Advertisement

ಆಟಿಕೆ ಸಾಮಗ್ರಿಗಳಿಂದ ಮಕ್ಕಳ ಅನ್ನನಾಳ, ಶ್ವಾಸನಾಳಗಳಿಗಾಗುವ ಅನಾಹುತಗಳು

06:00 AM Aug 12, 2018 | |

ಸಾಮಾನ್ಯವಾಗಿ ಮಕ್ಕಳಲ್ಲಿ ತಮಗೆ ಕೈಯಲ್ಲಿ ಸಿಕ್ಕಿದ ವಸ್ತುಗಳನ್ನು ಬಾಯಿಗೆ ಹಾಕುವ ಅಭ್ಯಾಸವನ್ನು ನಾವು ಕಾಣುತ್ತೇವೆ. ಈ ಅಭ್ಯಾಸವು ಮಗುವಿನ ವಯಸ್ಸನ್ನು ಅವಲಂಬಿಸಿರುತ್ತದೆ. ಎರಡು ವರ್ಷಕ್ಕಿಂತ ಚಿಕ್ಕ ಮಕ್ಕಳು ವಸ್ತುವಿನ ರುಚಿ ನೋಡಲು ಅಥವಾ ಕುತೂಹಲದಿಂದ ಬಾಯಿಗೆ ಹಾಕಿ ನುಂಗುತ್ತಾರೆ. ಆದರೆ ದೊಡ್ಡ ಮಕ್ಕಳಲ್ಲಿ ತಮ್ಮ ಕೈಯಲ್ಲಿರುವ ಪೆನ್ನು, ಪೆನ್ಸಿಲ್‌ ಅಥವಾ ಆಟಿಕೆ ಸಾಮಾನು ಬಾಯಿಗೆ ಹಾಕುವ ಅಭ್ಯಾಸವಿರುತ್ತದೆ. ನುಂಗಿದ ವಸ್ತುಗಳು ಕರುಳಲ್ಲಿ ಹೋಗಿ ಮಲದ ಮೂಲಕ ಹೊರಗೆ ಬರುತ್ತವೆ. ಆದರೆ ಹರಿತವಾದ ವಸ್ತುಗಳು, ಬ್ಯಾಟರಿಗಳು, ಅಯಸ್ಕಾಂತ ಮುಂತಾದ ವಸ್ತುಗಳು ಎದೆಯಲ್ಲಿರುವ (ಆಹಾರದ ಕೊಳವೆ) ಅನ್ನನಾಳ ಅಥವಾ ಕರುಳಿಗೆ ಹೋಗಿ ಹಾನಿಯನ್ನು ಉಂಟು ಮಾಡುತ್ತವೆ. ಕೆಲವೊಮ್ಮೆ ಜೀವಕ್ಕೂ ಅಪಾಯವಾಗಬಹುದು.

Advertisement

ಇತ್ತೀಚಿನ ದಿನಗಳಲ್ಲಿ ಸಿಗುವ ಆಟಿಕೆ ಸಾಮಾನುಗಳಲ್ಲಿ  ಚಿಕ್ಕ ಚಿಕ್ಕ ಲೋಹದ, ಅಯಸ್ಕಾಂತದ ಅಥವಾ ಬಟನ್‌ ಬ್ಯಾಟರಿಗಳನ್ನು ನಾವು ಕಾಣುತ್ತೇವೆ. ಪೋಷಕರ ಅರಿವಿಲ್ಲದೆ ಮಕ್ಕಳು ನುಂಗಿ ಹಾನಿಯುಂಟಾಗುವುದನ್ನು ಕಾಣುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ  ಸರಕಾರವು ಹಾನಿಯುಂಟು ಮಾಡುವ ಆಟಿಕೆ ಸಾಮಾನುಗಳನ್ನು ನಿಷೇಧಿಸಿರುತ್ತದೆ.  ಆದರೆ ಈ ತರಹದ ವ್ಯವಸ್ಥೆ ಭಾರತದಲ್ಲಿ ಕಾಯಿದೆ ಅನುಸರಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಪೋಷಕರಲ್ಲಿಯೂ ಈ ತರಹದ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ವಿವೇಚನೆ ಕಡಿಮೆ ಇದೆ. ವಿದ್ಯಾವಂತ ಪೋಷಕರು ಕೂಡ ಈ ತರಹದ ವಿಷಯಗಳಲ್ಲಿ ಕಾಳಜಿ ವಹಿಸುವುದಿಲ್ಲ. ತಾಯಿ-ತಂದೆ ಇಬ್ಬರೂ ಕೆಲಸ ಮಾಡುವುದರಿಂದ ಮಕ್ಕಳನ್ನು ದಾದಿಯರು ನೋಡಿಕೊಳ್ಳುತ್ತಾರೆ. ಅವರಿಗೆ ಈ ವಿಷಯದ ಪರಿವಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ನಾಣ್ಯಗಳನ್ನು ನುಂಗುತ್ತಾರೆ. ನಾಣ್ಯಗಳು ಅಷ್ಟು ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ನಮಗೆ ತಿಳಿಯದ ಕರುಳಿನ ಸಮಸ್ಯೆಗಳಿದ್ದರೆ, ಅವುಗಳೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು.

ಇನ್ನೂ ಕೆಲವೊಮ್ಮೆ ಬಚ್ಚಲು ಮತ್ತು ಮನೆ ತೊಳೆಯುವ ದ್ರವಗಳನ್ನು ಅಸುರಕ್ಷಿತವಾದ ಸ್ಥಳದಲ್ಲಿಟ್ಟಾಗ ಅವುಗಳನ್ನು ಮಕ್ಕಳು ಸೇವಿಸುತ್ತಾರೆ. ಈ ತರಹದ ದ್ರವಗಳಲ್ಲಿ ಆಮ್ಲ ಮತ್ತು ಕ್ಷಾರ (Acids (H2SO4) & Alkali (NaUH)) ಪ್ರಮಾಣ ಜಾಸ್ತಿ ಇರುತ್ತದೆ. ಆಕಸ್ಮಿಕವಾಗಿ ಅಥವಾ ಕುತೂಹಲದಿಂದ  ಈ ತರಹದ ದ್ರವಗಳನ್ನು ಮಕ್ಕಳು ಸೇವಿಸುವುದರಿಂದ ಅನ್ನನಾಳವು ಒಳಗೆ ಸುಟ್ಟು ಹೋಗಿ ಜೀವಕ್ಕೆ ಅಪಾಯವಾಗಬಹುದು ಅಥವಾ ಮುಂದಿನ ದಿನಗಳಲ್ಲಿ ಆಹಾರದ ಸೇವನೆ ಕಷ್ಟವಾಗಿ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ (ಸಂಕೀರ್ಣವಾದ).

ನಮ್ಮ ದೇಹದಲ್ಲಿ  ಅನ್ನನಾಳ (Oesophagus) ಮತ್ತು ಶ್ವಾಸನಾಳ  (Trachea) ಎರಡೂ ಒಂದೇ ಸ್ಥಳದಲ್ಲಿದ್ದರೂ ನಾವು ಸೇವಿಸಿದ ಆಹಾರ ಪದಾರ್ಥ ಶ್ವಾಸನಾಳಕ್ಕೆ ಹೋಗುವುದಿಲ್ಲ ಕೆಲವೊಮ್ಮೆ ಅಚಾತುರ್ಯದಿಂದ ನಾವು ಸೇವಿಸಿದ ಆಹಾರ ಪದಾರ್ಥವಾಗಲಿ ಅಥವಾ ಬಾಯಿಯಲ್ಲಿರುವ ವಸ್ತುಗಳು ಶ್ವಾಸನಾಳದಲ್ಲಿ ಹೋಗಿ ಮಗುವಿಗೆ ತೊಂದರೆಯನ್ನುಂಟು ಮಾಡುತ್ತವೆ. ಅಂತಹ ಸಮಯದಲ್ಲಿ ಮಗುವಿಗೆ ಅತೀವ ಕೆಮ್ಮು, ಉಸಿರಾಟದ ತೊಂದರೆ ಅಥವಾ ಉಸಿರಾಡುವಾಗ ಶಬ್ದ ಬರುವುದು, ಕೆಲವೊಮ್ಮೆ ಮಗು ನೀಲಿಯಾಗಿ ಕಂಡು ಜೀವಕ್ಕೆ ಅಪಾಯವಾಗುತ್ತದೆ.

ಅತಿ ಚಿಕ್ಕ ವಸ್ತುಗಳು ಶ್ವಾಸನಾಳ ಅಥವಾ ಶ್ವಾಸಕೋಶದಲ್ಲಿದ್ದರೆ ಮಗುವಿಗೆ ಪದೇ ಪದೆ ಶ್ವಾಸಕೋಶದ ಸೋಂಕು ಜ್ವರ ಇಲ್ಲವೇ ಶ್ವಾಸಕೋಶದಲ್ಲಿ  ಕೀವಾಗಿ ಪರಿಣಮಿಸುತ್ತದೆ.

Advertisement

ಮೂರು ವರ್ಷದ ಕೆಳಗಿನ ಮಕ್ಕಳಲ್ಲಿ ಹಲ್ಲುಗಳು ಸಂಪೂರ್ಣವಾಗಿ ಬೆಳೆಯದ ಕಾರಣ ಕಡಲೆ , ಶೇಂಗಾ, ಹಣ್ಣಿನ ಬೀಜಗಳು ಹಾಗೆ ಜಗಿಯದೇ ನುಂಗಲು ಪ್ರಯತ್ನಿಸುತ್ತವೆ/ರೆ. ಈ ತರಹದ ಸಂದರ್ಭಗಳಲ್ಲಿ ಪೂರ್ಣ ಪ್ರಮಾಣದ ಬೀಜ ಅಥವಾ ಅದರ ತುಂಡು ಶ್ವಾಸನಾಳವನ್ನು ಸೇರಿ ಬಿಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವಾದ ಆಟಿಕೆ ಸಾಮಾನಿನ ಭಾಗವಾಗಲಿ ಲೋಹದ ತುಂಡು, ಆಟಿಕೆ ಸೀಟಿ (Whistle), ಪೆನ್ನಿನ ಭಾಗ, ಆಭರಣದ ತುಣುಕು ಇನ್ನೂ ಮುಂತಾದ ವಸ್ತುಗಳು ಶ್ವಾಸನಾಳದಲ್ಲಿ ಹೋಗಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಮಯದಲ್ಲಿ ನುರಿತ ವೈದ್ಯರಿಂದ (Speciatists)ಶ್ವಾಸನಾಳದ ಎಂಡೋಸ್ಕೋಪ್‌ ಮಾಡಿ (Bronchoscopy)  ಈ ತರಹದ ವಸ್ತುಗಳನ್ನು ಹೊರಗೆ ತೆಗೆಯುತ್ತಾರೆ.ಆದರೆ ಕೆಲವೊಮ್ಮೆ ಎಂಡೋಸ್ಕೋಪಿಯಿಂದ ಸಾಧ್ಯವಾಗದಿದ್ದಲ್ಲಿ  ಸಂಕೀರ್ಣ ಶಸ್ತ್ರಚಿಕಿತ್ಸೆಗೊಳಪಡಿಸಿ ಸಿಕ್ಕಿ ಹಾಕಿಕೊಂಡ ವಸ್ತುವನ್ನು ಹೊರಗೆ ತೆಗೆಯಬೇಕಾಗುತ್ತದೆ.

ಇವುಗಳಲ್ಲದೆ ಕೆಲವೊಮ್ಮೆ ಮಕ್ಕಳು ಚಿಕ್ಕ ವಸ್ತುಗಳನ್ನು ಮೂಗಿನಲ್ಲಿ , ಕಿವಿಯಲ್ಲಿ ಹಾಗೂ ಜನನಾಂಗದಲ್ಲಿ ಹಾಕಿಕೊಳ್ಳುವ ಅಭ್ಯಾಸವನ್ನು ನಾವು ಕಾಣುತ್ತೇವೆ. ಆದ್ದರಿಂದ ಚಿಕ್ಕಮಕ್ಕಳನ್ನು ಬೆಳೆಸುವುದು ಹಾಗೂ ಸುರಕ್ಷಿತರನ್ನಾಗಿ ಮಾಡುವುದು ತಂದೆ-ತಾಯಂದಿರ ಕಾಳಜಿಯಲ್ಲಿರಬೇಕು. ಮಕ್ಕಳು ಜತೆಗೆ ಆಟ ಆಡುವುದು ಹಾಗೂ ರಚನಾತ್ಮಕ ಚಟುವಟಿಕೆಗಳಲ್ಲಿ  ಪೋಷಕರು ಹೆಚ್ಚಿನ ಸಮಯವನ್ನು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ  ಪೋಷಕರಿಗೂ ಸುರಕ್ಷಿತ ಪರಿಸರ ನಿರ್ಮಿಸಲು ತರಬೇತಿಯ ಆವಶ್ಯಕತೆ ಇದೆ. ಶಾಲೆಗಳಲ್ಲಿ ಪೋಷಕರ ಸಭೆಯಲ್ಲಿ ನುರಿತ ವೈದ್ಯರಿಂದ ಅರಿವನ್ನು ಮೂಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು  ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸ ಬಹುದು.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 
ಮುಖ್ಯಸ್ಥರು, ಮಕ್ಕಳ ಶಸ್ತ್ರಚಿಕಿತ್ಸಾ  ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.

– ಡಾ| ಜಯತೀರ್ಥ ಜೋಶಿ, 
ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರು
ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next