Advertisement

ಸಾಯುತ್ತಿವೆ ಮಕ್ಕಳು ತುತ್ತು ಊಟವಿಲ್ಲದೆ…

06:15 AM Oct 31, 2017 | |

ಹಸಿವಿನಿಂದ ಬರುವ ಸಾವಿದೆಯಲ್ಲ, ಅದು ನಿಜಕ್ಕೂ ವಿಪರೀತ ತ್ರಾಸದಾಯಕವಾದದ್ದು. ಒದ್ದಾಡಿ ಒದ್ದಾಡಿ ನಿಧ ನಿಧಾನಕ್ಕೆ ಸಾಯುತ್ತಾರೆ. ಅಂತಿಮ ಕ್ಷಣದಲ್ಲಿ ಮಕ್ಕಳ ಪರಿಸ್ಥಿತಿ ಎಷ್ಟು ಹದಗೆಡುತ್ತದೆಂದರೆ ಅವರಿಗೆ ಕೂರುವುದಕ್ಕೂ ಆಗುವುದಿಲ್ಲ, ಧ್ವನಿ ಹೊರಡಿಸುವುದಕ್ಕೂ ಆಗುವುದಿಲ್ಲ. ನೀರು ಕುಡಿಯುವುದಕ್ಕೂ ವಿಪರೀತ ಕಷ್ಟಪಡಬೇಕಾಗುತ್ತದೆ. ಈ ಪಾಟಿ ದುರ್ಬಲವಾಗಿರುವಾಗ ಯಾವುದಾದರೊಂದು ರೋಗ ಅಂಟಿಕೊಂಡೇ ಬಿಡುತ್ತದೆ. ಆಗ ಸರಕಾರಿ ಅಧಿಕಾರಿಗಳು ಆ ರೋಗದಿಂದಾಗಿ ಮಗು ಸತ್ತಿತೇ ಹೊರತು ಹಸಿವಿನಿಂದಲ್ಲ ಎಂದು ಘೋಷಿಸಿಬಿಡುತ್ತಾರೆ.

Advertisement

ಜಾರ್ಖಂಡ್‌ನ‌ಲ್ಲಿ 11 ವರ್ಷದ ಹೆಣ್ಣುಮಗು “ಸಂತೋಷಿ’ ಹಸಿವಿನಿಂದ ಮೃತಪಟ್ಟಿತು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಲ್ಲಿನ ಸರ್ಕಾರಿ ಅಧಿಕಾರಿಗಳೆಲ್ಲ “ಆ ಹುಡುಗಿ ಸತ್ತಿದ್ದು ಮಲೇರಿಯಾದಿಂದ’ ಎಂದು ಸಾಬೀತುಮಾಡಲು ಟೊಂಕಕಟ್ಟಿ ನಿಂತುಬಿಟ್ಟರು. ಸಂತೋಷಿ ಸಾಯುವ ತನಕವೂ “ಅನ್ನ ಬೇಕು, ಅನ್ನ ಬೇಕು ಅಂತ ನರಳಿದಳು’ ಎಂದು ಆಕೆಯ ತಾಯಿ ಪದೇ ಪದೆ ಹೇಳಿದಳು. ಆದರೆ ಒಬ್ಬ ಬಡ ದುರ್ಬಲ ಹೆಂಗಸಿನ ಮಾತನ್ನು ಯಾರು ಕೇಳುತ್ತಾರೆ? ಎಲ್ಲರೂ ಅಧಿಕಾರ ವರ್ಗದ ಮಾತಿಗೇ ಕಿವಿಗೊಟ್ಟರು. 

ಒಂದೂವರೆ ತಿಂಗಳಿಂದ ಸಂತೋಷಿಯ ಮನೆಯಲ್ಲಿ ಒಂದು ಕಾಳು ಅಕ್ಕಿ ಅಥವಾ ಗೋಧಿಯಿರಲಿಲ್ಲವಂತೆ. “ಆಧಾರ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಅಗ್ಗದ ದರದಲ್ಲಿ ರೇಷನ್‌ ಕೊಡಲು ನಿರಾಕರಿಸಿಬಿಟ್ಟರು’ ಎಂದೂ ಸಂತೋಷಿಯ ತಾಯಿ ಪತ್ರಕರ್ತರೊಬ್ಬರ ಮುಂದೆ ನೋವು ತೋಡಿಕೊಂಡರು. ಆದರೆ ಸರ್ಕಾರಿ ಅಧಿಕಾರಿಗಳು ಈ ಮಾತನ್ನೂ ಅಲ್ಲಗಳೆದುಬಿಟ್ಟರು. ಕೆಲ ದಿನಗಳವರೆಗೆ ಸಂತೋಷಿಯ ಸಾವಿನ ಸುದ್ದಿ ಚರ್ಚೆಯಲ್ಲಿತ್ತು, ನಂತರ ಪತ್ರಕರ್ತರ ಚಿತ್ತ ಬೇರೆಡೆ ಹರಿಯಿತು. ಜಾರ್ಖಂಡ್‌ ಸರ್ಕಾರ ತನಿಖೆಗಾಗಿ ಒಂದು ಸಮಿತಿಯನ್ನು ರಚಿಸಿ ನತದೃಷ್ಟ ಬಾಲಕಿಯ ಸಾವನ್ನು ಫೈಲುಗಳಲ್ಲಿ ಕಟ್ಟುಹಾಕಿ ಮೂಲೆಗೆಸೆಯಿತು.  

ನಾನು ಒಡಿಶಾದಲ್ಲಿ ಮತ್ತು ಮಹಾರಾಷ್ಟ್ರದ ನಂದೂರ್ಬಾರ್‌ ಜಿಲ್ಲೆಯಲ್ಲಿ ಮಕ್ಕಳು ಹಸಿವಿನಿಂದ ಸಾಯುವುದನ್ನು ನೋಡಿ ದ್ದೇನೆ. ಹೀಗಾಗಿ ಹೇಳುತ್ತಿದ್ದೇನೆ. ನಾನು ನನ್ನ ಜೀವನದಲ್ಲಿ ಅದಕ್ಕಿಂತಲೂ ಯಾತನಾಮಯ ದೃಶ್ಯವನ್ನು ಮತ್ತೆಲ್ಲೂ ಕಂಡಿಲ್ಲ. ಹಸಿವಿನಿಂದ ಬರುವ ಸಾವಿದೆಯಲ್ಲ, ಅದು ನಿಜಕ್ಕೂ ವಿಪರೀತ ತ್ರಾಸದಾಯಕವಾದದ್ದು. ಒದ್ದಾಡಿ ಒದ್ದಾಡಿ ನಿಧ ನಿಧಾನಕ್ಕೆ ಸಾಯುತ್ತಾರೆ. ಅಂತಿಮ ಕ್ಷಣದಲ್ಲಿ ಮಕ್ಕಳ ಪರಿಸ್ಥಿತಿ ಎಷ್ಟು ಹದಗೆಡುತ್ತದೆಂದರೆ ಅವರಿಗೆ ಕೂರುವುದಕ್ಕೂ ಆಗುವುದಿಲ್ಲ, ಧ್ವನಿ ಹೊರಡಿಸುವುದಕ್ಕೂ ಆಗುವುದಿಲ್ಲ. ನೀರು ಕುಡಿಯುವುದಕ್ಕೂ ವಿಪರೀತ ಕಷ್ಟಪಡಬೇಕಾಗುತ್ತದೆ. ಈ ಪಾಟಿ ದುರ್ಬಲವಾಗಿರು ವಾಗ ಯಾವುದಾದರೊಂದು ರೋಗ ಅಂಟಿಕೊಂಡೇ ಬಿಡುತ್ತದೆ. ಆಗ ಸರ್ಕಾರಿ ಅಧಿಕಾರಿಗಳು ಆ ರೋಗದಿಂದಾಗಿಯೇ ಮಗು ಸತ್ತಿತೇ ಹೊರತು ಹಸಿವಿನಿಂದಲ್ಲ ಎಂದು ಘೋಷಿಸಿಬಿಡುತ್ತಾರೆ. 

ಭಾರತೀಯ ಮಕ್ಕಳು ಹಸಿವಿನಿಂದ ಸಾಯುತ್ತಿರುವ ಸಂಗತಿಯನ್ನು ಅದೇಕೆ ಅಲ್ಲಗಳೆಯಲಾಗುತ್ತದೆ ಗೊತ್ತೇ? ಏಕೆಂದರೆ, ಇದುವರೆಗೂ ದೇಶದಲ್ಲಿ ಸಮಾಜವಾದಿ ನೀತಿಯ ಅಡಿಯಲ್ಲಿ ಮಕ್ಕಳ ಪಾಲನೆ-ಪೋಷಣೆಗಾಗಿ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದೆ, ದೊಡ್ಡ ದೊಡ್ಡ ಯೋಜನೆಗಳನ್ನು ರಚಿಸಲಾಗಿದೆ, ಅವುಗಳನ್ನು ಸಂಭಾಳಿಸಲು ಲಕ್ಷಾಂತರ ಸರ್ಕಾರಿ ಅಧಿಕಾರಿಗಳು ಮತ್ತು ಸಾವಿರಾರು ಸರ್ಕಾರಿ ವಿಭಾಗಗಳನ್ನು ತೆರೆಯಲಾಗಿದೆ. ಹೀಗಾಗಿ ಒಂದು ವೇಳೆ “ಉಪಯೋಗಕ್ಕೆ ಬರುತ್ತಿಲ್ಲ’ ಎಂದು ಈ ಯೋಜನೆಗಳನ್ನು ನಿಲ್ಲಿಸಿಬಿಟ್ಟರೆ ಸರ್ಕಾರಿ ಕಚೇರಿಗಳಲ್ಲಿ ತಿಂದುಂಡು ದಷ್ಟಪುಷ್ಟವಾಗಿರುವವರು ಕೆಲಸ ಕಳೆದುಕೊಳ್ಳುತ್ತಾರೆ. ಇವರಿಗೆ ಅಲ್ಲಿ ಬಿಟ್ಟರೆ ಬೇರೆಡೆ ಕೆಲಸ ಮಾಡುವುದಕ್ಕೂ ಬರುವುದಿಲ್ಲವಲ್ಲ! 

Advertisement

ನರೇಂದ್ರ ಮೋದಿಯವರ “ನ್ಯೂ ಇಂಡಿಯಾ’ದಲ್ಲಿ ಈ ಯೋಜನೆಗಳನ್ನೆಲ್ಲ ಬಂದ್‌ ಮಾಡಿ ಹೊಸ ಮಾರ್ಗದ ಮೂಲಕ ಬಡವರನ್ನು ತಲುಪುವ ಸಮಯ ಎದುರಾಗಿದೆ. ಐಸಿಡಿಎಸ್‌(ಏಕೀಕೃತ ಬಾಲವಿಕಾಸ ಯೋಜನೆ)ನಂಥ ಯೋಜನೆಗಳನ್ನು ಕಸದಬುಟ್ಟಿಗೆ ಎಸೆಯುವ ಅಗತ್ಯವಿದೆ ಎಂದು ಒಪ್ಪಿಕೊಳ್ಳುವ ಸಮಯ ಎದುರಾಗಿದೆ. 1975ರಲ್ಲಿ ಇಂದಿರಾ ಗಾಂಧಿ ಈ ಯೋಜನೆಯನ್ನು ಆರಂಭಿಸಿದರು. ಭಾರತದ ಮಕ್ಕಳ ವಿಕಾಸಕ್ಕೆ ಇದು ದೊಡ್ಡ ಪ್ರಯತ್ನವಾಗಬೇಕು ಎಂಬ ಉದ್ದೇಶ ಅವರ ದ್ದಾ ಗಿತ್ತು. ಆದರೆ ಈ ಪ್ರಯತ್ನ ವಿಫ‌ಲವಾಯಿತು ಎಂದು ಒಪ್ಪಿಕೊಳ್ಳುವ ಸಮಯ ಎದುರಾಗಿದೆ. ಗ್ರೌಂಡ್‌ಲೆವೆಲ್‌ನಲ್ಲಿ ಈ ಯೋಜನೆಗಳು ಹೇಗೆ ಅನ್ವಯವಾಗುತ್ತಿವೆ ಎನ್ನುವುದನ್ನು ನಾನು ಅನೇಕ ಬಾರಿ ನೋಡಿದ್ದೇವೆ. ಇದರ ನಿಯಮಗಳು ಎಷ್ಟೊಂದು ವಿಚಿತ್ರವಾಗಿವೆಯೆಂದರೆ ಇದು ಎಂದಿಗೂ ಸಫ‌ಲವಾಗದು. ಉದಾಹರಣೆಗೆ, ನಂದೂರ್‌ಬಾರ್‌ ಜಿಲ್ಲೆಯಲ್ಲಿ ಬರ ಆವರಿಸಿದ್ದ ಸಮಯವದು. ಆ ಜಿಲ್ಲೆಯ ಅಕಲ್‌ಕೋವಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿನ ಹಂತದಲ್ಲಿದ್ದ ಮಕ್ಕಳಿಗಷ್ಟೇ ಈ ಯೋಜನೆಯ ಫ‌ಲ ದೊರೆಯುತ್ತಿತ್ತು. 

ಅಂದರೆ ತೀರಾ ಅಸ್ವಸ್ಥರಾಗಿದ್ದ ಮಕ್ಕಳಿಗಷ್ಟೆ! ತೀರಾ ಅಸ್ವಸ್ಥವಾದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಐಸಿಡಿಎಸ್‌ನ ಅನ್ವಯ ನಲವತ್ತು ರೂಪಾಯಿಯ ಪೋಷಣೆ ನೀಡಲಾಗುತ್ತಿತ್ತು. ಈ ಮಕ್ಕಳ ಆರೋಗ್ಯ ತುಸು ಸುಧಾರಿಸುತ್ತಿದ್ದಂತೆಯೇ ಅವರನ್ನು ವಾಪಸ್‌ ಮನೆಗೆ ಕಳುಹಿಸಲಾಗುತ್ತಿತ್ತು. ಆ ಮನೆಗಳ ಜನರಿಗೋ ದಿನಕ್ಕೆ ಊಟಕ್ಕೆ ಹತ್ತು ರೂಪಾಯಿ ಖರ್ಚು ಮಾಡುವ ಕ್ಷಮತೆಯೂ ಇರುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಹಿಂದಿರುಗಿದ ಮಕ್ಕಳಿಗೆ ಮತ್ತೆ ಒಂದು ಹೊತ್ತ ಊಟ ಸಿಗುತ್ತಿತ್ತು. ಅದೂ ನೀರು ಖೀಚಡಿ.  

ಹೀಗಾಗಿ ಗ್ರಾಮಾಂತರ ಭಾಗದಲ್ಲಿ ಐಸಿಡಿಎಸ್‌ ಯೋಜನೆಯ ಬದಲಿಗೆ, ಎಲ್ಲಾ ಮಕ್ಕಳಿಗೂ ಒಂದು ಹೊತ್ತು ಹೊಟ್ಟೆತುಂಬ ಊಟ ಸಿಗುವಂತೆ ಮಾಡಿದರೆ ಪರಿಸ್ಥಿತಿ ಎಷ್ಟೋ ಸುಧಾರಿಸುತ್ತದೆ. ನಾನು ಅಕಲ್‌ಕೋವಾಗೆ ತೆರಳಿದ್ದಾಗ, ಅಲ್ಲಿನ ಇಸ್ಲಾಮಿಕ್‌ ಸಂಸ್ಥೆಯೊಂದು ಈ ರೀತಿಯ ಕೆಲಸ ಮಾಡುತ್ತಿದ್ದುದ್ದನ್ನು ನೋಡಿದೆ. ಈ ಸಂಸ್ಥೆ ದಿನವೂ ಬೇಯಿಸಿದ ಆಹಾರವನ್ನು ವಿದ್ಯಾರ್ಥಿಗಳ ಮೂಲಕ ಬರಪೀಡಿತ ಹಳ್ಳಿಗಳಿಗೆ ಕಳುಹಿಸಿಕೊಡುತ್ತಿತ್ತು. 

ನರೇಂದ್ರ ಮೋದಿ ಇಂಥ ಕೆಲಸ ಮಾಡಿದರೆ ಸಾಕು. ಐಸಿಡಿಎಸ್‌ನ ಮೇಲೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲು ಉಚಿತ ಕ್ಯಾಂಟೀನ್‌(ಅಮ್ಮಾ) ತೆರೆದರೆ ಸಾಕು 2019ರಲ್ಲಿ ಅವರ ಗೆಲುವು ನಿಶ್ಚಿತವಾಗುತ್ತದೆ. ತಮಿಳುನಾಡಿನಲ್ಲಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆರಂಭಿಸಿದ್ದ ಈ ಕ್ಯಾಂಟೀನ್‌ ಸಾಮಾನ್ಯ ಜನರ ಜೀವನವನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು. 

ಗ್ರಾಮೀಣ ಪ್ರದೇಶಗಳಲ್ಲಿ ಅಪೌಷ್ಟಿಕತೆಯನ್ನು ತಡೆಯಲು ಮೋದಿ ಬಹಳಷ್ಟು ಕೆಲಸ ಮಾಡಬಹುದು. ಆದರೆ ಅದಕ್ಕಿಂತಲೂ ಮೊದಲು, ಕಾಂಗ್ರೆಸ್‌ ಸಮಯದಲ್ಲಿ ಬಂದ ಐಸಿಡಿಎಸ್‌ನಂಥ ಯೋಜನೆಗಳು ಪೂರ್ಣವಾಗಿ ವಿಫ‌ಲವಾಗಿವೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮೋದಿಯವರ ಸಮಸ್ಯೆಯೇನೆಂದರೆ ತಮ್ಮ ಸುತ್ತಲೂ ಇರುವ ಅಧಿಕಾರಿಗಳ ಮೇಲೆ ಅವರಿಗೆ ಯಾವ ಪಾಟಿ ವಿಶ್ವಾಸವಿದೆಯೆಂದರೆ, ಈ ಅಧಿಕಾರಿಗಳೇ ಮೋದಿಯ ವರ ಮೇಲೆ ಪೂರ್ತಿ ಹಿಡಿತಹೊಂದಿದ್ದಾರೆ ಮತ್ತು ಇವರೆಲ್ಲ ಬದಲಾವಣೆಗೆ ತಡೆ ಒಡ್ಡುತ್ತಿದ್ದಾರೆ ಎಂದು ಪ್ರಧಾನಿಗಳ ಸಮರ್ಥ ಕರೂ ಹೇಳುತ್ತಾರೆ. ಎಲ್ಲಿ ತಮ್ಮ ಅಧಿಕಾರ ಮತ್ತು ಶಕ್ತಿ ಕೈ ಜಾರುತ್ತದೋ ಎಂಬ ನಿರಂತರ ಹೆದರಿಕೆಯಲ್ಲಿರುವ ಈ ಅಧಿ
ಕಾರ ವರ್ಗ, ಪರಿವರ್ತನೆಯ ಹೆಸರು ಕೇಳಿದರೆ ಸಾಕು ಬೆಚ್ಚಿ ಬೀಳುತ್ತದೆ. ಮೋದಿ ಒಂದು ವೇಳೆ ಈ ಅಧಿಕಾರ ವರ್ಗದ 
ಹಿಡಿತಕ್ಕೆ ಸಿಲುಕದೇ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಅವರು ಈ ಐಸಿಡಿಎಸ್‌ನಂಥ ಯೋಜನೆಗಳನ್ನು ರದ್ದು ಮಾಡಿಬಿಡುತ್ತಿದ್ದರು ಎಂದು ವಿಶೇಜ್ಞರು ಹೇಳುತ್ತಾರೆ. 

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಹೊಸತರಲ್ಲಿ “ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ’ಯನ್ನು ವಿರೋಧಿಸಿದ್ದರು. ಆದರೆ ಅದೇನಾಯಿತೋ ತಿಳಿಯದು. ಮುಂದೆ ಅದೇ ಯೋಜನೆಯ ಬಜೆಟ್‌ ಅನ್ನು ಅವರು ಹೆಚ್ಚಿಸಿಬಿಟ್ಟರು. ನರೇಗಾ ಮತ್ತು ಐಸಿಡಿಎಸ್‌ ಒಂದೇ ರೀತಿಯ ಯೋಜನೆಗಳು. ಇವುಗಳ ವೈಫ‌ಲ್ಯದ ಹಿಂದೆಯೂ ಒಂದೇ ರೀತಿಯ ಕಾರಣವಿದೆ. ಬಡವರಿಗಾಗಿ ಅಸ್ತಿತ್ವಕ್ಕೆ ಬಂದ ಈ ಯೋಜನೆಗಳ ಅಸಲಿ ಲಾಭ ಸಿಗುವುದು ಅಧಿಕಾರಿಗಳಿಗೇ ಹೊರತು, ಬಡವರಿಗಂತೂ ಅಲ್ಲ. ಈ ವಿಶಾಲ ಯೋಜನೆಗಳನ್ನು ಮುನ್ನಡೆಸಲು ಹೊಸ-ಹೊಸ ಸರ್ಕಾರಿ ವಿಭಾಗಗಳನ್ನು ತೆರೆಯಲಾಗುತ್ತದೆ. ಆ ವಿಭಾಗಗಳು ಅಸ್ತಿತ್ವಕ್ಕೆ ಬಂದದ್ದೇ ಸರ್ಕಾರಿ ಅಧಿಕಾರಿಗಳಿಗೆ ಲಾಭ ಮಾಡಿಕೊಳ್ಳಲು ಹೊಸ ಹೊಸ ಅವಕಾಶಗಳು ಎದುರಾಗುತ್ತವೆ. ಬಡವರಿಗೆ ಸಿಗುವ ಹಣವಿದೆಯಲ್ಲ, ಅದು ಲೆಕ್ಕಕ್ಕೇ ಇಲ್ಲದಷ್ಟು ಅಲ್ಪವಾಗಿರುತ್ತದೆ. ಈ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ ಅದೇಕೋ ಈ ಯೋಜನೆ ಗಳನ್ನು ನಿಲ್ಲಿಸುವ ಧೈರ್ಯವನ್ನು ಇದುವರೆಗೂ ಯಾವೊಬ್ಬ ಪ್ರಧಾನಿಯೂ ತೋರಿಸಿಲ್ಲ. 
(ಹಿಂದಿಯ ಜನಸತ್ತಾ ತಾಣದಲ್ಲಿ ಪ್ರಕಟಿತ ಲೇಖನ)

– ತವಿÉàನ್‌ ಸಿಂಗ್‌, ಹಿರಿಯ ಪತ್ರಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next