ಗದಗ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಜಮಾಯಿಸಿದ ವಿವಿಧ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಬಸ್ ವಿತರಿಸದ ರಾಜ್ಯ ಸರಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಈ ಕುರಿತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಶಿಕ್ಷಣ ಎಂಬುದು ಸರ್ವರಿಗೂ ಸಮಾನವಾಗಿಸಬೇಕು. ಆದ್ದರಿಂದ ಜಾತಿ, ಮತ, ಬಡವ- ಶ್ರೀಮಂತರೆನ್ನದೇ, ಎಲ್ಲರಿಗೂ ಸಮಾನವಾಗಿ ಬಸ್ ಪಾಸ್ ವಿತರಿಸುವುದಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರ ಘೋಷಿಸಿತ್ತು. ಆದರೆ, ಈವರೆಗೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಇದು ವಿದ್ಯಾರ್ಥಿಗಳ ಮೇಲಿನ ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ರಾಜ್ಯವು ಬರ ಪರಸ್ಥಿತಿ ಎದುರಿಸುತ್ತಿದೆ. ರಾಜ್ಯದ ರೈತಾಪಿ ಕುಟುಂಬಗಳು ಸಂಕಷ್ಟದಲ್ಲಿವೆ. ಇಂದಿನ ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿಯಿಂದಾಗಿ ಶಿಕ್ಷಣ ಮಾರಾಟ ವಸ್ತುವಾಗಿದೆ. ಈ ನಡುವೆ ಸರಕಾರ ಉಚಿತ ಬಸ್ ಪಾಸ್ ಜಾರಿಗೊಳಿಸದ ಕಾರಣ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ವರ್ಷದಂತೆ ಹಣವಿಲ್ಲವೆಂಬ ನೆಪವೊಡ್ಡಿ ಉಚಿತ ಬಸ್ ಪಾಸ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿತ್ತು. ಆದ್ದರಿಂದ ಪ್ರಸಕ್ತ ವರ್ಷದಲ್ಲಾದರೂ, ರಾಜ್ಯ ಸರಕಾರ ವಿದ್ಯಾರ್ಥಿಗಳ ಬೇಡಿಕೆ ಕಡೆಗಣಿಸದೇ, ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು. ರವಿ ಮಾನ್ವಿ, ಪ್ರಜ್ವಲ ಲಿಂಗದಾಳ, ದಿರಜ ಬಳ್ಳಾರಿ, ಚೇತನ ದಂಡಗಿ, ಪ್ರಕಾಶ ಹಳ್ಳಿಕೇರಿಮಠ, ರಾಹುಲ್ ಪಾಮೇನಹಳ್ಳಿ ಮತ್ತಿತರರು ಇದ್ದರು.