ಈ ಬಾರಿ ಬೇರೆ ಶಾಲೆಗೆ ಪುಟಾಣಿಗಳನ್ನು ಕರೆದುಕೊಂಡು ಪರೀಕ್ಷೆ ನಡೆಸುವ ಹೊಸ ಸವಾಲು ಇದೆ. ಹಿಂದಿನಂತೆ ಪರೀಕ್ಷೆ ಆಯಾ ಶಾಲೆಯಲ್ಲಿ ನಡೆಯಲಿ. ಪರಿಶೀಲನೆಗೆ ಬೇರೆ ಶಾಲೆಯ ಅಧ್ಯಾಪಕರು ಬರಲಿ. ಇದರಿಂದ ಮಕ್ಕಳ ಅನಾವಶ್ಯಕ ಓಡಾಟ ತಪ್ಪಿಸಬಹುದು.
-ಶಿವಪ್ರಸಾದ್‌ ಶೆಟ್ಟಿ, ಅಧ್ಯಕ್ಷರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ-ದ.ಕ.

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು
ದಕ್ಷಿಣ ಕನ್ನಡ
5ನೇ ತರಗತಿ : 33,374
8ನೇ ತರಗತಿ : 33,861
ಉಡುಪಿ
5ನೇ ತರಗತಿ : 12,059
8ನೇ ತರಗತಿ : 14,026

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next