Advertisement

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮಗಳು: ಸಹಾಯಕ್ಕೆ ಮನವಿ

12:45 AM Aug 31, 2019 | Sriram |

ನಗರ: ದೇಹಕ್ಕಿಂತ ಹೆಚ್ಚು ತೂಕದಲ್ಲಿರುವ ತಲೆ, ಹೊರಲಾಡಲೂ ಆಗದೆ ನರಕಯಾತನೆ ಅನುಭವಿಸುತ್ತಿರುವ ಪುಟ್ಟ ಕಂದಮ್ಮಗಳು, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕಣ್ಣೀರಿಡುತ್ತಿರುವ ತಾಯಿ.

Advertisement

ಕುಂಬ್ರ ಸಮೀಪದ ಕೆದಂಬಾಡಿ ಗ್ರಾಮದ ಸಾರೆಪುಣಿಯಲ್ಲಿರುವ ಕುಟುಂಬವೊಂದರ ದಯನೀಯ ಸ್ಥಿತಿ ಇದು. ಮೂಲತಃ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಜುಬೈದಾ ಅವರ ಕಂದಮ್ಮಗಳ ಸ್ಥಿತಿ ಕಂಡು ಯಾರೂ ಮರುಕಪಡದೆ ಇರಲಾರರು.

ಜುಬೈದಾ ಅವರನ್ನು ಮಂಗಳೂರಿನ ಇಸ್ಮಾಯಿಲ್‌ ಅವರಿಗೆ ವಿವಾಹ ಮಾಡಿಕೊಡಲಾಗಿದೆ. ದಂಪತಿಗೆ ಎರಡೂವರೆ ವರ್ಷದ ಹಿಂದೆ ಮೊದಲ ಗಂಡು ಮಗುವಿನ ಜನನವಾಗಿದೆ. ಮಗು ಹುಟ್ಟುವಾಗಲೇ ತಲೆ ಸ್ವಲ್ಪ ದೊಡ್ಡದಾಗಿತ್ತು. ಸರಿ ಹೋಗಬಹುದು ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದರು. ಆದರೆ ಮಗು ದೊಡ್ಡದಾಗಿ ಈಗ 2 ವರ್ಷ 8 ತಿಂಗಳ ಕಾಲ ಮಲಗಿದಲ್ಲೇ ಇದೆ. ತನ್ನ ತಲೆಯನ್ನು ಅತ್ತಿಂದಿತ್ತ ತಿರುಗಾಡಿಸಲೂ ಮಗುವಿಗೆ ಸಾಧ್ಯವಾಗುತ್ತಿಲ್ಲ. ದೇಹದ ಉಳಿದ ಅವಯವ ಎಲ್ಲವೂ ಸರಿಯಾಗೇ ಇದೆ. ಮೊದಲ ಗಂಡು ಮಗು ಮೊಹಮ್ಮದ್‌ ಸಲೀತ್‌ ತಲೆಯ ಭಾಗದಲ್ಲಿ ಕೆಲವೊಮ್ಮೆ ನೋವು ಕಾಣಿಸಿಕೊಂಡಾಗ ಕಣ್ಣೀರು ಹಾಕುತ್ತಾನೆ. ಆ ಮಗುವಿಗೆ ಅಳುವ ಶಕ್ತಿಯೂ ಇಲ್ಲವಾಗಿದೆ.

ಎರಡನೇ ಮಗುವಿನ ಅವಸ್ಥೆಯೂ ಇದೆ ರೀತಿಯಾಗಿದೆ. ಎರಡನೇ ಮಗು ಮೊಹಮ್ಮದ್‌ ಸಲೀಂಗೆ ಕೇವಲ 8 ತಿಂಗಳು. ಎಂಟು ತಿಂಗಳ ಮಗುವಿನ ತಲೆಯೂ ಅದರ ತೂಕಕ್ಕಿಂತ ಹೆಚ್ಚಾಗಿದೆ. ಮಗುವನ್ನು ತಾಯಿಗೆ ಎತ್ತಿಕೊಳ್ಳಲು ಸಾಧ್ಯವಾಗದಷ್ಟು ಭಾರವಾಗಿದೆ. ಇಬ್ಬರು ಮಕ್ಕಳಿಗೂ ಒಂದೇ ಖಾಯಿಲೆ. ಎರಡು ಮಕ್ಕಳ ಅವಸ್ಥೆಯನ್ನು ಕಂಡು ತಾಯಿ ನಿತ್ಯವೂ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ತಲೆಯ ಭಾರ ತಾಳಲಾರದೆ ಇಬ್ಬರು ಪುಟ್ಟ ಮಕ್ಕಳು ಕಣ್ಣೀರು ಹಾಕುತ್ತಿದ್ದರೆ ಅದನ್ನು ಕಂಡು ತಾಯಿಯೂ ಕಣ್ಣೀರು ಹಾಕುತ್ತಿದ್ದಾರೆ.

ಸಹಾಯಕ್ಕೆ ಮನವಿ
ಜುಬೈದಾ ಅವರು ಸಹೃದಯಿಗಳ ನೆರವು ಕೋರಿದ್ದಾರೆ. ನೆರವು ನೀಡ ಬಯಸುವವರು ಜುಬೈದಾ ಎಂ., ಕೆನರಾ ಬ್ಯಾಂಕ್‌, ತಿಂಗಳಾಡಿ ಶಾಖೆ, ಖಾತೆ ಸಂಖ್ಯೆ: 6252108000918, ಐಎಫ್‌ಎಸ್‌ಸಿ ಕೋಡ್‌: ಸಿಎನ್‌ಆರ್‌ಬಿ 0006252 ಇದಕ್ಕೆ ನೆರವು ನೀಡಬಹುದು. ಸಂಪರ್ಕ ಮೊಬೈಲ್‌ ಸಂಖ್ಯೆ: 8197495135.

Advertisement

 ಚಿಕಿತ್ಸೆಗೂ ಕಷ್ಟ
ಮಗುವಿಗೆ ಚಿಕಿತ್ಸೆ ಕೊಡಿಸಲು ಪತಿಯ ಬಳಿಯೂ ಹಣವಿಲ್ಲ. ನಾನು ಬೀಡಿ ಕಟ್ಟಿ ದಿನದೂಡುತ್ತಿದ್ದೇನೆ. ಮಕ್ಕಳ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ 2 ವರ್ಷ 8 ತಿಂಗಳಿನಿಂದ ನಾನು ನನ್ನಿಂದಾಗುವ ಚಿಕಿತ್ಸೆಯನ್ನು ಮಾಡಿಸಿದ್ದೇನೆ. ಸಹೃದಯಿ ದಾನಿಗಳು ನೆರವು ನೀಡಿದಲ್ಲಿ ನನ್ನ ಇಬ್ಬರು ಪುಟ್ಟ ಮಕ್ಕಳ ಕಣ್ಣೀರೊರೆಸಬಹುದು.
– ಜುಬೈದಾ, ಮಕ್ಕಳ ತಾಯಿ

 ಸರ್ಜರಿ ಮೂಲಕ ಗುಣ
ಇದು ಗಂಭೀರ ಕಾಯಿಲೆ. ಮಗು ಹೆರಿಗೆಯಾಗುವ ವೇಳೆ ಅದರ ಮಿದುಳಿನಲ್ಲಿರುವ ನೀರು ತಾನೇ ತನ್ನಿಂತಾನೆ ಹೊರ ಬರುತ್ತದೆ. ನೀರು ಹೊರ ಬರುವ ನಾಳ ಬ್ಲಾಕ್‌ ಆದಲ್ಲಿ ಮಕ್ಕಳ ತಲೆ ಭಾರೀ ಗಾತ್ರದಲ್ಲಿ ಬೆಳೆಯುತ್ತದೆ. ಮಗು ದೊಡ್ಡದಾಗುತ್ತಲೇ ತಲೆಯೂ ದೊಡ್ಡದಾಗುತ್ತಾ ಹೋಗುತ್ತದೆ. ಸರ್ಜರಿ ಮೂಲಕ ಅದನ್ನು ಸರಿಪಡಿಸಬಹುದಾಗಿದೆ.
– ಡಾ| ಶ್ರೀಕಾಂತ್‌,
ಮಕ್ಕಳ ತಜ್ಞರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next