Advertisement

ಶಾಲೆಗೆ ಹೋಗಲು ನಿತ್ಯ 5 ಕಿಮೀ ನಡೆಯುವ ಮಕ್ಕಳು!

11:40 AM Jul 10, 2018 | Team Udayavani |

ಚಾಮರಾಜನಗರ: ಪಕ್ಕದ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಬಸ್‌ ಸೌಲಭ್ಯವಿಲ್ಲದ ಕಾರಣ ಗುಂಡ್ಲುಪೇಟೆ ತಾಲೂಕು ಗರಗನಹಳ್ಳಿ ವಿದ್ಯಾರ್ಥಿಗಳು ಒಟ್ಟು 5 ಕಿ.ಮೀ. ನಡೆದುಹೋಗಬೇಕಾದ ಪರಿಸ್ಥಿತಿಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನುಕೂಲ ಇರುವವರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆ.

Advertisement

25 ಕಿ.ಮೀ. ದೂರದ ಹಳ್ಳಿಗಳಿಗೂ ಬಂದು ಖಾಸಗಿ ಶಾಲೆಗಳ ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುತ್ತವೆ. ಆದರೆ, ಬಡ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ತಮ್ಮೂರಿನಲ್ಲಿ ಕಿರಿಯ ಪ್ರಾಥಮಿಕ ಶಾಲೆ ಓದಿ, 5ನೇ ತರಗತಿ ನಂತರ ಅಕ್ಕಪಕ್ಕದ ಊರುಗಳ ಸರ್ಕಾರಿ ಶಾಲೆಗೆ ಹೋಗಿ ಕಲಿಯುತ್ತಿದ್ದಾರೆ. 

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಿದೆ. 6 ರಿಂದ 8ನೇ ತರಗತಿಯವರೆಗೆ ಕಲಿಯಲು ಎರಡೂವರೆ ಕಿ.ಮೀ. ದೂರದ ಅಗತಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕು. ಆದರೆ, ಅಲ್ಲಿಗೆ ಹೋಗಲು ಸೂಕ್ತ ಬಸ್‌ ಸೌಲಭ್ಯ ಇಲ್ಲ. ಈ ಮಾರ್ಗದಲ್ಲಿ ವಿರಳ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇದೆ. ರಸ್ತೆಯೂ ತಕ್ಕಮಟ್ಟಿಗೆ ಚೆನ್ನಾಗೇ ಇದೆ. ಆದರೆ, ಮಕ್ಕಳ ಶಾಲಾ ಸಮಯಕ್ಕೆ ಬಸ್‌ ಸಂಚಾರ ಇಲ್ಲ. 

ಮಳೆಯಲ್ಲೇ ಸಂಚಾರ: ಹೀಗಾಗಿ ಗರಗನಹಳ್ಳಿಯಿಂದ ಅಗತಗೌಡನಹಳ್ಳಿಗೆ ಬರುವ ಸುಮಾರು 20-25 ವಿದ್ಯಾರ್ಥಿಗಳು ಬೆಳಗ್ಗೆ ಎರಡೂವರೆ ಕಿ.ಮೀ. ಹಾಗೂ ಸಂಜೆ ಎರಡೂವರೆ ಕಿ.ಮೀ. ನಡೆಯಬೇಕಾಗಿದೆ. ಬಿಸಿಲಿರಲಿ, ಮಳೆಯಿರಲಿ ನಡೆದೇ ಶಾಲೆಗೆ ಹೋಗಿ ಬರಬೇಕಾದ ಅನಿವಾರ್ಯತೆ ಈ ಮಕ್ಕಳದು.

ಮಳೆಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಕೊಡೆ ಹಿಡಿದು ನಡೆದು ಬಂದರೆ, ಇನ್ನು ಕೆಲವು ಮಕ್ಕಳಿಗೆ ಕೊಡೆ ಕೊಳ್ಳುವಷ್ಟೂ ಶಕ್ತಿಯಿಲ್ಲದೇ ಗೋಣಿಚೀಲ, ಪ್ಲಾಸ್ಟಿಕ್‌ ಚೀಲಗಳನ್ನು ತಲೆಗೆ ಗುಬ್ಬರ ಹಾಕಿಕೊಂಡು ಶಾಲೆಗೆ ಬರುತ್ತಾರೆ. ಅಲ್ಲದೇ, ಗುಂಡ್ಲುಪೇಟೆಯಿಂದ ಅಗತಗೌಡನಹಳ್ಳಿ ಶಾಲೆಗೆ ಶಿಕ್ಷಕರು ಬರುತ್ತಿದ್ದು, ಅವರು ಸಹ ಗರಗನಹಳ್ಳಿ ಗೇಟ್‌ ವರೆಗೆ ಬೇರೆ ಬಸ್‌ನಲ್ಲಿ ಬಂದು, ಇಳಿದು ಒಂದೂವರೆ ಕಿ.ಮೀ. ದೂರ ನಡೆದು ಹೋಗಬೇಕಾಗಿದೆ. 

Advertisement

ಶಾಲಾ ಸಮಯಕ್ಕೆ ಬಸ್‌ ಬಿಟ್ಟರೆ ಅನುಕೂಲ: ಗುಂಡ್ಲುಪೇಟೆಯಿಂದ ಅಗತಗೌಡನಹಳ್ಳಿಗೆ ಬೆಳಗ್ಗೆ 8.45ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಇದೆ. ಈ ಬಸ್‌ ಗರಗನಹಳ್ಳಿ ಗೇಟ್‌ಗೆ ಬೆಳಿಗ್ಗೆ 9 ರಿಂದ 9.15ರ ವೇಳೆಗೆ ಬಂದರೆ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ಸಂಜೆ ಶಾಲೆ ಬಿಡುವ ಸಮಯ ಅನುಸರಿಸಿ ಇನ್ನೊಂದು ಬಸ್‌ ಸಂಚರಿಸಿದರೆ 25 ವಿದ್ಯಾರ್ಥಿಗಳು ನಡೆದುಹೋಗುವುದು ತಪ್ಪುತ್ತದೆ ಎನ್ನುತ್ತಾರೆ ಮಕ್ಕಳ ಪೋಷಕರು.

ಅಪಾಯಕಾರಿ ರಸ್ತೆ ದಾಟಬೇಕಾದ ಮಕ್ಕಳು: ಗರಗನಹಳ್ಳಿಯಿಂದ ಅಗತಗೌಡನಹಳ್ಳಿಗೆ ಹೋಗಬೇಕಾದರೆ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 212 ಅನ್ನು ಈ ಮಕ್ಕಳು ಕ್ರಾಸ್‌ ಮಾಡಬೇಕು. ಮೈಸೂರಿನಿಂದ ಕೇರಳದ ಕಲ್ಲಿಕೋಟೆ, ತಮಿಳುನಾಡಿನ ಊಟಿಗೆ ಹೋಗುವ ಈ ರಸ್ತೆ ಸದಾ ವಾಹನಗಳ ಒತ್ತಡದಿಂದ ಕೂಡಿರುತ್ತದೆ.

ಈ ರಸ್ತೆಯಲ್ಲಿ ವಾರಕ್ಕೆರಡು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇಂಥ ರಸ್ತೆಯನ್ನು ಮಕ್ಕಳು ದಾಟುವುದು ಅಪಾಯಕಾರಿ ಸಾಹಸವೇ ಸರಿ. ಹೀಗಾಗಿ ಶಾಲೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ ಸೌಲಭ್ಯ ಕಲ್ಪಿಸಬೇಕಾಗಿದೆ. 

ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಕೆಲವೆಡೆ ಇದೆ. ಆದರೆ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ಧಾರೆ. ಆದರೆ, ಪಕ್ಕದ ಗರನಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ಪ್ರತಿದಿನ ನಡೆದು ಬರುವುದನ್ನು ನೋಡಿದರೆ ಬೇಸರವಾಗುತ್ತದೆ. ಶಾಸಕ ನಿರಂಜನಕುಮಾರ್‌ ಇತ್ತ ಗಮನ ಹರಿಸಿ ಶಾಲಾ ಸಮಯಕ್ಕೆ ಬಸ್‌ ಹಾಕಿಸಬೇಕು.
-ಮಾದಪ್ಪ, ಅಗತಗೌಡನಹಳ್ಳಿ ನಿವಾಸಿ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next