Advertisement

ಮಕ್ಕಳು ವಿಕಾಸದ ಭಾಗವಾಗಲಿ: ಡಾ|ಪಾಟೀಲ

12:14 PM May 22, 2019 | Suhan S |

ಧಾರವಾಡ: ಮಕ್ಕಳನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡದೇ ವಿಕಾಸದ ಭಾಗವಾಗಿ ನೋಡುವ ಅಗತ್ಯವಿದೆ ಎಂದು ಹಿರಿಯ ಹೋರಾಟಗಾರ ಡಾ| ಸಿದ್ಧನಗೌಡ ಪಾಟೀಲ ಹೇಳಿದರು.

Advertisement

ಚಿಲಿಪಿಲಿ ಗುಬ್ಬಚ್ಚಿ ಗೂಡು ಬಳಗ ವತಿಯಿಂದ ನಗರದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಲೋಕದ ಮನಸುಗಳ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅಭಿವೃದ್ಧಿ ದೃಷ್ಟಿಯಿಂದ ಅಷ್ಟೇ ನೋಡುತ್ತಿರುವುದು ವಿಷರ್ಯಾಸವೇ ಸರಿ. ಇದರಿಂದ ಮಕ್ಕಳು ಏಕಮುಖೀಯಾಗುತ್ತಿದ್ದು, ಪೋಷಕರಿಗೂ ಇದೇ ಬೇಕಿದೆ. ಇದರಿಂದ ಮಗುವಿನ ವಿಕಾಸದ ಜೀವಸತ್ವಗಳೇ ನಷ್ಟವಾಗುತ್ತಿರುವುದು ಯಾರಿಗೂ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಶಿಕ್ಷಕರಲ್ಲಿ ಎರಡು ಭಾಷೆಗಳಿದ್ದು, ಒಂದು ಕರಳು ಭಾಷೆ, ಇನ್ನೊಂದು ಕೊರಳು ಭಾಷೆ. ಮಕ್ಕಳನ್ನು ಮುಂದಿನ ದೇಶದ ಪ್ರಜೆಗಳಾಗಿ, ಸ್ವಂತ ಮಕ್ಕಳಂತೆ ವಿಕಾಸ ಮಾಡುವುದು ಕರಳು ಭಾಷೆ. ಕೊರಳು ಭಾಷೆಯ ಶಿಕ್ಷಕರು ಸಿಲೆಬಸ್‌ ಮುಗಿಸಲು ಮಾತ್ರ ಪ್ರಯತ್ನಿಸುತ್ತಾರೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕರಳು ಭಾಷೆಯ ಶಿಕ್ಷಕರ ಅವಶ್ಯಕತೆ ಇದೆ ಎಂದರು.

ಮೇ ತಿಂಗಳು ಶಿಕ್ಷಣ ಕ್ಷೇತ್ರ ವ್ಯಾಪಾರದ ದೊಡ್ಡ ಸುಗ್ಗಿ ಕಾಲ. ಈಗಂತೂ ಶಿಕ್ಷಣದಲ್ಲೂ ಮಕ್ಕಳನ್ನು ವ್ಯಾಪಾರದ ಕೇಂದ್ರಗಳಾಗಿ ನೋಡಲಾಗುತ್ತಿದೆ. ಬ್ರಿಟಿಷರ್‌ ಬಿಟ್ಟು ಹೋದ ಶಿಕ್ಷಣ ವಿಧಾನಗಳನ್ನು ಇಂದಿಗೂ ಬದಲಾವಣೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬೆಂಗಳೂರು ವಿಜಯ ನಗರದ ಬಿಂಬ ಸಂಸ್ಥೆಯ ಶೋಭಾ ವೆಂಕಟೇಶ ಮಾತನಾಡಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಸಿಗುವ ಅವಕಾಶ, ಮೀಸಲಾತಿಯನ್ನು ರಂಗಭೂಮಿಯಲ್ಲಿ ಭಾಗವಹಿಸುವ ಮಕ್ಕಳಿಗೂ ನೀಡುವಂತೆ ಹಕ್ಕೊತ್ತಾಯ ಮಂಡಿಸಬೇಕು. ಇದರಿಂದ ಮುಂಬರುವ ಯುವ ಕಲಾವಿದರಿಗೆ ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದರು.

ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಶಿಕ್ಷಕರು, ವೈದ್ಯರು, ರಾಜಕಾರಣಿಗಳು ಮಕ್ಕಳ ಕುರಿತು ಚಿಂತನೆ ನಡೆಸಬೇಕು. ಜತೆಗೆ ರಾಜ್ಯ ಸರಕಾರಗಳು ಮಂಡಿಸುವ ಬಜೆಟ್‌ನಲ್ಲಿ ಮಕ್ಕಳಿಗಾಗಿಯೇ ಪ್ರತೇಕ ಬಜೆಟ್ ಮಂಡಿಸಬೇಕು. ಅಂದಾಗ ಮಕ್ಕಳ ವಿಕಾಸವಾಗಲು ಸಾಧ್ಯ ಎಂದರು.

ಇದೇ ವೇಳೆ ಮಕ್ಕಳ ಸಾಹಿತ್ಯ ಸಮೃದ್ಧಿ ಪೋಷಣೆ, ಬೆಂಬಲ ವಿಷಯ ಕುರಿತು, ಮಕ್ಕಳ ಪರ ಸಂಘಟನೆಗಳ ಬಲವರ್ಧನೆ-ಸವಾಲುಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾಹಿತಿಗಳು ಚರ್ಚೆ ನಡೆಸಿದರು.

ಹಿರೇಮಲ್ಲೂರ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ, ಸಾಹಿತಿಗಳಾದ ಚಂದ್ರಕಾಂತ ಕರದಳ್ಳಿ, ಟಿ.ಎಸ್‌.ನಾಗರಾಜಶೆಟ್ಟಿ, ಕೃಷ್ಣಮೂರ್ತಿ ಬಿಳಿಗೆರಿ, ನಿಂಗಣ್ಣ ಕುಂಟಿ, ಗಿರೀಶ ಜಕಾಪುರೆ, ಕೆ.ಎಚ್,ನಾಯಕ್‌, ವಿಶ್ವನಾಥ ಮರ್ತೂರ, ಪ.ಗು.ಸಿದ್ದಾಪೂರ, ಡಾ| ಆನಂದ ಪಾಟೀಲ, ಜಹಾನ್‌ ಆರ್‌, ನಭಾ ಒಕ್ಕುಂದ, ವಿವೇಕಾನಂದ ಪಾಟೀಲ ಸೇರಿದಂತೆ ಇತರರು ಇದ್ದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಕೀರ್ತಿವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next