Advertisement

ಮಕ್ಕಳಿಗೆ ಬೇಕಿದೆ ಜೀವನ ರೂಪಿಸುವ ಶಿಕ್ಷಣ

04:56 PM Jun 07, 2018 | |

ದಾವಣಗೆರೆ: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಹಾಸ್ಯಪ್ರಜ್ಞೆಯ ಜೊತೆ ಜೊತೆಯಾಗಿಯೇ ಜೀವನ ರೂಪಿಸುವ ಶಿಕ್ಷಣ ದೊರೆಯುವಂತಾಗಬೇಕು ಎಂದು ನಾಡಿನ ಖ್ಯಾತ ಹಾಸ್ಯ ಮಾತುಗಾರ, ಗಂಗಾವತಿ ಪ್ರಾಣೇಶ್‌ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ತಮ್ಮ ಅಭಿಪ್ರಾಯ, ಹಾಸ್ಯಭಾಷಣ ಜೀವನದ ಪಯಣ, ಸಾಹಿತ್ಯದ ಅಭ್ಯಾಸ… ಹೀಗೆ ಹಲವಾರು ವಿಚಾರಗಳ ಹಂಚಿಕೊಂಡ ಅವರು, ಮಕ್ಕಳ ಮನಸ್ಸು ಬಿಳಿಹಾಳೆ ಇದ್ದಾಗ ನೀವು ಏನೂ ಸರಿಯಾಗಿ ಬರೆಯದಿದ್ದರೆ ಮಕ್ಕಳ ಬಾಳೇ ಹಾಳು… ಎಂಬ ಮಾತಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನದಲ್ಲಿ ಬದುಕನ್ನ ಕಟ್ಟಿಕೊಳ್ಳುವ ಶಿಕ್ಷಣ ನೀಡಬೇಕು. ಬದುಕು ಸಾಗಿಸುವ ಮಾರ್ಗದರ್ಶನ ನೀಡುವ ಎಲ್ಲ ಧರ್ಮದ ಗ್ರಂಥ, ಪುರಾಣ ಕೆಲ ಭಾಗವನ್ನು ಪಠ್ಯಕ್ರಮದಲ್ಲಿ ಅಳವಡಿಸುವಂತಾಗಬೇಕು. ಹಾಸ್ಯಪ್ರಜ್ಞೆಯನ್ನೂ ಬೆಳೆಸಬೇಕು ಎಂದರು.

ನನ್ನ ಹಾಸ್ಯಭಾಷಣ ಜೀವನದ ಪಯಣ ಪ್ರಾರಂಭವಾಗಿದ್ದು 11 ರೂಪಾಯಿಯಿಂದ. ಈಗ ಹೆಚ್ಚಿನ ಹಣ ಕೇಳುವ ಮಟ್ಟಕ್ಕೆ ಬರಲು ಎಲ್ಲರೂ ಕಾರಣ. ಈಗೀಗ ಹಾಸ್ಯ ಕಾರ್ಯಕ್ರಮಕ್ಕೆ ಹೋಗುವುದು ಒಂದು ರಿಸ್ಕ್ ಇದ್ದಂತೆ. ಅದರಲ್ಲಿ ನಮ್ಮ ಭವಿಷ್ಯವೂ ಇದೆ. ಅವೇಳೆಯಲ್ಲಿ ಸಂಚರಿಸುವುದರಿಂದ ನಮ್ಮ ಜೀವವನ್ನೇ ಅಪಾಯಕ್ಕೊಡುತ್ತೇವೆ. ಹಾಗಾಗಿ ಲಕ್ಷಗಟ್ಟಲೆ ಹಣ ಕೇಳುತ್ತೇವೆ. ನಮ್‌ ಜೀವ ಹೋದ್ರೂ ಚಿಂತೆ ಇಲ್ಲ ಕೆಲವರು ಅಷ್ಟೊಂದು ಹಣ ಕೊಡಲಿಕ್ಕೆ ಮುಂದಾಗುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್‌ ಹೆಚ್ಚು ಹಣ ಕೇಳುವುದಕ್ಕೆ ಆರೋಪವನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

ಹಾಸ್ಯವನ್ನೇ ಬದುಕಿನ ಉದ್ಯೋಗ ಮಾಡಿಕೊಳ್ಳಲು ಬಯಸಿ ಈ ಕ್ಷೇತ್ರಕ್ಕೆ ಬರುವರು ಹೆಚ್ಚು ಸಾಹಿತ್ಯ ಓದಿ, ವಿಷಯ ಸಂಗ್ರಹಿಸಿ, ಹೊಸದನ್ನ ಜನರಿಗೆ ಹೇಳಬೇಕು. ಆಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ಸಾಧ್ಯ. ಆದರೆ, ಕೆಲವರು ನನಗೇ ಬೀಚಿ… ಎಂದರೆ ಕೇಳುವವರೂ ಇದ್ದಾರೆ. ಎಷ್ಟು ಓದುತ್ತೇವೆಯೋ ಅಷ್ಟು ವಿಷಯ ಸಿಕ್ಕುತ್ತದೆ. ತಲೆಯಲ್ಲಿ ವಿಷಯ ಇದ್ದಾಗ ಅರಚುವುದು ಕಡಿಮೆ ಆಗುತ್ತದೆ. ಮಾತಿಗೆ ಹೆಚ್ಚು ಸಮಯ ಕೊಡಲಾಗುತ್ತದೆ. ಕೆಲ ನಿರೂಪಕರು ಅರಚುವುದನ್ನು ನೋಡಿದರೆ ವೇದಿಕೆಗೆ ಬರುವರು ಗಾಬರಿ ಬೀಳುತ್ತಾರೆ. ಹಾಗಾಗಿ ನಾನು ಮಾಸ್‌ಗಿಂತಲೂ ಕ್ಲಾಸ್‌ ಆಗಿ ನಗೆ ಕಾರ್ಯಕ್ರಮ ನಡೆಸಿಕೊಡಲು ಬಯಸುತ್ತೇನೆ ಎಂದು ತಿಳಿಸಿದರು.

ಕೆಲ ಹಿರಿಯ ಹಾಸ್ಯ ಕಲಾವಿದರು ಹೇಳಿದ್ದನ್ನೇ ಹೇಳುತ್ತಾ ಇರುತ್ತಾರೆ. ಅಧ್ಯಯನ ಮಾಡಿ, ಹೊಸ ವಿಷಯ ಹೇಳುವುದೇ ಇಲ್ಲ. ನನ್ನ ಮುಂದೆಯೇ ನಾನು ಹೇಳಿದ್ದ ವಿಷಯವನ್ನೇ ಹೇಳುವವರೂ ಇದ್ದಾರೆ. ಅದರಿಂದ ಕಾರ್ಯಕ್ರಮ ಯಶ ಕಾಣುವುದಿಲ್ಲ. ಏನನ್ನೇ ಹೇಳಿದರೂ ಸ್ವಂತ ಅನುಭವ, ಅಧ್ಯಯನದ ಆಧಾರದಲ್ಲಿ ಹೇಳಬೇಕು. ಆದರೆ, ಈಗ ಹೇಗಾಗಿದೆ ಎಂದರೆ ನನ್ನ ಮೊದಲ ರಾತ್ರಿ ಅನುಭವವನ್ನ… ಬೇರೆಯವರೇ ಹೇಳಲಿಕ್ಕೆ ಹೋದಂತಾಗುತ್ತದೆ ಎಂದು ಚಟಾಕಿ ಹಾರಿಸಿದರು.

Advertisement

ನಗಿಸುವವರು ನಗಲೇಬೇಕು ಎಂದೇನಿಲ್ಲ. ತಾನು ನಗದೆ ಜನರನ್ನು ನಗಿಸಬೇಕು. ಅಂತಹ ಅನುಭವವನ್ನು ಹೊಂದಿರಬೇಕು. ಅನೇಕರು ಹಾಸ್ಯ ಭಾಷಣಕಾರರ ಬಗ್ಗೆ ಏನೇನೋ ತಿಳಿದಿರುತ್ತಾರೆ. ನನ್ನನ್ನೂ ಒಳಗೊಂಡಂತೆ ಎಲ್ಲರಿಗೆ ಒತ್ತಡ, ಜವಾಬ್ದಾರಿ, ಹಿಂಸೆ, ಭವಿಷ್ಯವೂ ಇರುತ್ತದೆ. ನಾವು ಎಲ್ಲರಂತೆ ಟೀಕೆ ಎದುರಿಸಬೇಕಾಗುತ್ತದೆ. ಟೀಕೆ ಇಲ್ಲದೇ ಇದ್ದರೆ ಜೀವನ ನಡೆಯೊಲ್ಲ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿಯೇ ದಾವಣಗೆರೆಯಲ್ಲಿ 67 ಸೇರಿ 3 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಡಲಿಕ್ಕೆ ಸಾಧ್ಯವಾಗಿದೆ. ಈಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಐಕಾನ್‌ ಆಗಿ ಕೆಲಸ ಮಾಡಿದ್ದು ಒಂದು ಸವಾಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಬಡದಾಳ್‌, ಖಜಾಂಚಿ ಎ.ಎಲ್‌. ತಾರಾನಾಥ್‌, ಹಿರಿಯ ಸಲಹೆಗಾರ ಎನ್‌.ಆರ್‌. ನಟರಾಜ್‌, ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ್‌ ದೊಡ್ಮನಿ ಹಾಗೂ ಡಾ| ಎನ್‌.ಎಚ್‌. ಕೃಷ್ಣ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next