ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯಕ್ಕೆ ಆದ್ಯತೆ ಮತ್ತು ಉತ್ತೇಜನ ಸಿಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳ ಕೂಟದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದರೆ ಅದಕ್ಕೆ ತಗಲುವ ಅರ್ಧ ವೆಚ್ಚವನ್ನು ಪರಿಷತ್ತಿನಿಂದ ಭರಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ಅಖೀಲ ಕರ್ನಾಟಕ ಮಕ್ಕಳ ಕೂಟ ಸಂಸ್ಥಾಪಕಿ “ಆರ್.ಕಲ್ಯಾಣಮ್ಮ ಅವರ 125ನೇ ಜನ್ಮದಿನ’ದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯಕ್ಕೆ ಮೊದಲು ಆದ್ಯತೆ ನೀಡಬೇಕು.
ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯದ ರುಚಿ ಹಚ್ಚಬೇಕು. ಇದರಿಂದ ಅವರನ್ನು ಸಾಹಿತ್ಯಾಸಕ್ತರನ್ನಾಗಿ ರೂಪಿಸಬಹುದು. ಆದ್ದರಿಂದ ಮಕ್ಕಳ ಕೂಟ ಮಕ್ಕಳ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಿ ಉತ್ತೇಜನ ನೀಡಬೇಕು ಎಂದರು.
ಆರ್.ಕಲ್ಯಾಣಮ್ಮ ಅವರು ರಚಿಸಿರುವ ಮಕ್ಕಳ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಕೊಟ್ಟರೆ ಪರಿಷತ್ತಿನಿಂದ ಮುದ್ರಣ ಮಾಡಿಕೊಡಲಾಗುವುದು. ಕಲ್ಯಾಣಮ್ಮನವರು ಮಕ್ಕಳ ಕುರಿತು ಅನೇಕ ಕೃತಿಗಳು ರಚಿಸಿದ್ದಾರೆ. ಆದರೆ, ಅವುಗಳಲ್ಲಿ ಬಹುತೇಕ ಪುಸ್ತಕಗಳ ಇಂದು ನಾಶವಾಗಿವೆ. ಹೀಗಾಗಿ ಅವರು ರಚಿಸಿರುವ ಎಲ್ಲ ಪುಸ್ತಕಗಳನ್ನು ಒಂದು ತಿಂಗಳೊಳಗೆ ಸಂಗ್ರಹಿಸಿ ನೀಡಿದರೆ ಪ್ರಕಟಿಸುತ್ತೇವೆ ಎಂದು ಹೇಳಿದರು.
ಕಲ್ಯಾಣಮ್ಮ ಅವರು ಮಕ್ಕಳು ಹಾಗೂ ಮಹಿಳೆಯರ ಏಳಿಗೆಗಾಗಿ ಸಾಕಷ್ಟು ದುಡಿದಿದ್ದಾರೆ. ಸಮಾಜಕ್ಕಾಗಿ ಜೀವನದುದ್ದಕ್ಕೂ ತ್ಯಾಗಮಯ ಹೋರಾಟ ನಡೆಸಿದ್ದಾರೆ. ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ನಾಡು-ನುಡಿಗಾಗಿ ಅವಿರತವಾಗಿ ದುಡಿದ ಕಲ್ಯಾಣಮ್ಮ ನಿಜವಾಗಿ ಆದರ್ಶ ಮಹಿಳೆ ಎಂದು ಬಳಿಗಾರ್ ಬಣ್ಣಿಸಿದರು.
ಸಮಾರಂಭದಲ್ಲಿ ವಕೀಲ ಎ.ಎಸ್.ನಾಗಭೂಷಣ್‌ರಾವ್ ಹಾಗೂ ಲೇಖಕ ಡಾ.ಬಿ.ಎಸ್.ಸ್ವಾಮಿ ಅವರಿಗೆ “ಆರ್.ಕಲ್ಯಾಣಮ್ಮ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಮಕ್ಕಳ ಕೂಟದ ಕಾರ್ಯಾಕಾರಿ ಸಮಿತಿ ಸದಸ್ಯ ಪ್ರೊ.ಅಶ್ವತ್ಥನಾರಾಯಣ, ಶ್ರೀಧರ್ ಇನ್ನಿತರರು ಇದ್ದರು.