Advertisement

ಮಕ್ಕಳ ಕನಸು ಜನನಿಯಿಂದ ನನಸು

11:56 AM Sep 20, 2019 | Suhan S |

ಹುಬ್ಬಳ್ಳಿ: ಬಂಜೆತನ ನಿವಾರಣೆ ನಿಟ್ಟಿನಲ್ಲಿ ಅತ್ಯಂತ ಕಡು ಬಡವರಿಗೆ ಉಚಿತ ಹಾಗೂ ಇತರರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ದೇಶದ ಮೊದಲ ಚಾರಿಟಿ ಬಂಜೆತನ ನಿವಾರಣಾ ಕೇಂದ್ರ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಸಿದ್ದಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ತಲೆ ಎತ್ತಲಿದೆ. ಬೆಳಗಾವಿ ಜಿಲ್ಲೆಯ ಶ್ರೀ ಬೀರೇಶ್ವರ ಸೌಹಾರ್ದ ಸಹಕಾರಿ ಬ್ಯಾಂಕ್‌ ಸುಮಾರು 2 ಕೋಟಿ ರೂ. ದೇಣಿಗೆ ಘೋಷಿಸಿದೆ.

Advertisement

ದೇಶದ ವಿವಿಧ ಕಡೆ ಹೃದ್ರೋಗ, ಮೂತ್ರಪಿಂಡ, ಕ್ಯಾನ್ಸರ್‌, ಮಧುಮೇಹ ಇನ್ನಿತರ ಸಮಸ್ಯೆಗಳ ಚಿಕಿತ್ಸೆಗಾಗಿ ಧರ್ಮಾರ್ಥ ಸೇವೆ(ಚಾರಿಟಿ) ಆಸ್ಪತ್ರೆಗಳು ಇವೆ. ಆದರೆ, ಬಂಜೆತನ ನಿವಾರಣೆ ನಿಟ್ಟಿನಲ್ಲಿ ಚಾರಿಟಿ ಆಸ್ಪತ್ರೆ ಆರಂಭಕ್ಕೆ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರ ಕಳಕಳಿಗೆ ಸ್ಪಂದಿಸಿರುವ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ದಂಪತಿ ತಮ್ಮ ಶ್ರೀ ಬೀರೇಶ್ವರ ಸೌಹಾರ್ದ ಸಹಕಾರ ಬ್ಯಾಂಕ್‌ನಿಂದ ಅಂದಾಜು 2 ಕೋಟಿ ರೂ.ಗಳ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ದುಬಾರಿ ಚಿಕಿತ್ಸೆ: ದೇಶದಲ್ಲಿ ಸುಮಾರು 27.5 ಮಿಲಿಯನ್‌ ದಂಪತಿ ಬಂಜೆತನದಿಂದ ಬಳಲುತ್ತಿದ್ದಾರೆ. ಸ್ತ್ರೀಯರಲ್ಲಿ ಶೇ.40-50ರಷ್ಟು ಬಂಜೆತನಕ್ಕೆ ಕಾರಣವಾದರೆ, ಪುರುಷರಲ್ಲಿ ಇದರ ಪ್ರಮಾಣ ಶೇ.30-40ರಷ್ಟು ಇದೆ. ಬಂಜೆತನ ನಿವಾರಣೆಗಾಗಿ ದೊರೆಯುವ ಚಿಕಿತ್ಸೆ ದುಬಾರಿಯಾಗಿದ್ದು, ಬಹುತೇಕರು ದುಬಾರಿ ವೆಚ್ಚ ಭರಿಸಲಾಗದೆ ಚಿಕಿತ್ಸೆಯಿಂದಲೇ ದೂರ ಉಳಿಯುತ್ತಿದ್ದಾರೆ.

ಕೆಲ ಮೂಲಗಳ ಪ್ರಕಾರ ದೇಶದಲ್ಲಿ ಬಂಜೆತನ ಸಮಸ್ಯೆ ಎದುರಿಸುವವರಲ್ಲಿ ಶೇ.1ರಷ್ಟು ದಂಪತಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತಾನ ಭಾಗ್ಯ ಇಲ್ಲದ ಕಾರಣ ಮುಖ್ಯವಾಗಿ ಅನೇಕ ಗೃಹಿಣಿಯರು ಮಾನಸಿಕವಾಗಿ ಕುಗ್ಗುತ್ತಾರಲ್ಲದೆ, ಸಾಮಾಜಿಕವಾಗಿ ಮೂದಲಿಕೆ ಇನ್ನಿತರ ಸಮಸ್ಯೆ ಎದುರಿಸುವಂತಾಗುತ್ತದೆ. ಗಂಡನ ಮನೆಯವರ ಮಾನಸಿಕ ಕಿರುಕುಳ, ಮಕ್ಕಳಗಾಗಲಿಲ್ಲ ಎಂದು ಗಂಡ ಎರಡನೇ ಮದುವೆಗೆ ಮುಂದಾದ ಪ್ರಕಣಗಳಿವೆ. ಬಂಜೆತನ ನಿವಾರಣೆಗೆ ಅಗತ್ಯ ಚಿಕಿತ್ಸೆ ಕೈಗೆಟುಕುವ ಇಲ್ಲವೆ ಉಚಿತವಾಗಿ ದೊರೆಯುವ ಉದ್ದೇಶದೊಂದಿಗೆ ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಬಂಜೆತನ ನಿವಾರಣಾ ಕೇಂದ್ರ ಆರಂಭಕ್ಕೆ ಯೋಜಿಸಲಾಗಿದೆ.

ಜನನಿ ಐವಿಎಫ್: ಕನೇರಿಯ ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆವರಣದಲ್ಲಿ ಜನನಿ ಐವಿಎಫ್ ಕೇಂದ್ರ ತಲೆ ಎತ್ತಲಿದೆ. ಸುಮಾರು 9,000 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಶಸ್ತ್ರಚಿಕಿತ್ಸಾ ವಿಭಾಗ, ಭ್ರೂಣಶಾಸ್ತ್ರ, ಅಂಡ್ರಾಲಾಜಿ ವಿಭಾಗ, ಐವಿಎಫ್ ಲ್ಯಾಬ್‌ ಇನ್ನಿತರ ವಿಶ್ವದರ್ಜೆ ಸಲಕರಣೆ ಹಾಗೂ ಸೌಲಭ್ಯಗಳನ್ನು ಈ ಕೇಂದ್ರ ಹೊಂದಲಿದೆ. ಜನನಿ ಐವಿಎಫ್ ಕೇಂದ್ರ ಒಟ್ಟು 4 ಕೋಟಿ ರೂ. ಗಳ ಅಂದಾಜು ವೆಚ್ಚದ್ದಾಗಿದೆ. ಇನ್ನು 6ರಿಂದ 8 ತಿಂಗಳೊಳಗೆ ಕೇಂದ್ರ ಸೇವೆಗೆ ಲಭ್ಯವಾಗಲಿದೆ. ಮಹಾರಾಷ್ಟ್ರ, ಕರ್ನಾಟಕ ಅಲ್ಲದೆ ದೇಶದ ಯಾವುದೇ ಭಾಗದವರು ಬಂಜೆತನ ನಿವಾರಣೆಗೆ ಜನನಿ ಐವಿಎಫ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

Advertisement

ಬಂಜೆತನ ಮಹಿಳೆಯರ ಪಾಲಿಗೆ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಕೌಟುಂಬಿಕ ಹಿಂಸೆಗೂ ಕಾರಣವಾಗುತ್ತಿದೆ. ಬಂಜೆತನ ನಿವಾರಣೆ ನಿಟ್ಟಿನಲ್ಲಿ ಜನನಿ ಐವಿಎಫ್ ಕೇಂದ್ರ ಆರಂಭಿಲು ಯೋಜಿಸಿದಾಗ ಬೆಳಗಾವಿ ಜಿಲ್ಲೆಯ ಜೊಲ್ಲೆ ಕುಟುಂಬದವರು ತಮ್ಮ ಬೀರೇಶ್ವರ ಸೌಹಾರ್ದ ಸಹಕಾರಿ ಬ್ಯಾಂಕ್‌ ಮೂಲಕ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. 4 ಕೋಟಿ ವೆಚ್ಚದ ಯೋಜನೆಗೆ ಉಳಿದ ಹಣವನ್ನು ಇತರೆ ದಾನಿಗಳಿಂದ ಪಡೆಯಲಾಗುವುದು. ಐವಿಎಫ್ ಚಿಕಿತ್ಸೆಗೆ ಪ್ರಸ್ತುತ 1.5ರಿಂದ 2 ಲಕ್ಷವರೆಗೆ ಪಡೆಯಲಾಗುತ್ತಿದೆ. ನಮ್ಮಲ್ಲಿ 30 ಸಾವಿರ ರೂ.ಗೆ ಚಿಕಿತ್ಸೆ ನೀಡಲು ಯೋಜಿಸಲಾಗಿದೆ. ಬಡವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ.  -ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ

ಆಯುರ್ವೇದದ ಜತೆ ಐವಿಎಫ್ ಚಿಕಿತ್ಸೆ :  ಬಂಜೆತನ ನಿವಾರಣೆ ನಿಟ್ಟಿನಲ್ಲಿ ಕನೇರಿಯ ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಜನನಿ ಐವಿಎಫ್ ಕೇಂದ್ರ ಆರಂಭವಾಗುತ್ತಿದೆ. ಇದೇ ಆವರಣದಲ್ಲಿ ಸಿದ್ಧಗಿರಿ ಆಯುರ್ವೇದ ಆಸ್ಪತ್ರೆಯೂ ಇದೆ. ಸ್ತ್ರೀ ಹಾಗೂ ಪುರುಷರಲ್ಲಿ ಅಂಡಾಣು, ವೀರ್ಯಾಣುಗಳ ನಕಾರಾತ್ಮಕ ಸ್ಥಿತಿಯಿಂದ ಬಂಜೆತನ ಕಾಡಲಿದೆ. ಇದರ ನಿವಾರಣೆಗೆ ಐವಿಎಫ್ ಚಿಕಿತ್ಸೆ ಸೂಕ್ತವಾಗಿದೆ. ಆದರೆ, ಇದಕ್ಕೂ ಪೂರ್ವದಲ್ಲಿ ಆಯುರ್ವೇದ ಚಿಕಿತ್ಸೆ ಮೂಲಕ ಅಂಡಾಣು-ವೀರ್ಯಾಣು ಬಲವರ್ಧನೆ, ಆಹಾರ ಪದ್ಧತಿ, ಪಂಚಕರ್ಮಕ್ಕೆ ಒಳಗಾಗಿ ಐವಿಎಫ್ ಚಿಕಿತ್ಸೆಗೆ ಮುಂದಾದರೆ ಫ‌ಲಿತಾಂಶ ಇನ್ನಷ್ಟು ಉತ್ತಮವಾಗಲಿದೆ. ಈಗಾಗಲೇ ಕೆಲವೊಂದು ಪ್ರಕರಣಗಳಲ್ಲಿ ಇದು ಉತ್ತಮ ಫ‌ಲಿತಾಂಶ ನೀಡಿದೆ ಎಂಬುದು ಆಯುರ್ವೇದ ತಜ್ಞ ಡಾ| ಚಂದ್ರಶೇಖರ ಅನಿಸಿಕೆ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next