ಬೆಂಗಳೂರು: ಸರ್ಕಾರಿ ಶಾಲೆಯನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆ ಆಲಘಟ್ಟ ಗ್ರಾಮದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕರೊಂದಿಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಆಲಘಟ್ಟದ ಸರ್ಕಾರಿ ಶಾಲೆಯನ್ನು ಭರಮಸಾಗರಕ್ಕೆ ಸ್ಥಳಾಂತರಿಸಲಾಗುತ್ತಿದೆ. 8-10 ಕಿ.ಮೀ. ದೂರ ಸ್ಥಳಾಂತರ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು ಗ್ರಾಮಸ್ಥರೂ ಸಾಥ್ ನೀಡಿದ್ದರು. ಶಾಲಾ ಮಕ್ಕಳು ಸಮವಸ್ತ್ರ ಮತ್ತು ಶಾಲಾ ಬ್ಯಾಗ್‌ನೊಂದಿಗೇ ಆಗಮಿಸಿದ್ದರು.
ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಗೆ ಹೊರಟಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರಿನಲ್ಲಿ ಗೇಟ್‌ನಿಂದ ಹೊರಬರುತ್ತಿದ್ದಂತೆ ಮಕ್ಕಳ ಕೂಗಾಟ ಕೇಳಿತು. ಕೂಡಲೇ ಕಾರ್ ನಿಲ್ಲಿಸಿ ಇಳಿದ ಮುಖ್ಯಮಂತ್ರಿಗಳು ನೇರವಾಗಿ ವಿದ್ಯಾರ್ಥಿಗಳು, ಪೋಷಕರು ಇದ್ದ ಸ್ಥಳಕ್ಕೆ ಬಂದು ಅವರ ಅಹವಾಲು ಕೇಳಿದರು. ಅಲ್ಲದೆ, ಈ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿ ಅಲ್ಲಿಂದ ಹೊರಟರು.
ಸಮಸ್ಯೆ ಏನು?: ವಿದ್ಯಾರ್ಥಿಗಳ ಕೊರತೆ ಕಾರಣ ನೀಡಿ ಆಲಘಟ್ಟ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಅಲ್ಲಿಂದ 8-10 ಕಿ.ಮೀ. ದೂರದ ಭರಮಸಾಗರಕ್ಕೆ ಸ್ಥಳಾಂತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದರಿಂದ ಹಲವು ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬೇಕಾಗುತ್ತದೆ. ಹೀಗಾಗಿ ಶಾಲೆಯನ್ನು ಸ್ಥಳಾಂತರಿಸುವ ಚಿಂತನೆ ಕೈ ಬಿಡಬೇಕು ಎಂಬುದು ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಯ.
ಆಲಘಟ್ಟ ಶಾಲೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಾಲೆಯನ್ನು ದೂರದ ಭರಮಸಾಗರಕ್ಕೆ ಸ್ಥಳಾಂತರಿಸಿದರೆ ಹೆಣ್ಣು ಮಕ್ಕಳನ್ನು ಕಳುಹಿಸಲು ಪೋಷಕರು ಒಪ್ಪುವುದಿಲ್ಲ. ಗ್ರಾಮದಲ್ಲಿ ಉತಮ್ಮ ಕಟ್ಟಡ ಸೇರಿದಂತೆ ಶಾಲೆಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಇರುವಾಗ ಶಾಲೆ ಸ್ಥಳಾಂತರಿಸುವ ಅಗತ್ಯ ಇಲ್ಲ ಎಂಬುದು ಗ್ರಾಮಸ್ಥರ ಮಾತು.
ಹಾಗಾದರೆ ನೀವು ಇರುವುದೇಕೆ?: ಮಕ್ಕಳ ಪ್ರತಿಭಟನೆ ಕಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಾರ್ವಜನಿಕ ಸಮಸ್ಯೆಗಳನ್ನು ಆಲಿಸದೇ ಇರುವ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಮುಖ್ಯಮಂತ್ರಿಯಾಗಿ ನಾನೇ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದಾದರೆ ಉಳಿದ ಕೆಲಸ ಹೇಗೆ ಮಾಡುವುದು. ನಾನೊಬ್ಬನೇ ಈ ಕೆಲಸ ಮಾಡಬೇಕೇ? ಹಾಗಾದರೆ ನೀವು (ಅಧಿಕಾರಿಗಳು) ಏಕಿರುವುದು? ಇಂತಹ ಕೆಲಸಗಳನ್ನು ಮಾಡಲು ಆಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.