ಉಡುಪಿ: ಮದ್ಯ ವ್ಯಸನ ಒಂದು ಕೌಂಟುಬಿಕ ಕಾಯಿಲೆಯಾಗಿದ್ದು, ಪೋಷಕರ ಮೀತಿ ಮೀರಿದ ಕುಡಿತದಿಂದ ಮಕ್ಕಳ ಭದ್ರತೆ ಹಾಗೂ ಸುರಕ್ಷೆಗೆ ಮಾರಕವಾಗಲಿದೆ ಎಂದು ಡಾ| ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ| ಪಿ.ವಿ. ಭಂಡಾರಿ ತಿಳಿಸಿದ್ದಾರೆ.
ಡಾ| ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ-ಮಣಿಪಾಲ, ಐ.ಎಂ.ಎ. ಉಡುಪಿ- ಕರಾವಳಿ ವತಿ ಯಿಂದ ಸೋಮವಾರ ದೊಡ್ಡಣಗುಡ್ಡೆ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ-2019ಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಫೆ. 10ರಿಂದ ಫೆ.16 ವರೆಗೆ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸ್ಥಳೀಯ ಚಾನೆಲ್‌ಗಳಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ, ಮರಳು ಶಿಲ್ಪ ರಚನೆ, ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಫೆ. 16ರಂದು ಮನೋ ವೈದ್ಯ ಡಾ| ವಿರೂಪಾಕ್ಷ ದೇವರ ಮನೆ ಅವರು ಮದ್ಯ ವ್ಯಸನಿಗಳ ಮಕ್ಕಳ ಕುರಿತ ಬರೆದ “ನೀನು ಒಂಟಿಯಲ್ಲ” ಪುಸ್ತಕ ಬಿಡುಗಡೆ ಮಾಡಲಾಗುತ್ತದೆ ಎಂದು ಭಂಡಾರಿ ಮಾಹಿತಿ ನೀಡಿದರು.
ಕಲಾವಿದ ಸಂತೋಷ ಆಚಾರ್ಯ ಹಾಗೂ ಅಜಿತ್ ಅವರು ಆಸ್ಪತ್ರೆಯ ಮುಂಭಾಗದಲ್ಲಿ ಅವರು ಮದ್ಯವ್ಯಸನಿಗಳ ಮಕ್ಕಳ ಸಮಸ್ಯೆಗಳಿಗೆ ಸಹಾಯ ಹಸ್ತ ನೀಡಿ ಎನ್ನುವ ಸಂದೇಶ ನೀಡುವ 3ಡಿ ಚಿತ್ರ ಎಲ್ಲರ ಗಮನ ಸಳೆಯಿತು.
ಮನೋವೈದ್ಯ ಡಾ| ವಿರೂಪಾಕ್ಷ ದೇವರಮನೆ, ಡಾ|ಎಚ್.ಆರ್ ನಾಯಕ್, ಡಾ| ದೀಪಕ್ ಮಲ್ಯ, ಡಾ| ಲಾವಣ್ಯ, ಆಪ್ತ ಸಮಾಲೋಚಕ ನಾಗರಾಜ್ ಮೂರ್ತಿ, ಐಎಂಐ ಜಿಲ್ಲಾಧ್ಯಕ್ಷ ಡಾ| ಗುರುಮೂರ್ತಿ, ರೋಟರಿ ಕ್ಲಬ್ ಉಡುಪಿ ಮಣಿಪಾಲದ ರೇಣು ಜಯರಾಂ, ಅಮೀತ್ ಅರವಿಂದ ಉಪಸ್ಥಿತರಿದ್ದರು.
ಒಬ್ಬ ಮದ್ಯ ವ್ಯಸನಿ ಮನೆಯಲ್ಲಿದ್ದರೆ ಮಕ್ಕಳು, ಮಡದಿ ಸಹಿತ ಮೂರ್ನಾಲ್ಕು ಮಂದಿ ಈ ಸಮಸ್ಯೆ ಅನುಭವಿಸಬೇಕಾಗುತ್ತದೆ. ವ್ಯಸನಿ ತಂದೆಯಿಂದ ಮಕ್ಕಳಲ್ಲಿ ಕೀಳರಿಮೆ, ಖನ್ನತೆ ಬೆಳೆಯುವುದರ ಜತೆಗೆ ಉತ್ತಮ ಬಾಲ್ಯ ಜೀವನದಿಂದ ವಂಚಿತರಾಗುತ್ತಾರೆ. ಈ ಮಕ್ಕಳು ಭವಿಷ್ಯದ ಮದ್ಯ ವ್ಯಸನಿಗಳಾಗುವ ಅಪಾಯ ಮೂರ್ನಾಲ್ಕು ಪಟ್ಟು ಹೆಚ್ಚಿದೆ.
-ಡಾ| ಪಿ.ವಿ. ಭಂಡಾರಿ