ಹುಣಸೂರು: ಇಂದು ಅವಿಭಕ್ತ ಕುಟುಂಬಗಳು ಮರೆಯಾಗುತ್ತಿದ್ದು, ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದಲ್ಲಿ ಕುಟುಂಬಗಳಲ್ಲಿ ಸಾಮರಸ್ಯದ ಬದುಕೂ ಮಾಯವಾಗುತ್ತವೆ ಎಂದು ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಸೋಮಶೇಖರ್ ಎಚ್ಚರಿಸಿದರು.
ತಾಲೂಕಿನ ನಿಲವಾಗಿಲಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ಕೌಟುಂಬಿಕ ಸಾಮರಸ್ಯ ಕುರಿತ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಪ್ರೀತಿಯನ್ನು ಟಿ.ವಿ., ಮೊಬೈಲ್, ಫೇಸ್‌ಬುಕ್ ಕಸಿದುಕೊಳ್ಳುತ್ತಿವೆ. ಮಕ್ಕಳಲ್ಲಿ ನೈತಿಕ ಶಿಕ್ಷಣದ ಕೊರತೆ ಎದುರಾಗಿದೆ ಎಂದು ವಿಷಾದಿಸಿದರು.
ಮಕ್ಕಳು ಎಂಜಿನಿಯರ್, ಡಾಕ್ಟರ್, ಸರರ್ಕಾರಿ ಅಧಿಕಾರಿಯಾಗಬೇಕು, ಕೈತುಂಬ ಸಂಬಳ ತರಬೇಕು, ಕೃಷಿಯಿಂದ ದೂರವಿರಬೇಕು, ಪಟ್ಟಣ ವಾಸಿಗಳಾಗಬೇಕು, ಕಾರುಗಳಲ್ಲೇ ಓಡಾಡಬೇಕು, ಹೀಗೆ ಹತ್ತು ಹಲವು ಕನಸುಗಳನ್ನು ಕಟ್ಟಿಕೊಳ್ಳುವ ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸುವುದನ್ನೇ ಬಿಟ್ಟಿದ್ದಾರೆ. ಇದರಿಂದ ಯಾಂತ್ರಿಕ ಜೀವನವಾಗುತ್ತದೆಯೇ ಹೊರತು ಸಾಮರಸ್ಯದ ಸುಖೀ ಕುಟುಂಬ ಮರೆಯಾಗುತ್ತಿದೆ ಎಂದು ಹೇಳಿದರು.
ಹಿಂದೆಲ್ಲ ಹಳ್ಳಿಗಳಲ್ಲಿ ಸಾಮೂಹಿಕ ಕೃಷಿ, ಮುಯ್ನಾಳು ಪದ್ಧತಿ, ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆ, ಹಬ್ಬ ಹರಿದಿನಗಳನ್ನು ಗ್ರಾಮಸ್ಥರು ಸೇರಿ ಆಚರಿಸುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣ ಎಲ್ಲವನ್ನೂ ಕಸಿದುಕೊಳ್ಳುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳು ಹಳ್ಳಿಗಳಲ್ಲಿ ಹಿಂದಿನ ಪದ್ದತಿ ಅನುಸರಣೆಗೆ ಹೊಸ ಹೆಜ್ಜೆ ಹಾಕಬೇಕಿದೆ ಎಂದು ಹೇಳಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಮಾತನಾಡಿ, ಎಷ್ಟೇ ಕಾನೂನಿದ್ದರೂ ಬಾಲ್ಯವಿವಾಹ ತಪ್ಪಿಸಲು ಸಾಧ್ಯವಾಗಿಲ್ಲ, ಬಾಲ್ಯವಿವಾಹದಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅಲ್ಲದೆ ಅಪ್ರಾಪ್ತರಿಗೆ ಮದುವೆ ಮಾಡಿದರೆ ಜೈಲುಶಿಕ್ಷೆ ಕಾದಿದೆ. ಮದುವೆ ಮಾಡಿದವರು, ಭಾಗವಹಿಸಿದವರು ಶಿಕ್ಷೆಗೊಳಗಾಗಲಿದ್ದಾರೆ.
ಈ ಬಗ್ಗೆ ಮಹಿಳಾ ಸಂಘಟನೆಗಳು ಎಚ್ಚರ ವಹಿಸಬೇಕು, ಎಲ್ಲೇ ಬಾಲ್ಯವಿವಾಹ ನಡೆದರೂ ತಡೆದಯ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಯೋಜನೆಯ ಮೇಲ್ವಿಚಾರಕ ರಾಧಾಕೃಷ್ಣಭಟ್, ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ, ಗ್ರಾಮದ ಮುಖಂಡರಾದ ಈರಯ್ಯ, ರುದ್ರಯ್ಯ, ದೇವಯ್ಯ, ಸೇವಾ ಪ್ರತಿನಿಧಿಗಳಾದ ಮಹದೇವಿ ಭಾಗವಹಿಸಿದ್ದರು.