Advertisement

ಮಾವಿನ ವಾಟೆ, ಮರದಲಿ ಕೋಟೆ… ಮತ್ತೆ ಬರಲಾರವೇ ಆ ಕ್ಷಣಗಳು?

12:38 PM Nov 18, 2019 | Nagendra Trasi |

“ಕಪ್ಪೆ ಕರ ಕರ, ತುಪ್ಪ ಜಲಿ ಜಲಿ

Advertisement

ಮಾವಿನ ವಾಟೆ, ಮರದಲಿ ಕೋಟೆ“…ಅಂದು ಎಳೆ ಹೃದಯಗಳನ್ನು  ತಲುಪಿದ್ದ ಈ ಮುದ್ದಾದ ಸಾಲುಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಅಲ್ವಾ ಗೆಳೆಯರೆ?!  ಬಾಲ್ಯದಲ್ಲಿ ಕಳೆದ ಆ ಸುಂದರ ಕ್ಷಣಗಳಿಗಾಗಿ ಮನ ಹಂಬಲಿಸುತ್ತಿದೆ. ಮತ್ತೆ ಬರಲಾರವೇ ಆ ಕ್ಷಣಗಳು?!

ಬಾಲ್ಯಕಾಲಕ್ಕಂತೂ ಮರಳಲಾರೆ. ಆದರೆ ಆ ಸಿಹಿ ನೆನಪುಗಳು ನನ್ನೊಂದಿಗಿವೆ. ನಾನು ಮನದಲ್ಲೇ ಬಾಲ್ಯಲೋಕದ ಕದ ತಟ್ಟಿದೆ. ಎಲ್ಲಾ ನೆನಪುಗಳು ಕಣ್ಮುಂದೆ ಕುಣಿಯುತ್ತಾ ಬಂದವು.

ಹಠಮಾರಿಯಾಗಿದ್ದ ನಾನು ಅಮ್ಮನ ಕೈಯಿಂದ ಸದಾ ಪೆಟ್ಟು ತಿನ್ನುತ್ತಿದ್ದೆ. ಆದರೆ ಶಾಲೆಯಲ್ಲಿ ಗುರುಗಳ ವಿಧೇಯ ಶಿಷ್ಯೆ! ನಾನು ಬಾಲ್ಯದಲ್ಲಿ ಕಲಿತ ಜೀವನ ಪಾಠಗಳನ್ನು ಎಂದಿಗೂ ಮರೆಯಲಾರೆ.  ಉತ್ತರ ತಪ್ಪಾಯಿತೆಂದು ೧೦೦ ಸಲ ನನ್ನ ಕೈಯಿಂದ  ಬರೆಯಿಸಿದ ಅಮ್ಮನ ಆ ‘ಹಿಟ್ಲರ್’ ನಡೆಯೇ ಈಗ ಮುದ್ದಾದ ಬರವಣಿಗೆಗೆ ಬುನಾದಿಯಾಯಿತು. ಆಂಗ್ಲ ವ್ಯಾಕರಣದ ತರಗತಿಯಲ್ಲಿ ಕಿವಿ ಹಿಂಡಿ ಕಲಿಸುತ್ತಿದ್ದ ಗುರುಗಳ ಕೃಪೆಯಿಂದ ಈಗ ಆತ್ಮವಿಶ್ವಾಸದಿಂದ ಎಲ್ಲರೆದುರು ಮಾತನಾಡಬಲ್ಲೆ. ಇಂತಹ ಶಿಕ್ಷಕರನ್ನು ಪಡೆದ ನಾನೇ ಧನ್ಯ! ನನ್ನ ಎಲ್ಲಾ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇತ್ತು. ಬದುಕಿನ ಹೊಸ ಸಾಧನೆಗಳಿಗೆ ಪ್ರೇರಣೆ ಸಿಕ್ಕಿದ್ದೇ ಅವರಿಂದ.

ಬಾಲ್ಯದ ಬಹುಪಾಲು ಸಮಯವನ್ನು ನಾನು ಕಥೆ ಪುಸ್ತಕಗಳೊಂದಿಗೆ ಕಳೆಯುತ್ತಿದ್ದೆ. ಈಗಲೂ ಸಮಯ ಸಿಕ್ಕಾಗ ಓದುತ್ತೇನೆ. ಬಾಲ್ಯದಲ್ಲಿ ಆಡುತ್ತಿದ್ದ ಆಟ, ಕೇಳುತ್ತಿದ್ದ ಸಂಗೀತ, ನೋಡುತ್ತಿದ್ದ ಕಾರ್ಟೂನ್  ಈಗಲೂ ನನ್ನ ಪ್ರಿಯ ಸಂಗತಿಗಳಾಗಿಯೇ ಉಳಿದಿವೆ.

Advertisement

ಬಾಲ್ಯದಲ್ಲಿ ನಾ ಮಾಡಿದ ಕಪಿಚೇಷ್ಠೆಗಳು  ಹಲವು. ಅದಕ್ಕೆ ಸಾಥ್ ಕೊಡುತ್ತಿದ್ದದ್ದು ನನ್ನ ಕಪಿಸೇನೆ!  “ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು” ಎಂಬ ಚನ್ನವೀರ ಕಣವಿ ಅವರ ಸಾಲುಗಳನ್ನು ಕೇಳುತ್ತಿದ್ದಂತೆ ನನ್ನೆಲ್ಲಾ ಬಾಲ್ಯದ ಗೆಳೆಯರ ಮುಖಗಳು ಕಣ್ಮುಂದೆ ಬರುತ್ತವೆ. ನಾವು ಮಾಡುತ್ತಿದ್ದ ಚೇಷ್ಟೆಗಳಿಂದ ಶ್ವಾನಗಳೂ ಸೇರಿದಂತೆ ಹಲವು ಅಪಾಯಗಳು ಬೆನ್ನಟ್ಟುತ್ತಿದ್ದವು. ಅಂದ ಹಾಗೆ ನಾಯಿಗಳನ್ನು ಕಂಡರೆ ನನಗೆ ಒಂದು ರೀತಿಯ ಗೌರವ ( ಭಯ)!

ಬಾಲ್ಯಕಾಲದ ನೆನಪಿನ ಸಮುದ್ರದಲ್ಲಿ ಮುಳುಗೇಳುವ ಖುಷಿಯೇ ಬೇರೆ! “ಕಾಲೇಜು ಹುಡುಗಿಯಾದರೂ ಮಕ್ಕಳಾಟಿಕೆ ಬಿಟ್ಟಿಲ್ಲ” ಎಂಬ ಅಮ್ಮನ ನಿಂದನೆ ನನಗೆ ಹೊಗಳಿಕೆಯಂತೆ ಅನಿಸುತ್ತದೆ. ಮತ್ತೆ ಮಗುವಾಗುವಾಸೆ! ಸಾಧ್ಯವೇ?! ಇರಲಿ ಗೆಳೆಯರೇ… ನಾವೆಷ್ಟು ದೊಡ್ಡ ವ್ಯಕ್ತಿಗಳಾದರೂ ಬಾಲ್ಯವನ್ನು ಮರೆಯದಿರೋಣ ಏನಂತೀರಿ?!!

 *ನಯನ, ತೃತೀಯ ಬಿಎಸ್ಸಿ

 ಎಂಜಿಎಂ ಕಾಲೇಜು,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next