Advertisement

ರಸ್ತೆ ದಾಟಲು ಮಕ್ಕಳ ಹರಸಾಹಸ

12:51 PM Jun 27, 2022 | Team Udayavani |

ಕಾರಟಗಿ: ಪಟ್ಟಣದ ಹಳೆ ಬಸ್‌ ನಿಲ್ದಾಣದ ಉನ್ನತೀಕರಿಸಿದ ಸರಕಾರಿ ಶಾಲೆಯ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ರಸ್ತೆ ದಾಟಿಸುವ ಅನಿವಾರ್ಯತೆ ಬಂದೊದಗಿದೆ.

Advertisement

ಪಟ್ಟಣ ತಾಲೂಕು ಕೇಂದ್ರವಾಗುತ್ತಿದ್ದಂತೆ ಜನಸಂಖ್ಯೆ ಕೂಡ ಹೆಚ್ಚುತ್ತಿದ್ದು, ಅದರೊಂದಿಗೆ ವಾಹನ ದಟ್ಟಣೆ ಕೂಡ ಹೆಚ್ಚುತ್ತಿದೆ. ಹಾಗೆಯೆ ಖಾಸಗಿ ಶಾಲೆಗಳ ಅಬ್ಬರ ಒಂದೆಡೆಯಾದರೆ ಖಾಸಗಿ ಶಾಲೆಯ ವಾಹನಗಳ ಓಡಾಟವೂ ಮೀತಿ ಮೀರಿದೆ. ಇದೆಲ್ಲದರ ಪರಿಣಾಮ ನಿತ್ಯ ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ನಿಯಂತ್ರಿಸಲಾಗದೇ ಪೊಲೀಸ್‌ ಇಲಾಖೆ ಸುಮ್ಮನಾಗಿದೆ.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಬೈಕ್‌ಗಳು, ಬಸ್‌, ಲಾರಿ ಟ್ಯಾಕ್ಸಿ, ಟಾಂಟಂ, ಆಟೋ ಸೇರಿದಂತೆ ಹಲವಾರು ವಾಹನಗಳ ಓಡಾಟದಿಂದ ಟ್ರಾಫಿಕ್‌ ಸಮಸ್ಯೆ ಉಲ್ಬಗೊಳ್ಳುತ್ತಿದೆ. ಹೀಗಾಗಿ ಶಾಲಾ ಮಕ್ಕಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಇದನ್ನರಿತ ಹಳೆ ಬಸ್‌ ನಿಲ್ದಾಣದ ಉನ್ನತೀಕರಿಸಿದ ಶಾಲಾ ಶಿಕ್ಷಕರು ಮಕ್ಕಳನ್ನು ಸರದಿಯ ಮೂಲಕ ನಿಲ್ಲಿಸಿ ಎರಡು ಬದಿಗಳಲ್ಲಿ ಹಗ್ಗ ಹಿಡಿದುಕೊಂಡು ಮಕ್ಕಳನ್ನು ರಸ್ತೆ ದಾಟಿಸುವ ಕೆಲಸ ಮಾಡುತ್ತಿದ್ದಾರೆ.

ಹಂಪ್ಸ್ ಗಳಿಲ್ಲ: ರಸ್ತೆ ನಿರ್ಮಾಣ ಮಾಡುವಾಗ ಅವಶ್ಯವಿದ್ದೆಡೆ ಹಂಪ್ಸ್‌ಗಳನ್ನು ಹಾಕಿಲ್ಲ. ಝಿಬ್ರಾ ಕ್ರಾಸಿಂಗ್‌ ಕೂಡ ಹಾಕಿಲ್ಲ. ಹೀಗಾಗಿ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಪೊಲೀಸ್‌ ಇಲಾಖೆಗೆ ಹಲವಾರು ಬಾರಿ ಟ್ರಾಫಿಕ್‌ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳುವಂತೆ ಹಲಬಾರು ಬಾರಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಕೆಲವೊಮ್ಮೆ ಅಪಘಾತಗಳು ನಡೆದು ಜೀವಹಾನಿ ಸಂಭವಿಸಿವೆ. ಆದರೂ ಕಠಿಣಕ್ರಮಕ್ಕೆ ಇಲಾಖೆ ಮುಂದಾಗಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ಪಟ್ಟಣದ ರಾಜ್ಯ ಹೆದ್ದಾರಿ ಸೇರಿದಂತೆ ನವಲಿ ರಸ್ತೆ, ಬೂದಗುಂಪ ರಸ್ತೆಗಳ ಅಕ್ಕಪಕ್ಕದಲ್ಲಿ ತಳ್ಳು ಬಂಡಿ, ಗೂಡಂಗಡಿ, ಡಬ್ಟಾ ಅಂಗಡಿಗಳ ವ್ಯಾಪಾರಸ್ಥರು ರಸ್ತೆಯ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್‌ ಸ್ಥಳವಿಲ್ಲದೇ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಾಗಿ ನಿತ್ಯ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ಸಮಸ್ಯೆಯಾಗುತ್ತದೆ. ಪುರಸಭೆ, ಪೊಲೀಸ್‌ ಇಲಾಖೆ ಇದರ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಪಟ್ಟಣದ ಜನತೆ ಆಗ್ರಹಿಸಿದ್ದಾರೆ.

Advertisement

ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭಗೊಂಡು ಜನರ ಓಡಾಟವೂ ಹೆಚ್ಚಿದೆ. ವಾಹನಗಳ ಒಡಾಟವು ಹೆಚ್ಚಿದೆ. ಹೀಗಾಗಿ ರಾಜ್ಯ ಹೆದ್ದಾರಿಯಲ್ಲಿ ಮಕ್ಕಳು ಮಹಿಳೆಯರು ಓಡಾಡುವುದು ದುಸ್ತರವಾಗಿದ್ದು ಮಕ್ಕಳ ಹಿತದೃಷ್ಟಿಯಿಂದ ನಿತ್ಯ ಮಕ್ಕಳನ್ನು ರಸ್ತೆ ದಾಟಿಸುವ ಕೆಲಸ ಮಾಡುತ್ತಿದ್ದೇವೆ. –ಶಾಮಸುಂದರ್‌ ಇಂಜನಿ, ಶಾಲೆಯ ಮುಖ್ಯಗುರು

ಕಾರಟಗಿ ಮತ್ತು ಕನಕಗಿರಿ ನೂತನ ತಾಲೂಕುಗಳ ಪೊಲೀಸ್‌ ಠಾಣೆಗಳಿಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಸಿಬ್ಬಂದಿ ನೇಮಕವಾಗುತ್ತದೆ. ಕಾರಟಗಿ ಪಟ್ಟಣದ ಟ್ರಾಫಿಕ್‌ ಸಮಸ್ಯೆಯನ್ನು ಸೋಮವಾರದಿಂದಲೇ ನಿಯಂತ್ರಣಕ್ಕೆಮುಂದಾಗುವಂತೆ ಸೂಚಿಸುತ್ತೇನೆ. –ರುದ್ರೇಶ ಉಜ್ಜೀನಕೊಪ್ಪ,ಡಿವೈಎಸ್‌ಪಿ

ಕಾರಟಗಿ ಸರಕಾರಿ ಶಾಲೆ ಮುಂಭಾಗದ ಅಂಗಡಿ ಮುಂಗಟ್ಟುಗಳು, ತಳ್ಳು ಬಂಡಿಗಳಿಂದ ರಸ್ತೆ ಅತಿಕ್ರಮಣವಾಗಿ ಪಾದಚಾರಿ ರಸ್ತೆಯಿಲ್ಲದೇ ವಿದ್ಯಾರ್ಥಿಗಳು ರಸ್ತೆ ದಾಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಪುರಸಭೆ ಹಾಗೂ ಪೊಲೀಸ್‌ ಇಲಾಖೆಗೆ ಪತ್ರ ಬರೆದು ಪಾದಚಾರಿ ರಸ್ತೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವುಂತೆ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಪತ್ರ ಬರೆಯುತ್ತೆನೆ. –ಸೋಮಶೇಖರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ

„ದಿಗಂಬರ ಎನ್‌. ಕುರ್ಡೆಕರ

Advertisement

Udayavani is now on Telegram. Click here to join our channel and stay updated with the latest news.

Next