Advertisement
ಸಂಜೆಯ ವೇಳೆಗೆ ಹೆಚ್ಚುವ, 2 ವಾರಗಳಿಗಿಂತ ಹೆಚ್ಚು ಅವಧಿಯಿಂದ ಇರುವ ಲಘು ಸ್ವರೂಪದ ಜ್ವರ ಬಾಲ್ಯಕಾಲದ ಕ್ಷಯ ರೋಗದ ವೈದ್ಯಕೀಯ ಲಕ್ಷಣಗಳಲ್ಲಿ ಮುಖ್ಯವಾದುದು. ಜತೆಗೆ ತೂಕ ನಷ್ಟವೂ ಇರುತ್ತದೆ. ಕಳೆದ 3 ತಿಂಗಳುಗಳಲ್ಲಿ ದಾಖಲಾದ ಮಗುವಿನ ಅತ್ಯಧಿಕ ದೇಹತೂಕದ ಶೇ. 5ಕ್ಕಿಂತ ಹೆಚ್ಚು ತೂಕ ಈ ಅವಧಿಯಲ್ಲಿ ನಷ್ಟವಾಗಿರುತ್ತದೆ. ಇದರ ಜತೆಗೆ 2 ವಾರಗಳಿಗಿಂತ ಹೆಚ್ಚು ಅವಧಿಯಿಂದ ಕೆಮ್ಮು ಕೂಡ ಇರಬಹುದು. ಆದರೆ ಮಗುವಿನ ಶ್ವಾಸಕೋಶಗಳನ್ನು ಕ್ಷಯವು ಬಾಧಿಸಿದ್ದರೆ ಮಾತ್ರ ಈ ಲಕ್ಷಣ ಕಂಡುಬರುತ್ತದೆ. ಕರುಳಿನ ಕ್ಷಯವಾಗಿದ್ದಲ್ಲಿ ಪದೇಪದೆ ಪುನರಾವರ್ತನೆಯಾಗುವ ಭೇದಿ ಮತ್ತು ಹೊಟ್ಟೆ ನೋವಿನ ಜತೆಗೆ ತೂಕ ನಷ್ಟ ಕಂಡುಬರುತ್ತದೆ. ದುಗ್ಧರಸ ಗ್ರಂಥಿಗಳ ಕ್ಷಯವಾಗಿದ್ದಲ್ಲಿ, ತೂಕ ನಷ್ಟ ಮತ್ತು ಜ್ವರದ ಜತೆಗೆ ಮಗುವಿನ ಕುತ್ತಿಗೆ ಮತ್ತು ಕಂಕುಳು ಭಾಗದಲ್ಲಿ ಸಣ್ಣ, ದೃಢವಾದ ಊತಗಳು ಕಂಡುಬರುತ್ತವೆ. ಬಾಲ್ಯಕಾಲ ಕ್ಷಯದ ಅನೇಕ ಪ್ರಕರಣಗಳಲ್ಲಿ ಕುಟುಂಬದ ಇನ್ನೊಬ್ಬ ಹಿರಿಯ ಸದಸ್ಯ ಅಥವಾ ಮನೆಯಲ್ಲಿ ವಾಸವಾಗಿರುವ ಇನ್ನೊಬ್ಬ ವ್ಯಕ್ತಿಗೆ ಕ್ಷಯ ಇರುತ್ತದೆ. ಅಪರೂಪದ ಪ್ರಕರಣಗಳಲ್ಲಿ ಕ್ಷಯಪೀಡಿತ ಮಕ್ಕಳಲ್ಲಿ ಜ್ವರದ ಜತೆಗೆ ಕಾಲುಗಳಲ್ಲಿ ಸಣ್ಣ ಕೆಂಬಣ್ಣದ ನೋವು ಸಹಿತ ಗಂಟುಗಳು ಕಾಣಿಸಿಕೊಳ್ಳಬಹುದು.
Related Articles
Advertisement
ಕ್ಷಯವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ ಕಫ (ದೊಡ್ಡ ಮಕ್ಕಳಲ್ಲಿ), ದುಗ್ಧರಸ ಗ್ರಂಥಿಗಳಿಂದ ಸಂಗ್ರಹಿಸಿದ ಅಂಗಾಂಶಗಳು ಮತ್ತು ಯಾವ ಅಂಗ ಕ್ಷಯಕ್ಕೊಳಗಾಗಿದೆ ಎಂಬುದನ್ನು ಆಧರಿಸಿ ದೇಹದ್ರವದಲ್ಲಿ ಟಿಬಿ ಬೆಸಿಲ್ಲಿ ಇರುವುದನ್ನು ಕಂಡುಹಿಡಿಯುವ ಪರೀಕ್ಷೆ ಸೇರಿವೆ. ಎದೆಯ ಎಕ್ಸ್‌ರೇ ಕೂಡ ಒಂದು ಉಪಯೋಗಿ ಪರೀಕ್ಷೆಯಾದರೂ ಸಣ್ಣ ಮಕ್ಕಳಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಲ್ಲ. ದುಗ್ಧರಸ ಗ್ರಂಥಿಗಳ ಪರೀಕ್ಷೆಗಾಗಿ ಕುತ್ತಿಗೆಯ ಅಲ್ಟ್ರಾಸೌಂಡ್, ಈ ದುಗ್ಧರಸ ಗ್ರಂಥಿಗಳ ಆಸ್ಪಿರೇಶನ್/ಬಯಾಪ್ಸಿ ಹಾಗೂ ಎದೆಯ ಸಿಟಿ ಸ್ಕ್ಯಾನ್ ಕ್ಷಯ ರೋಗ ಪತ್ತೆಗಾಗಿ ನಡೆಸಲಾಗುವ ಇತರ ಪರೀಕ್ಷೆಗಳು. ನ್ಯೂಕ್ಲಿಯಾಯಿಕ್ ಆ್ಯಸಿಡ್ ಆ್ಯಂಪ್ಲಿಫಿಕೇಶನ್ ನಂತಹ ಹೊಸ ಬಗೆಯ ಪರೀಕ್ಷೆಗಳು ಕ್ಷಯ ರೋಗವನ್ನು ಇನ್ನಷ್ಟು ವೇಗವಾಗಿ ಪತ್ತೆಹಚ್ಚಬಲ್ಲವು.
ರೋಗ ನಿರ್ಣಯವಾದ ಬಳಿಕ ರಾಷ್ಟ್ರೀಯ ಕ್ಷಯ ನಿರ್ಮೂಲನ ಯೋಜನೆ (ಎಟಿಇಪಿ) ಕೇಂದ್ರಗಳಲ್ಲಿ ರೋಗದ ನಿರ್ವಹಣೆಯನ್ನು ಮಾಡಲಾಗುತ್ತದೆ. ಕ್ಷಯಕ್ಕೆ ಔಷಧ ಚಿಕಿತ್ಸೆಯು ಬಹುವಿಧದ್ದಾಗಿದ್ದು, ಎರಡು ಹಂತಗಳನ್ನು ಹೊಂದಿರುತ್ತದೆ – ತೀವ್ರ ಹಂತ ಮತ್ತು ನಿಭಾವಣ ಹಂತ. ತೀವ್ರ ಹಂತದಲ್ಲಿ 3ರಿಂದ 4 ಔಷಧಗಳನ್ನು (ಐಸೊನಿಯಾಝಿಡ್+ ಪ್ಯಾರಾಝಿನಮೈಡ್+ಎಥಾಂಬುಟೋಲ್ +ರಿಫಾಂಪಿಸಿನ್) ಸಂಯೋಜಿತವಾಗಿ 2ರಿಂದ 3 ತಿಂಗಳುಗಳ ಕಾಲ ನೀಡಲಾಗುತ್ತದೆ. 6ರಿಂದ 9 ತಿಂಗಳುಗಳ ಕಾಲ ನಡೆಯುವ ನಿಭಾವಣ ಹಂತದಲ್ಲಿ ಇವುಗಳಲ್ಲಿ 2ರಿಂದ 3 ಔಷಧಗಳನ್ನು ಬಳಸಲಾಗುತ್ತದೆ. ಈ ಔಷಧಗಳು ಔಷಧ ಮಳಿಗೆಗಳಲ್ಲಿ ಸಾಮಾನ್ಯವಾಗಿ ಸಿಗುವುದಿಲ್ಲ; ಹಾಗಾಗಿ ಇವುಗಳನ್ನು ವೈದ್ಯರ ಶಿಫಾರಸು ಇಲ್ಲದೆ ಬೇಕಾಬಿಟ್ಟಿಯಾಗಿ ಯಾರೂ ಉಪಯೋಗಿಸಲು ಸಾಧ್ಯವಿಲ್ಲ. ಕ್ಷಯ ರೋಗ ಇದೆ ಎಂದು ಶಂಕಿಸಿ ಈ ಔಷಧಗಳನ್ನು ಸ್ವಯ ಔಷಧವಾಗಿ ತೆಗೆದುಕೊಂಡರೆ ಅವುಗಳ ವಿರುದ್ಧ ಪ್ರತಿರೋಧ ಶಕ್ತಿ ಬೆಳೆಯುತ್ತದೆ. ಇಂತಹ ಬಹು ಔಷಧ ಪ್ರತಿರೋಧಕ ಕ್ಷಯ (ಎಂಡಿಆರ್ ಡಿಬಿ) ಮತ್ತು ಅತ್ಯಂತ ಔಷಧ ಪ್ರತಿರೋಧ ಶಕ್ತಿಯುಳ್ಳ ಕ್ಷಯ (ಎಕ್ಸ್‌ಡಿಆರ್ ಟಿಬಿ)ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇಂತಹ ರೋಗಗಳನ್ನು ಗುಣಪಡಿಸಲು ಯಾವುದೇ ಔಷಧಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಇಂತಹ ಪ್ರಕರಣಗಳಲ್ಲಿ ಮರಣ ಪ್ರಮಾಣ ಹೆಚ್ಚಿರುತ್ತದೆ.
ಅಂತಿಮವಾಗಿ ಹೇಳುವುದಾದರೆ, ನಮ್ಮ ದೇಶದ ರೋಗ ದಾಖಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವ ರೋಗಗಳಲ್ಲಿ ಬಾಲ್ಯಕಾಲದ ಕ್ಷಯವೂ ಒಂದು. ಎಲ್ಲ ಕಡೆಯೂ ಇದು ಕಂಡುಬರುವುದರಿಂದ ಇಂತಹ ಪ್ರಕರಣಗಳ ಬಗ್ಗೆ ವೈದ್ಯರು ಒಂದು ಸಣ್ಣ ಪ್ರಮಾಣದ ಶಂಕೆಯನ್ನು ಹೊಂದಿರಬೇಕು. ದೀರ್ಘಕಾಲದಿಂದ ಜ್ವರ, ತೂಕನಷ್ಟ ಮತ್ತು ಇತರ ಯಾವುದೇ ಅಂಗ ನಿರ್ದಿಷ್ಟ ಲಕ್ಷಣಗಳನ್ನು ಹೊಂದಿರುವ ಮಗುವನ್ನು ಕ್ಷಯ ರೋಗ ವಿಶ್ಲೇಷಣೆಗೆ ಒಳಪಡಿಸಬೇಕು ಮತ್ತು ರೋಗ ನಿರ್ಣಯವಾದಲ್ಲಿ ಚಿಕಿತ್ಸೆಯನ್ನು ಆರಂಭಿಸಬೇಕು. ಸಂಕೀರ್ಣ ಸಮಸ್ಯೆಗಳು, ರೋಗ ಉಲ್ಬಣಾವಸ್ಥೆ ಇಲ್ಲದೆ ಇದ್ದಲ್ಲಿ ಬಾಲ್ಯಕಾಲದ ಕ್ಷಯ ರೋಗಕ್ಕೆ ಚಿಕಿತ್ಸೆ ಉತ್ತಮ ಫಲಿತಾಂಶವನ್ನು ಹೊಂದಿರುತ್ತದೆ ಮತ್ತು ರೋಗಕ್ಕೀಡಾದ ಮಕ್ಕಳು ಸಂಪೂರ್ಣ ಆರೋಗ್ಯವನ್ನು ಹೊಂದುತ್ತಾರೆ. ಎನ್‌ಟಿಇಪಿ ಕಾರ್ಯಕ್ರಮದ ಮೂಲಕ ಸರಕಾರವು ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನಗೊಳಿಸಲು ಶ್ರಮಿಸುತ್ತಿದೆ, ಇದು ನಮ್ಮ ಮಕ್ಕಳ ಆರೋಗ್ಯ, ಕ್ಷೇಮದ ದೃಷ್ಟಿಯಿಂದ ಯೋಗ್ಯವಾದುದಾಗಿದೆ.
-ಡಾ| ಸೌಂದರ್ಯಾ ಎಂ.,
ಅಸೋಸಿಯೇಟ್ ಪ್ರೊಫೆಸರ್ ಮತ್ತು ಪೀಡಿಯಾಟಿಕ್ ಅಲರ್ಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)