Advertisement

ಕವಡೆಯಲ್ಲಿ ಕೈಕಾಯಿಸುವ ಆಟ

07:30 PM Aug 25, 2020 | Suhan S |

ಇದು ಕವಡೆಗಳನ್ನು ಬಳಸಿ ಆಡುವ ಇನ್ನೊಂದು ಆಟ. ಹಿಂದಿನ ಕಾಲದಲ್ಲಿ ಮನೆಯ ಪಡಸಾಲೆಯಲ್ಲಿ ಕುಳಿತು, ಕಿರಿಯರಿಂದ ಹಿರಿಯರಾದಿಯಾಗಿ ಆಡುತ್ತಿದ್ದ ಆಟ ಇದು. ಕಾಲ ಕ್ರಮೇಣ ಮರೆಯಾಗುತ್ತಿದ್ದ ಈ ಆಟವನ್ನು ಈಗ ಕೋವಿಡ್‌ನ‌ ದೆಸೆಯಿಂದಾಗಿ ಮತ್ತೆ ಎಲ್ಲರೂ ಆಡುವಂತಾಗಿದೆ. ಇದನ್ನು ಗಚ್ಚಿಆಟ ಎಂದೂ ಕರೆಯುತ್ತಾರೆ. ಈ ಆಟವನ್ನು ಆಡಲು ಇಬ್ಬರು ಬೇಕೇಬೇಕು.

Advertisement

ಆಟದ ಸಾಮಗ್ರಿಗಳು: ಈ ಆಟ ಆಡಲು ಬೇಕಾಗಿರುವುದು ನಾಲ್ಕು ಕವಡೆಗಳು ಮಾತ್ರ.

ಆಟ ಆಡುವುದು ಹೇಗೆ?: ಮೊದಲು ಯಾರು ಆಡುವುದೆಂದು ನಿರ್ಧರಿಸಬೇಕು. ಹಾಗೂ ಎಷ್ಟು ಅಂಕಗಳಿಗೆ ಒಂದು ಗೇಮ್‌ ಎಂದು ನಿರ್ಧರಿಸಬೇಕು. ಸಾಮಾನ್ಯವಾಗಿ ಐದು, ಹತ್ತು, ಹದಿನೈದು ಹಾಗೂ ಇಪ್ಪತ್ತು ಅಂಕಗಳಿಗೆ ಒಂದು ಗೇಮ್‌ ಎಂದು ನಿರ್ಧರಿಸಲಾ ಗುತ್ತದೆ. ಆಟ ಪ್ರಾರಂಭಿಸುವವರು, ಮೊದಲಿಗೆ ನಾಲ್ಕು ಕವಡೆಗಳನ್ನು ಅಂಗೈನಿಂದ ಮೇಲಕ್ಕೆ ಚಿಮ್ಮಿ ಅದನ್ನು ಮುಂಗೈ ಮೇಲೆ ಹಿಡಿದಿಟ್ಟುಕೊಳ್ಳಬೇಕು ಹೀಗೆ ನಾಲ್ಕು ಕವಡೆಗಳನ್ನು ಮುಂಗೈ ಬೆರಳ ಮೇಲೆ ಹಿಡಿದರೆ 16 ಅಂಕ, 3 ಕವಡೆಗಳನ್ನು ಹಿಡಿದರೆ 12 ಅಂಕ, 2ನ್ನು ಹಿಡಿದಿಟ್ಟುಕೊಂಡರೆ 8 ಅಂಕ. ಒಂದು ಕವಡೆ ಮಾತ್ರ ಮುಂಗೈ ಮೇಲೆ ನಿಂತರೆ 4 ಅಂಕ. ಯಾವುದೇ ಕವಡೆ ನಿಲ್ಲದೆ ಹೋದರೆ ಆಟ ಆಡುವ ಸರದಿ ಎದುರಾಳಿಗೆ ಹೋಗುತ್ತದೆ.

ನಂತರ ಕವಡೆಯನ್ನು ಕುಲುಕಿ ನೆಲದ ಮೇಲೆ ಹಾಕಬೇಕು. ಹೀಗೆ ಹಾಕಿದಾಗ, ಎರಡು ಕವಡೆ ಮೇಲ್ಮುಖ, ಎರಡು ಕವಡೆ ಕೆಳಮುಖ ಅಥವಾ 1 ಕವಡೆ ಮೇಲ್ಮುಖ ಹಾಗೂ ಉಳಿದ 3 ಕವಡೆ ಕೆಳಮುಖವಾಗಿದ್ದರೆ, ಆಟ ಮುಂದುವರಿಸಬೇಕು. ಹೀಗೆ ವಿರುದ್ಧ ಮುಖವಾಗಿ ಬಿದ್ದ ಕವಡೆಗಳನ್ನು ತೋರು ಬೆರಳಿನ ಸಹಾಯದಿಂದ ಒಂದಕ್ಕೊಂದು ತಾಗಿಸಬೇಕು.ಹೀಗೆ ತಾಗಿಸುವಾಗ ಯಾವ ಕವಡೆಗೆ ತಾಗಿಸಬೇಕೆಂದು ಗುರಿ ಇಟ್ಟಿರುತ್ತೀರೋ, ಅದೇ ಕವಡೆಗೆ ತಾಗಿಸಬೇಕು. ಹೀಗೆ ತಾಗಿಸಿದ ಕವಡೆ, ಇನ್ನೊಂದು ಕವಡೆಗೆ ತಾಗಬಾರದು. ಇನ್ನೊಂದು ಕವಡೆಗೆ ತಾಗಿಸಿದರೆ, ಆಟ ಆಡುವ ಸರದಿ ಎದುರಾಳಿಗೆ ಹೋಗುತ್ತದೆ. (ಈ ಆಟದ ಕ್ರಮ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ)

ಉದಾಹರಣೆಗೆ, ಆಟದ ಪ್ರಾರಂಭದಲ್ಲಿ ಸ್ಪರ್ಧಿ ನಾಲ್ಕು ಕವಡೆಗಳನ್ನು ತನ್ನ ಮುಂಗೈ ಮೇಲೆ ಹಿಡಿದಿದ್ದರೆ 16 ಅಂಕಗಳನ್ನು ಆಗಲೇ ಗಳಿಸಿರುತ್ತಾನೆ. 1 ಗಿಚ್ಚಿ ಮಾಡಲು 20 ಅಂಕ ಗಳಿಸಬೇಕು. ಪ್ರತಿ ಬಾರಿ ಕವಡೆಗಳನ್ನು ಹಾಕಿ ಒಂದಕ್ಕೊಂದು ಕವಡೆಗಳನ್ನು ತಾಗಿಸಿದಾಗ ಒಂದು ಅಂಕ ಗಳಿಸುತ್ತಾನೆ. ಹೀಗೆ ಕವಡೆ ಕುಲುಕುವುದು ಹಾಕುವುದು ಮೇಲೆ ಹೇಳಿದ ರೀತಿಯಲ್ಲಿ ಬಿದ್ದ ಕವಡೆಗಳನ್ನು ತಾಗಿಸುತ್ತಾ ಹೋದಾಗ ಬರುವ ಒಂದೊಂದು ಅಂಕಗಳನ್ನು ಸೇರಿಸಿ, 20 ಆದ ಮೇಲೆ 1 ಗಿಚ್ಚಿ ಎಂದು ನಿರ್ಧರಿಸಿ, ಮತ್ತೆ ಮುಂಗೈ ಮೇಲೆ ಕವಡೆ ಹಿಡಿಯುವ ಮೂಲಕ ಆಟ ಪ್ರಾರಂಭಿಸಬೇಕು. ಯಾರು ಬೇಗ 20 ಗಿಚ್ಚಿ ಮಾಡುತ್ತಾರೋ ಅವರು ಗೆದ್ದಂತೆ. ಸೋತವರು ಕೈ ಕಾಯಿಸಬೇಕು.

Advertisement

ಅಂದರೆ, ನಾಲ್ಕು ಕವಡೆಗಳನ್ನು ನೆಲದ ಮೇಲೆ ಇಡಬೇಕು. ಅದರ ಮೇಲೆ ಸೋತವರು ಎರಡು ಕೈಗಳನ್ನು ಅಂಗೈಯನ್ನು ಪರಸ್ಪರ ಉಜ್ಜುತ್ತ ಕುಳಿತುಕೊಳ್ಳಬೇಕು (ಬೆಂಕಿಯ ಮೇಲೆ ಕೈ ಕಾಯಿಸುತ್ತಾರಲ್ಲ ಹಾಗೆ!) ಗೆದ್ದವರು ಅವರ ಕೈಗೆ ಹೊಡೆಯುತ್ತಿರಬೇಕು. ಹೀಗೆ ಹೊಡೆದಾಗ ಸೋತವರು ತಪ್ಪಿಸಿಕೊಂಡರೆ, ಕೆಳಗಿರುವ 4 ಕವಡೆಗಳಲ್ಲಿ 1 ಕವಡೆ ಅವರದಾಗುತ್ತದೆ. ಹೀಗೆ ನಾಲ್ಕು ಕವಡೆಗಳನ್ನು ಸೋತವರು ಹೊಡೆತ ತಪ್ಪಿಸಿಕೊಂಡು ತಮ್ಮದಾಗಿಸಿಕೊಂಡರೆ ಆಟ ಮುಗಿದಂತೆ.

 

 

– ಪ್ರಕಾಶ್‌ ಕೆ. ನಾಡಿಗ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next