Advertisement

ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಯತ್ತ ಮಕ್ಕಳು

03:33 PM Apr 26, 2019 | Suhan S |

ಕುಮಾರಸ್ವಾಮಿ

Advertisement

ಪಾಂಡವಪುರ: ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಆದರೆ,ಪೋಷಕರ ವ್ಯಾಮೋಹದಿಂದ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವಹಂತದಲ್ಲಿವೆ. ಸಕಲ ಸೌಲಭ್ಯಗಳೊಂದಿಗೆ ಮಕ್ಕಳನ್ನುಮತ್ತೆ ಸರ್ಕಾರಿ ಶಾಲೆಗಳತ್ತ ಸೆಳೆಯಲು ತಾಲೂಕಿನ ಬೇವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ತಂಡ, ಗ್ರಾಮಸ್ಥರು ಹಾಗೂ ಮಹಿಳೆಯರು ಒಗ್ಗೂಡಿ ಮನೆ ಮನೆಗೆ ತೆರಳಿ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ ಮಕ್ಕಳನ್ನು ಸೇರಿಸಲು ಮನವೊಲಿಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿರುವುದು ಇತರ ಗ್ರಾಮಗಳಿಗೂ ಮಾದರಿಯಾಗಿದೆ.

 

ದಾಖಲಾತಿ ದುಪ್ಪಟ್ಟು: ಬೇವಿನಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆ 70 ವರ್ಷಗಳ ಹಿಂದೆ ಆರಂಭವಾದುದು. 1ರಿಂದ 7ನೇ ತರಗತಿವರೆಗೆ 2018-19ನೇ ಸಾಲಿನಲ್ಲಿ ಕೇವಲ 37 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ 2019-20ನೇ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ದುಪ್ಪಟ್ಟು ಮಾಡಲೇಬೇಕು ಎಂಬ ಛಲದಿಂದ ಶಾಲೆಯ ಮುಖ್ಯ ಶಿಕ್ಷಕ ಹಿರೇಮರಳಿ ಧರ್ಮೇಗೌಡ, ಸಹ ಶಿಕ್ಷಕರಾದ ಪುಟ್ಟರಾಮೇಗೌಡ, ಆರ್‌.ಪುಟ್ಟಮ್ಮ, ದೈಹಿಕ ಶಿಕ್ಷಕ ಬಸವರಾಜು, ಮಹಿಳೆಯರು, ಎಸ್‌ಡಿಎಂಸಿಸದಸ್ಯರು ಒಗ್ಗೂಡಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಮಕ್ಕಳ ದಾಖಲಾತಿ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೌಲಭ್ಯಗಳ ಮನವರಿಕೆ: ಕಳೆದ 15 ದಿನಗಳಿಂದ ಬೇವಿನಕುಪ್ಪೆ ಗ್ರಾಮದ ಮನೆಮನೆ ಬಾಗಿಲಿಗೆ ಭೇಟಿ ನೀಡುತ್ತಿರುವ ಶಿಕ್ಷಕರು, ಗ್ರಾಮಸ್ಥರ ತಂಡ, ಖಾಸಗಿ ಶಾಲೆಗಳಿಗೆ ದಾಖಲಾಗಿರುವ ಮಕ್ಕಳ ಪೋಷಕರನ್ನು ಮನವೊಲಿಸಿ ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಮಾದರಿಯಾಗುತ್ತಿದ್ದಾರೆ. ನಮ್ಮೂರ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಬಗೆಯ ಬಿಸಿಯೂಟ, ಉಚಿತ ಸಮವಸ್ತ್ರ, ಕ್ಷೀರ ಭಾಗ್ಯ ಸೌಲಭ್ಯ, ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಕಾಳಜಿ, ಧ್ಯಾನ, ವ್ಯಾಯಾಮ, ಕಂಪ್ಯೂಟರ್‌ ಕಲಿಕೆ, ಸಾಮಾನ್ಯ ಜ್ಞಾನ ಒಳಗೊಂಡಂತೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಜ್ಞಾನ ವಿಕಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಮನವರಿಕೆ ಮಾಡಿಕೊಟ್ಟು ಪೋಷಕರ ಮನವೊಲಿಸಿದರು.

Advertisement

ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ: ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಳಕ್ಕಾಗಿ ಮನೆ ಮನೆಗೆ ಭೇಟಿ ಕಾರ್ಯಕ್ರಮ ಪ್ರಯುಕ್ತ ಬೇವಿನಕುಪ್ಪೆ ಗ್ರಾಮದ ಸರ್ಕಾರಿ ಶಾಲೆಗೆ 2019-20ನೇ ಸಾಲಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಯಿಂದ ವರ್ಗಾವಣೆ ಪತ್ರ ತಂದು ನಮ್ಮೂರ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದು ಪೋಷಕರು ಒಪ್ಪಿಗೆ ಪತ್ರಕ್ಕೂ ಸಹಿ ಹಾಕಿದ್ದಾರೆ.

ಮಕ್ಕಳ ಸಂಖ್ಯೆ 100ಕ್ಕೆ ತಲುಪಿಸುವ ಗುರಿ: ಬೇವಿನಕುಪ್ಪೆ ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಪಾಂಡವಪುರ ಪಟ್ಟಣದ ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದು, 2019-20ನೇ ಶಾಲಿನಲ್ಲಿ ಬೇವಿನಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯ ದಾಖಲಾತಿಯನ್ನು 100 ಸಂಖ್ಯೆಗೆ ತಲುಪಿಸುವ ಗುರಿಯಾಗಿಟ್ಟುಕೊಂಡು ಗ್ರಾಮದ ಮನೆ ಮನೆಗೆ ಭೇಟಿ ಮಾಡಲಾಗುತ್ತಿದೆ. ಶಿಕ್ಷಕರ ಜತೆಗೆ ಗ್ರಾಮಸ್ಥರೆಲ್ಲರು ಒಗ್ಗೂಡಿ ದಾಖಲಾತಿ ಹೆಚ್ಚಳಕ್ಕಾಗಿ ಅರಿವು ಜಾಥಾ ಮಾಡುತ್ತಿರುವುದು ಬೇವಿನಕುಪ್ಪೆ ಗ್ರಾಮದ ಸರ್ಕಾರಿ

ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಕಾರಣ ಎಂದು ಇಲ್ಲಿನ ಶಿಕ್ಷಕವರ್ಗ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದೆ.

 

 

 

Advertisement

Udayavani is now on Telegram. Click here to join our channel and stay updated with the latest news.

Next