Advertisement

ಸರಕಾರಿ ಶಾಲೆಗಳಿಗೆ ಮನಸೋತ ಮಕ್ಕಳು

05:30 PM Jun 05, 2022 | Team Udayavani |

ಜಮಖಂಡಿ: ರಬಕವಿ-ಬನಹಟ್ಟಿ ಮತ್ತು ಜಮಖಂಡಿ ಅವಳಿ ತಾಲೂಕಿನಲ್ಲಿ ಶೇ. 68 ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿದೆ.

Advertisement

ಅಂದಾಜು 69501ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಳಿ ತಾಲೂಕಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರವೇಶ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಅವಳಿ ತಾಲೂಕಿನಲ್ಲಿ ಸರಕಾರಿ ಶಾಲೆಗಳ ಕಟ್ಟಡ ಮತ್ತು ಮೂಲಭೂತ ಸೌಲಭ್ಯ ಕೊರತೆ ಇದ್ದರೂ ಶಿಕ್ಷಣ ಕಲಿಕಾ ಗುಣಮಟ್ಟ ಉತ್ತಮವಾಗಿರುವುದನ್ನು ಗಮನಿಸಿರುವ ವಿದ್ಯಾರ್ಥಿಗಳ ಪಾಲಕರು-ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡದೇ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ಮಕ್ಕಳಿಗೆ ಸರಕಾರ ಎಲ್ಲ ಸೌಲಭ್ಯಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಶೇ. 5ರಿಂದ 8 ಮಕ್ಕಳ ದಾಖಲಾತಿ ಹೆಚ್ಚಾಗುವ ಸಾಧ್ಯತೆ ಇದೆ.

ಅವಳಿ ತಾಲೂಕಿನಲ್ಲಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ಅಂದಾಜು 575 ಪ್ರಾಥಮಿಕ- ಪ್ರೌಢಶಾಲೆಗಳಲ್ಲಿ ಅಂದಾಜು 104986 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆಯಿದೆ. ಜೂನ್‌ ಅಂತ್ಯದವರೆಗೆ ವಿದ್ಯಾರ್ಥಿಗಳ ದಾಖಲಾತಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಸರಕಾರಿ ಶಾಲೆಗಳಲ್ಲಿ 1746 ಶಿಕ್ಷಕರಲ್ಲಿ 1229 ಶಿಕ್ಷಕರು ಸೇವೆಯಲಿದ್ದು, 250ಕ್ಕೂ ಹೆಚ್ಚು ಅತಿಥಿ ಶಿಕ್ಷಕರಿಂದ ಪಠ್ಯಬೋಧನೆ ನಡೆಯಲಿದೆ. ಪ್ರೌಢಶಾಲೆಯಲ್ಲಿ 521 ಶಿಕ್ಷಕರಲ್ಲಿ 410 ಶಿಕ್ಷಕರು ಸೇವೆಯಲ್ಲಿದ್ದು, 60ಕ್ಕೂ ಹೆಚ್ಚು ಅತಿಥಿ ಶಿಕ್ಷಕರ ನೇಮಕ ನಡೆಯಲಿದೆ.

ಅವಳಿ ತಾಲೂಕಿನಲ್ಲಿ 278 ಸರಕಾರಿ ಪ್ರಾಥಮಿಕ, 46 ಪ್ರೌಢಶಾಲೆಗಳಿದ್ದು ಪ್ರಾಥಮಿಕ ವಿಭಾಗದಲ್ಲಿ 40336 ಮತ್ತು ಪ್ರೌಢವಿಭಾಗದಲ್ಲಿ 15650 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ಅವಳಿ ತಾಲೂಕಿನ 29 ಅನುದಾನಿತ ಪ್ರಾಥಮಿಕ ಮತ್ತು 22 ಪ್ರೌಢಶಾಲೆಗಳಿದ್ದು, ಪ್ರಾಥಮಿಕ ಶಾಲೆಯಲ್ಲಿ 6280 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 7235 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ಅವಳಿ ತಾಲೂಕಿನಲ್ಲಿ ಪ್ರತಿಷ್ಠಿತ ಖಾಸಗಿ 158 ಪ್ರಾಥಮಿಕ ಮತ್ತು 42 ಪ್ರೌಢಶಾಲೆಗಳಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ 27945, ಪ್ರೌಢಶಾಲೆಯಲ್ಲಿ 7540 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಿದ್ಧತೆ ನಡೆಸಿದ್ದಾರೆ.

Advertisement

ಅವಳಿ ತಾಲೂಕಿನ ಬರುವ 375 ಸರಕಾರಿ ಶಾಲೆಗಳಲ್ಲಿ 40 ಶಾಲೆಗಳಲ್ಲಿ ಅಲ್ಪ ಪ್ರಮಾಣ ದುರಸ್ತಿ ಕೆಲಸವಿದ್ದು, 2 ಶಾಲೆಗಳು ಕಲಿಕೆಗೆ ಅಸಾಧ್ಯವಾದ ಪರಿಸ್ಥಿತಿಯಲ್ಲಿವೆ. ಜಮಖಂಡಿ ತಾಲೂಕಿನ ಲಿಂಗನೂರ ಎಲ್‌.ಟಿ. ಶಾಲೆಯ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಮುಂಜಾಗ್ರತೆ ಕ್ರಮವಾಗಿ ಕಲಿಕೆ ಸ್ಥಗಿತಗೊಂಡಿದೆ.

ತಾಲೂಕಿನ ಬಿದರಿ ಗ್ರಾಮದಲ್ಲಿ 15 ದಿನದ ಹಿಂದೆ ಧಾರಾಕಾರ ಮಳೆ ಬಿರುಗಾಳಿಗೆ ಸರಕಾರಿ ಪ್ರಾಥಮಿಕ ಶಾಲೆ ಮೇಲ್ಛಾವಣಿ ಕಿತ್ತಿರುವ ಹಿನ್ನೆಲೆಯಲ್ಲಿ ಎರಡು ಶಾಲೆಗಳಲ್ಲಿ ಕಲಿಕಾ ತೊಂದರೆಯಿದೆ. ಉಳಿದ 373 ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದು ಕಲಿಕಾ ಚಟುವಟಿಕೆಗಳು ಆರಂಭಗೊಂಡಿವೆ. ಸರಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಬೇಕೆಂಬ ಆಸೆ ಕೂಡ ವಿದ್ಯಾರ್ಥಿಗಳಲ್ಲಿ ಮೂಡಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಕೊರೊನಾ ನೋವು ಮರೆಯಲು ಯತ್ನಿಸುತ್ತಿದ್ದಾರೆ.

ನಗರದ ಸರಕಾರಿ ಪಿ.ಬಿ.ಹೈಸ್ಕೂಲ್‌ದಲ್ಲಿ 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಶಾಲಾ ಶಿಕ್ಷಕರು ನಮಗೆ ತಿಳಿಸುವ ಹಾಗೆ ಪಠ್ಯ ಬೋಧನೆ ಮಾಡುತ್ತಾರೆ. ನಾವು ಅಧ್ಯಯನದಲ್ಲಿ ತಪ್ಪಿದ ಸಂದರ್ಭದಲ್ಲಿ ನಮ್ಮ ಕೈಹಿಡಿದು ಸರಿಪಡಿಸುವ ಮೂಲಕ ಬುದ್ಧಿ ಹೇಳುತ್ತಿದ್ದಾರೆ. ಕ್ರೀಡೆ, ಪಠ್ಯ-ಪಠ್ಯೇತರ ಚಟುವಟಿಕೆಗಳು ನಮ್ಮ ಬೆಳವಣಿಗೆಗೆ ಅನುಕೂಲವಾಗಿದೆ.  ಆತ್ಯ, ಅಭಿಷೇಕ ರಾವಳ ವಿದ್ಯಾರ್ಥಿಗಳು, ಜಮಖಂಡಿ.

ಅವಳಿ ತಾಲೂಕಿನಲ್ಲಿ ಶಿಕ್ಷಕರಿಗೆ ಕಲಿಕಾ ಗುಣಮಟ್ಟದ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದೆ. ಕಳೆದ ವರ್ಷದಿಂದ ಕೊರೊನಾದಿಂದ ಶಿಕ್ಷಣ ಕ್ಷೇತ್ರ ಕುಸಿತಗೊಂಡ ಹಿನ್ನೆಲೆಯಲ್ಲಿ ಸರಳ ಪಠ್ಯಬೋಧನೆ ಸಹಿತ ಪಠ್ಯ ಚಟುವಟಿಕೆ ನಿಗದಿತ ಅವ ಧಿಯಲ್ಲಿ ಪೂರ್ಣಗೊಳಿಸುವಂತೆ ಮಾಹಿತಿ ನೀಡಲಾಗಿದೆ. ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ನಡುವೆಯೂ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಪರಿಣಾಮ ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದೇವೆ. -ಸಿ.ಎಂ.ನೇಮಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ

 -ಮಲ್ಲೇಶ ರಾ. ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next