ಬಳ್ಳಾರಿ: ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಯತ್ನಿಸಿದ ಎರಡು ಕಡೆಯ ಕುಟುಂಬದವರು, ಸಹಕರಿಸಿದಪುರೋಹಿತರು, ಕಲ್ಯಾಣಮಂಟಪದವರು, ಮದುವೆ ಆಮಂತ್ರಣ ಮುದ್ರಕರು, ಅಡುಗೆ ಮಾಡಿದವರು ಸೇರಿದಂತೆ ಎಲ್ಲರ ಮೇಲೂ ನಿಯಮಾನುಸಾರ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚೈಲ್ಡ್‌ಲೈನ್ ಸಲಹಾ ಸಮಿತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 247 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. 16 ಪ್ರಕರಣಗಳು ದಾಖಲಿಸಲಾಗಿದೆ ಮತ್ತು 231 ವೈಯಕ್ತಿಕ ಬಾಲ್ಯವಿವಾಹಗಳಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾಹಿತಿಗೆ ಪ್ರತಿಕ್ರಿಯಿಸಿದ ಡಿಸಿ ನಕುಲ್, ಬಾಲ್ಯವಿವಾಹ ನಡೆಸಲು ಯತ್ನಿಸಿದವರ ಕುಟುಂಬಗಳ ವಿಷಯದಲ್ಲಿ ನಿರಂತರ ನಿಗಾವಹಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಒಂದು ವೇಳೆ ಬಾಲ್ಯವಿವಾಹ ಮಾಡಿದ್ದು ಕಂಡುಬಂದಲ್ಲಿ ಎರಡು ಕುಟುಂಬಗಳು ಹಾಗೂ ಇದಕ್ಕೆ ಸಹಕರಿಸಿದವರ ಮೇಲೆ ಮತ್ತು ಅಲ್ಲಿನ ಗ್ರಾಮಲೆಕ್ಕಿಗ, ಅಂಗನವಾಡಿ ಕಾರ್ಯಕರ್ತೆ, ಪಿಡಿಒ, ಸಂಬಂಧಿಸಿದ ಪೊಲೀಸ್ ಪೇದೆ ಅವರನ್ನು ಹೊಣೆಗಾರಿಕೆ ಮಾಡಿ ಕ್ರಮಕೈಗೊಳ್ಳಬೇಕು. ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅತ್ಯಂತ ಮುತುವರ್ಜಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಬಾಲ್ಯವಿವಾಹ ತಡೆದ ಕುಟುಂಬಗಳೊಂದಿಗೆ ಟೆಲಿಕೌನ್ಸೆಲಿಂಗ್ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಿ: ಬಾಲ್ಯವಿವಾಹ ತಡೆ ಮತ್ತು ಚೈಲ್ಡ್‌ಲೈನ್ ಸಲಹಾ ಸಮಿತಿಗೆ ಸಂಬಂ ಧಿಸಿದ ಸಮಿತಿಗಳನ್ನು ಗ್ರಾಪಂ ಮಟ್ಟದಲ್ಲಿಯೂ ರಚಿಸಬೇಕು. ಈ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿ ಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ ಈ ವಿಷಯದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಬೇಕು. ಬಾಲ್ಯವಿವಾಹ, ಮಕ್ಕಳ ರಕ್ಷಣೆ, ಪೋಕ್ಸೋ ಕಾಯ್ದೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಪಂಗಳ ಕಸತ್ಯಾಜ್ಯ ವಾಹನಗಳಲ್ಲಿ ಆಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಪೋಕ್ಸೋ ಕಾಯ್ದೆ ಗಂಭೀರವಾಗಿ ಪರಿಗಣಿಸಿ: ಇದೇ ವೇಳೆ ಅಧಿಕಾರಿಗಳು ಪೋಕ್ಸೋ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಡಿಸಿ ನಕುಲ್, ಪೋಕ್ಸೋ ಅಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರದೊಳಗೆ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಸಲ್ಲಿಸುವಂತೆ ಸಿಡಿಪಿಒ ಕ್ರಮ ವಹಿಸಬೇಕು. ವರದಿ ಯಾರ್ಯಾರು ನೀಡಿದ್ದಾರೆ. ಇನ್ಯಾರು ಬಾಕಿ ಇವೆ ಎಂಬುದರ ವರದಿಯನ್ನು ಸಲ್ಲಿಸುವಂತೆ ಸಮಿತಿಯವರಿಗೆ ತಿಳಿಸಿದರು.
41 ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು: ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 41 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಅವರು ಸಭೆ ಗಮನಕ್ಕೆತಂದರು. ಈವರೆಗೆ 175 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಒಂದು ಪ್ರಕರಣ ಖುಲಾಸೆಯಾಗಿದೆ. ಇನ್ನೂ 174 ಪ್ರಕರಣಗಳು ಬಾಕಿ ಇವೆ. ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಮಕ್ಕಳಿಗೆ ಪುನರ್‌ವಸತಿ ಕಲ್ಪಿಸಲಾಗುತ್ತಿದ್ದು, ಅವರ ತುರ್ತುಚಿಕಿತ್ಸೆ ಸಲುವಾಗಿ ಪರಿಹಾರ ಧನ ವಿತರಿಸಲಾಗುತ್ತಿದೆ. ಇದುವರೆಗೆ 35 ಫಲಾನುಭವಿಗಳು ಈ ಅಭಯ ನಿ ಧಿ ಅಡಿಯ 4.15ಲಕ್ಷ ರೂ. ಬಳಕೆ ಮಾಡಿಕೊಂಡಿದ್ದಾರೆ. ಇನ್ನೂ 1.79ಲಕ್ಷ ರೂ. ಅನುದಾನವಿದೆ ಎಂದು ಅವರು ಹೇಳಿದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆದವು. ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್. ನಂದಿನಿ ಅವರು ಅನೇಕ ಸಲಹೆ-ಸೂಚನೆಗಳನ್ನು ಅಧಿ ಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.