Advertisement

ವರ್ಷಾಂತ್ಯಕ್ಕೂ ಮಕ್ಕಳಿಗೆ ಸೈಕಲ್ ಸಿಗೋದು ಡೌಟು!

03:30 PM Aug 23, 2019 | Team Udayavani |

ನಂಜನಗೂಡು: ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳು ಕಳೆದಿವೆ. ಜೊತೆಗೆ ದಸರಾ ರಜೆ ಕೂಡ ಸಮೀಪಿಸುತ್ತಿದೆ. ಆದರೂ ಸಹ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿಲ್ಲ.

Advertisement

ತಾಲೂಕಿನ 78 ಸರ್ಕಾರಿ ಪ್ರೌಢಶಾಲೆಗಳ 8ನೇ ತರಗತಿಯ 3,242 ವಿದ್ಯಾರ್ಥಿಗಳು ಚಾತಕ ಪಕ್ಷಿಯಂತೆ ಸೈಕಲ್ಗಾಗಿ ಮೂರು ತಿಂಗಳಿನಿಂದ ಕಾಯುತ್ತಿದ್ದಾರೆ. ಶಾಲಾ ಆರಂಭವಾದಾಗಿನಿಂದಲೂ ಸೈಕಲ್ ಇಂದು ಬರುತ್ತದೆ, ನಾಳೆ ಬರುತ್ತದೆ ಎಂಬ ಭರವಸೆಯನ್ನಿಟ್ಟುಕೊಂಡಿದ್ದರು. ಆದರೆ, ನೂರು ದಿನಗಳು ಕಳೆದರೂ ಅವರ ಆಸೆ ಈಡೇರಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾತಿನ ಪ್ರಕಾರ, ಇನ್ನೂ 3 ತಿಂಗಳು ಕಾಯಬೇಕಾಗಿದೆ. ವರ್ಷಾಂತ್ಯಕ್ಕಾದರೂ ಮಕ್ಕಳಿಗೆ ಸೈಕಲ್ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಬೇಜವಾಬ್ದಾರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳು ಸಕಾಲದಲ್ಲಿ ಶಾಲೆಗಳಿಗೆ ತೆರಳುವ ನಿಟ್ಟಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸೈಕಲ್ ವಿತರಿಸುವ ಯೋಜನೆ ರೂಪಿಸಿದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ವರ್ತನೆಯಿಂದ ಸೌಲಭ್ಯಗಳ ಸಕಾಲದಲ್ಲಿ ಸಿಗದೇ ಪರದಾಡುವಂತಾಗಿದೆ.

ಪರದಾಟ: ಸಕಾಲದಲ್ಲಿ ಬೈಸಿಕಲ್ ಸಿಗದ ಪರಿಣಾಮ ಮಕ್ಕಳು ಮಳೆ, ಗಾಳಿ, ಬಿಸಿಲಿನಲ್ಲೇ ಸಂಚರಿಸು ವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ಬಸ್‌ ಸೌಲಭ್ಯವಿಲ್ಲದ ಕಾರಣ ಸರಿಯಾದ ಸಮಯಕ್ಕೆ ಹಾಜರಾಗುವುದು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿ ಗಳು ಅವಲತ್ತುಕೊಂಡಿದ್ದಾರೆ.

ಸೈಕಲ್ ಬಿಡಿಭಾಗ ಜೋಡಣೆ: ತಾಲೂಕಿನ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ನೀಡಲೆಂದು ತಂದಿರುವ ಈ ಸೈಕಲ್ ಬಿಡಿ ಭಾಗಗಳನ್ನು ನಗರದ ರಾಷ್ಟ್ರಪತಿ ರಸ್ತೆಯಲ್ಲಿನ ನಾಗಮ್ಮ ಶಾಲಾ ಆವರಣದ ಹಿಂಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗುರು ಭವನದ ಎದುರು ಗುಡ್ಡೆ ಹಾಕಲಾಗಿದೆ. ಬಿಡಿ ಭಾಗಗಳನ್ನು ಜೋಡಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ಕೆಲಸ ಆಗಿಲ್ಲ. ಇದರಿಂದ ಬಿಡಿ ಭಾಗಗಳು ಬಿಸಿಲು, ಗಾಳಿ ಮಳೆಗೆ ತುಕ್ಕು ಹಿಡಿಯುವ ಹಂತಕ್ಕೆ ತಲುಪಿವೆ.

Advertisement

ಅವುಗಳನ್ನು ಜೋಡಿಸಲು ಪರವಾನಿಗೆ ಪಡೆದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೃಪಾಕಟಾಕ್ಷೆ ಪಡೆಯಬೇಕು. ಬಳಿಕ ಶಾಲಾವಾರು ಇವುಗಳ ರವಾನೆಯಾಬೇಕು. ಅದಾದ ಮೇಲೆ ಜನಪ್ರತಿ ನಿಧಿಗಳ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿ ಮಕ್ಕಳಿಗೆ ವಿತರಿಸಬೇಕು. ಈ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲು ಇನ್ನು ಎರಡು ಮೂರು ತಿಂಗಳು ಕಾಯಬೇಕಾಗುತ್ತದೆ. ಈಗಾದರೆ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗದೇ ಹಳ್ಳ ಹಿಡಯುತ್ತವೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಕಲ ಸಿದ್ಧತೆ ಮಾಡಿಕೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಈ ರೀತಿಯ ಅವ್ಯವಸ್ಥೆ ಉಂಟಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ವರಿತವಾಗಿ ಸೈಕಲ್ ವಿತರಿಸಬೇಕು ಎಂದು ವಿದ್ಯಾಥಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

● ಶ್ರೀಧರ್‌ ಆರ್‌.ಭಟ್

Advertisement

Udayavani is now on Telegram. Click here to join our channel and stay updated with the latest news.

Next