Advertisement

3 ದಿನ ಮೊದಲೇ ಮಕ್ಕಳ ದಿನ

12:45 PM Nov 12, 2017 | |

ಬೆಂಗಳೂರು: ಮಕ್ಕಳ ದಿನಾಚರಣೆಗೂ ಮುನ್ನವೇ ಮಹಾನಗರದಲ್ಲಿ ಮಕ್ಕಳ ಕಲರವ ಶುರುವಾಗಿದೆ. ತೋಟಗಾರಿಕೆ ಇಲಾಖೆ ಜತೆ 15ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು ಸೇರಿಕೊಂಡು ಕಬ್ಬನ್‌ಪಾರ್ಕ್‌ನಲ್ಲಿ ಮಕ್ಕಳ ಮನಸ್ಸಿಗೆ ಮುದನೀಡುವ ಹೊಸ ಪ್ರಪಂಚವನ್ನೇ ಅನಾವರಣ ಮಾಡಿವೆ.

Advertisement

ನಾಲ್ಕು ಗೋಡೆ ನಡುವೆಯೇ ಆಡಿ ಕುಣಿಯುವ ನಗರದ ಚಿಣ್ಣರಿಗೆ ಪರಿಚಯಿಸಲೆಂದೇ ಆಯೋಜಿಸಿದ್ದ ಕಲೆ, ವಿಜ್ಞಾನ, ತಂತ್ರಜ್ಞಾನ, ಗ್ರಾಮೀಣ ಸಂಸ್ಕೃತಿ, ಕುಸ್ತಿ ಸೇರಿ, ಹಳ್ಳಿಗಾಡಿನ ವಿವಿಧ ಕ್ರೀಡೆಗಳು ಮೊದಲ ದಿನದ ಆಕರ್ಷಣೆಯಾಗಿದ್ದವು.

ಮಡಿಕೆ ತಯಾರಿ, ರಾಗಿ ಬೀಸುವುದು, ಎತ್ತಿನ ಬಂಡಿ, ಕುದುರೆ ಟಾಂಗಾ ಸವಾರಿ, ಮೀನು ಹಿಡಿಯುವುದು, ಚೌಕಾಬಾರ, ಮಲ್ಲಕಂಬ, ಸೈಕಲ್‌ ಗಾಲಿ ಸ್ಪರ್ಧೆ, ಕವಡೆ ಆಟ, ಮೊಸರು ಕಡೆಯುವುದು, ಜಾದು, ಜನಪದ ಕುಣಿತ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಖಗೋಳಕ್ಕೆ ಸಂಬಂಧಿಸಿದಂತೆ ಮಿನಿ ತಾರಾಲಯ ಗಮನ ಸೆಳೆಯಿತು.

ಇದರೊಂದಿಗೆ ಅರಣ್ಯ ಇಲಾಖೆಯಿಂದ ವನ್ಯ ಜೀವಿ, ಅರಣ್ಯದ ಕುರಿತು ಮಾಹಿತಿ-ಜಾಗೃತಿ, ದೇಶ ಕಾಯುವ ಸೈನಿಕರ ಸಾಕ್ಷಾತ್‌ ದರ್ಶನ, ಅವರ ಉಡುಗೆ-ತೊಡುಗೆ ಬಗ್ಗೆ ತಿಳಿಯುವ ಅವಕಾಶವನ್ನು ಮಕ್ಕಳಿಗೆ ಒದಗಿಸಲಾಗಿದೆ.

ನೀವೂ ಮೀನು ಹಿಡಿಯಿರಿ!: ಮೀನುಗಾರಿಕೆ ಇಲಾಖೆಯ ವಿವಿಧ ತಳಿಯ ಮೀನುಗಳ ಪ್ರದರ್ಶನ ಮಕ್ಕಳನ್ನು ಹೆಚ್ಚು ಸೆಳೆಯುತ್ತಿದೆ. ಸಿಹಿ ನೀರು, ಸಮುದ್ರ ಮೀನುಗಳ ಕುರಿತು ಮಾಹಿತಿ ಕೂಡ ಇಲ್ಲಿ ಲಭ್ಯವಿದ್ದು, ಮಿನಿ ಮೀನಿನ ಕೊಳ ಸೃಷ್ಟಿಸಿ ಮೀನುಗಳನ್ನು ಬಿಟ್ಟು, ಅವುಗಳನ್ನು ಹಿಡಿಯುವುದು ಹೇಗೆ ಎಂದು ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ತಿಳಿವಳಿಕೆ
ನೀಡಲಾಗುತ್ತಿದೆ. ಮೀನು ಹಿಡಿಯಲು ಬಳಸುತ್ತಿದ್ದ ಹಳೆಯ ಬಲೆಗಳಿಂದ ಇತ್ತೀಚಿನ ದಿನಗಳಲ್ಲಿ ಬಳಕೆ ಮಾಡುತ್ತಿರುವ ಆಧುನಿಕ ಬಲೆಗಳವರೆಗಿನ ಸಚಿತ್ರ ಮಾಹಿತಿ ಇಲ್ಲಿದೆ.

Advertisement

ಫ‌ಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆಯಿಂದ ಸುಮಾರು 1.50 ಲಕ್ಷ ಗುಲಾಬಿ, ಅಂಥೇರಿಯಂ, ಲಿಲ್ಲಿ, ಬರ್ಡ್‌ ಆಫ್ ಪ್ಯಾರಡೈಸ್‌ ಇತ್ಯಾದಿ ಹೂವುಗಳನ್ನು ಬಳಸಿ ನಿರ್ಮಿಸಲಾಗಿರುವ ತಾಜ್‌ಮಹಲ್‌, ಮೆಕ್ಸಿಕೋದ ಮಾಯನ್‌ ನಾಗರಿಕತೆಯ ಚಿಂಚನ್‌ ಇಟ್ಜ್  ದೇವಸ್ಥಾನ (ಪಿರಮಿಡ್‌), ಲೋಟಸ್‌ ಟೆಂಪಲ್‌, ಕ್ಯಾಪ್ಸಿಕಂ ಬಳಸಿ ತಯಾರಿಸಲಾಗಿರುವ ಮಕ್ಕಳ ಸ್ನೇಹಿ ಪೊಲೀಸ್‌ ಠಾಣೆ, 24 ಅಡಿ ಎತ್ತರದ ಫ್ಲವರ್‌ ರೈನ್‌ಫಾಲ್‌, ಮರಗಳಿಗೆ ಪುಷ್ಪ ಅಲಂಕಾರ, ಸ್ಯಾಂಡ್‌ ಆರ್ಟ್‌, ಕಲ್ಲಂಗಡಿಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೆತ್ತನೆ, ಮಹಡಿ ಉದ್ಯಾನವನ, ಕಿಚನ್‌ಗಾರ್ಡನ್‌, ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಗಳು ಮಕ್ಕಳನ್ನು ಸೆಳೆಯುತ್ತಿದೆ

ಹಬ್ಬದಲ್ಲಿ ಏನೆಲ್ಲಾ ಇದೆ ಗೊತ್ತಾ? ಮಡಿಕೆ ತಯಾರಿ, ರಾಗಿ ಬೀಸುವುದು, ಎತ್ತಿನ ಬಂಡಿ, ಕುದುರೆ ಟಾಂಗಾ ಸವಾರಿ, ಚಿತ್ರ ಬಿಡಿಸುವುದು, ಮೀನು ಹಿಡಿಯುವುದು, ಚೌಕಾಬಾರ, ಮಲ್ಲಕಂಬ, ಸೈಕಲ್‌ ಟೈರ್‌ ಸ್ಪರ್ಧೆ, ಕವಡೆ ಆಟ, ಮೊಸರು ಕಡೆಯುವುದು, ಜಾದು, ಜನಪದ ಕುಣಿತ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಮಿನಿ
ತಾರಾಲಯ, ಸ್ಪೀಕರ್‌ ಮೂಲಕ ವಿವಿಧ ವನ್ಯ ಮೃಗ, ಪಕ್ಷಿಗಳ ಧ್ವನಿ ಕೇಳಿಸುವಿಕೆ, ಯೋಧರು ಬಳಸುವ ಬಂದೂಕು, ಉಡುಗೆ-ತೊಡುಗೆ, ಪೇಂಟಿಂಗ್‌ ಪ್ರದರ್ಶನ, ರಸಪ್ರಶ್ನೆ, ರಂಗೋಲಿ ಸ್ಪರ್ಧೆಗಳು ಈ ಹಬ್ಬದಲ್ಲಿವೆ. ಇಲ್ಲಿ ಮಕ್ಕಳು ಏನೇ ಆಟವಾಡಿದರೂ ಕಾಸಿಲ್ಲ!

ನಾಲ್ಕು ದಿನಗಳ ಮಕ್ಕಳ ಹಬ್ಬ ಮಕ್ಕಳಲ್ಲಿ ಬೌದ್ಧಿಕ, ಶಾರೀರಿಕ, ಮಾನಸಿಕ ವಿಕಾಸಕ್ಕೆ ವೇದಿಕೆಯಾಗಲಿದೆ
ಎಂಬ ವಿಶ್ವಾಸವಿದೆ. ಆರೋಗ್ಯ, ಆಹಾರ ಪದ್ಧತಿ ಮತ್ತು ಗ್ರಾಮೀಣ ಕ್ರೀಡೆಗಳು, ದೇಸೀ ಸಂಸ್ಕೃತಿ, ಜಾನಪದ ಕಲೆಗಳ ಕುರಿತು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
●ಉಮಾಶ್ರೀ, ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next