ಬೆಂಗಳೂರು: ಮಾನವ ಕಳ್ಳ ಸಾಗಣೆ ಆರೋಪ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸಂಪಿಗೇಹಳ್ಳಿ ಸಮೀಪದ ಅಮರ ಜ್ಯೋತಿ ಲೇಔಟ್‌ನ ಅಶ್ವತ್ಥ ನಗರದಲ್ಲಿರುವ ಅನಾಥಾಶ್ರಮದ ಮೇಲೆ ದಾಳಿ ನಡೆಸಿ ಪರಿಶೀಲಿಸಿದೆ.
ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ಈ ವೇಳೆ 20 ಬಾಲಕಿಯರು ಪತ್ತೆ ಆಗಿದ್ದಾರೆ. ಈ ಪೈಕಿ ಕೆಲವರು ಅನಾಥರಾಗಿದ್ದರೆ, ಇನ್ನು ಕೆಲವರಿಗೆ ಪೋಷಕರಿದ್ದು, ಅನಾಥವಾಗಿ ಇಲ್ಲಿಯೇ ವಾಸವಾಗಿದ್ದಾರೆ. ಈ ಅನಾಥಾಶ್ರಮದ ಬಗ್ಗೆ ಕೆಲವೊಂದು ದೂರುಗಳು ಬಂದಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಕೆಲ ಮಕ್ಕಳನ್ನು ವಿಚಾರಿಸಲಾಗಿದ್ದು, ಆಯೋಗದ ಮಹಿಳಾ ಆಪ್ತ ಸಮಾಲೋಚಕಿಯರು ಮಕ್ಕಳ ಜತೆ ಮಾತಾಡಿದ್ದಾರೆ. ಆಗ ಒಬ್ಬ ಬಾಲಕಿ, ಅನಾಥಾಶ್ರಮದ ಮುಖ್ಯಸ್ಥೆ ಸಲ್ಮಾ ಎಂಬಾಕೆ ಕುವೈತ್‌ನಲ್ಲಿರುವ ಯುವಕರ ಜತೆ ಮದುವೆ ಮಾಡುವ ಉದ್ದೇಶದಿಂದ ನಮ್ಮನ್ನು ಬೆಳೆಸುತ್ತಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳನ್ನು ಮದುವೆ ನೆಪದಲ್ಲಿ ಗಲ್ಫ್ ದೇಶಗಳಿಗೆ ಕಳ್ಳ ಸಾಗಾಣೆ ಮಾಡುತ್ತಿರುವುದು ಪತ್ತೆಯಾಗಿದ್ದು, ಮಾನವ ಕಳ್ಳ ಸಾಗಣೆದಾರರ ಜತೆ ಅನಾಥಾಶ್ರಮ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಪ್ರಿಯಾಂಕ್ ಕಂಗೂನ್ ಹೇಳಿಕೆ ನೀಡಿದ್ದಾರೆ.ಅಲ್ಲದೆ, ಈ ಸಂಬಂಧ ಸಂಪಿಗೇಹಳ್ಳಿ ಠಾಣೆಗೆ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಪೊಲೀಸರು ಮಕ್ಕಳ ರಕ್ಷಣಾ ನಿರ್ದೇಶನಾಲಯ (ಸಿಡಬ್ಲೂéಸಿ)ಕ್ಕೆ ದೂರನ್ನು ವರ್ಗಾಯಿಸಿದ್ದಾರೆ. ನಿರ್ದೇಶನಾಲಯ ಅಧಿಕಾರಿಗಳು ನೀಡುವ ಸೂಚನೆಯ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು. ಈ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ. ಪ್ರಮುಖವಾಗಿ ಅನಾಥಾಶ್ರಮ ನಡೆಸಲು ಯಾವುದೇ ಪರವಾನಗಿ ಇಲ್ಲ ಎಂದು ಹೇಳಲಾಗಿದೆ.
ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನ:ಪ್ರಿಯಾಂಕ್:
ದಾಳಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಕಂಗೂನ್, ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲೂéಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬ ಮಹಿಳೆ, ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನಿಸಿದ್ದಾರೆ. ದಾಳಿ ವೇಳೆ ಕೆಲ ಹುಡುಗಿಯರು ಮಾತನಾಡಿದ್ದು, ಸಲ್ಮಾ ಎಂಬ ಮಹಿಳೆ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.