ತುಂಬಾ ದಿನಗಳ ಅನಂತರ ಊರಿಗೆ ಹೋಗಿ ಬಂದೆ. ಒಮ್ಮೆ ನಮ್ಮ ಪ್ರಾಥಮಿಕ ಶಾಲೆಯನ್ನು ಸುತ್ತು ಹೊಡೆದಾಗ ಕಂಡಿದ್ದು ನಾವು ಕಳೆದ ನೂರಾರು ಸವಿನೆನಪುಗಳು ಒಮ್ಮೆ ಕಣ್ಣು ಮುಂದೆ ಹಾದು ಹೋದವು. ಸರಕಾರಿ ಶಾಲೆಯಲ್ಲಿ ಕಲಿತ ಬಾಲ್ಯಾವಸ್ಥೆಯು ಇಂಗ್ಲಿಷ್ ಶಾಲೆಯಲ್ಲಿ ಬರಲಾರದು.
ಅಂದಿಗೂ ಇಂದಿಗೂ ನಮ್ಮ ಜೀವನವನ್ನ ಹೋಲಿಕೆ ಮಾಡಿದರೆ ತುಂಬಾ ಬದಲಾವಣೆಗಳು ಕಾಣುತ್ತವೆ. ಆಟ, ಪಾಠ, ಇಂದಿಗೂ ನೆನಪಾಗುತ್ತವೆ.
ಏನೂ ತಿಳಿಯದ ಮುಗ್ಧ ಜೀವದ ನಗು ಇಂದಿನ ಸಂದರ್ಭದಲ್ಲಿ ಬರುವುದು ಬಹಳ ಕಡಿಮೆ. ಕೆಲವೊಮ್ಮೆ ಶಾಲೆಗೆ ಹೋಗದೆ ಹಳ್ಳ, ಕೊಳ್ಳ, ಬೆಟ್ಟ ಗುಡ್ಡಗಳನ್ನೂ ಸುತ್ತಾಡಿದ್ದುಂಟು. ಅಪ್ಪನಿಂದ ಎಷ್ಟೇ ಪೆಟ್ಟು ತಿಂದರೂ ಅಮ್ಮನ ಸಮಾಧಾನದ ಮುಂದೆ ಆ ನೋವು ಯಾವ ಲೆಕ್ಕಕ್ಕೂ ಇಲ್ಲವಾಗುತ್ತಿತ್ತು. ಶಿಕ್ಷಕರು ಹೇಳಿದ ಹೋಮ್ ವರ್ಕ್ ಮಾಡದೇ ತಿದ್ದ ಬಿಸಿಬಿಸಿ ಕಜ್ಜಾಯ ಇನ್ನೂ ಕೈಯ ಮೇಲಿದೆ. ಬಹಳ ಅನ್ಯೋನ್ಯತೆಯಿಂದ ನಮ್ಮೊಂದಿಗೆ ಇದ್ದ ಸ್ನೇಹಿತರು ನನ್ನ ಬೇಕು-ಬೇಡಗಳನ್ನು ಅರಿತಿದ್ದರು. ಇಂದಿನ ಸ್ನೇಹಿತರು ಕೊಡುವ ಪ್ರೀತಿ ಅದು ಯಾವ ಲೆಕ್ಕಕ್ಕೂ ಇಲ್ಲದಂತಾಗುತ್ತದೆ.
ಸ್ನೇಹಿತರೊಂದಿಗೆ ಜಗಳವಾಡಿ, ಕಿತ್ತಾಟ ಮಾಡಿಕೊಂಡರೂ ಮರುದಿನ ಒಂದಾಗುತ್ತಿದ್ದೆವು. ಅಷ್ಟೊಂದು ಸುಂದರ ಭಾವನೆಗಳು, ನೆನಪುಗಳು ಇಂದಿಗೂ ಮನದಲ್ಲಿ ಅಚ್ಚಳಿದಿವೆ. ಎಲ್ಲರೂ ನಮ್ಮವರೇ, ನಮ್ಮ ಬಂಧುಗಳೇ ಎಂಬ ಭಾವನೆ ಆಗ ನಮ್ಮಲ್ಲಿ ಬೇರೂರಿತ್ತು. ಇಂದಿನ ಕಾಲಕ್ಕೆ ಹೋಲಿಸಿದರೆ ಯಾರೂ ನಮ್ಮವರಾಗುವುದಿಲ್ಲ. ಅವರವರ ಆವಶ್ಯಕತೆಗೆ ಅನುಗುಣವಾಗಿ ಬರುತ್ತಾರೆ. ಹೋಗುತ್ತಾರೆ.
ಶಾಲೆಗೆ ಬಂದ ತತ್‌ಕ್ಷಣವೇ ಆವರಣವನ್ನು ಸ್ವತ್ಛಗೊಳಿಸಿ, ಎಲ್ಲ ಗಿಡ ಗಳಿಗೆ ನೀರೆರೆದು, ಸಾಲಿನಲ್ಲಿ ನಿಂತು ಪ್ರಾರ್ಥನೆ ಹಾಡಿ, ಸುಭಾಷಿತ ಓದುತ್ತಿದ್ದೆವು.
ಇಂತಹ ಶಿಸ್ತು ನಡತೆಯೇ ಇಂದಿಗೂ ನಮ್ಮ ಜೀವನ ನಡೆಸುತ್ತಿದೆ ಎಂದರೆ ತಪ್ಪಾಗಲಾರದು. ಅಂದು ನಮಗೆ ಕಲಿಸಿದ ಶಾಲೆಯ ಶಿಕ್ಷಕರು ಇಂದಿಗೂ ನೆನಪಿನಲ್ಲಿದ್ದಾರೆ. ಊರಿಗೆ ಹೋದಾಗ ಅವರನ್ನು ಭೇಟಿ ಮಾಡಿದಾಗ ಅವರು ನಮ್ಮ ಅಭ್ಯಾಸದ ಕುರಿತು ಮಾತನಾಡಿ, ಗುಡ್ ಎಂಬ ಪದ ಹೇಳಿದರೆ ಎಲ್ಲಿಲ್ಲದ ಸಂತೋಷ ನಮಗೆ. ನನ್ನ ವಿದ್ಯಾರ್ಥಿಯಾಗಿದ್ದಕ್ಕೂ ಸಾರ್ಥಕ, ಬಹಳ ಹೆಮ್ಮೆ ಎನಿಸುತ್ತದೆ ಎಂದು ಹೇಳುತ್ತಾರೆ.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಮಾತಿನಂತೆ – ಅಂದು ನಮ್ಮ ಶಿಕ್ಷಕರು ನಮ್ಮನ್ನು ತಿದ್ದಿ ತೀಡಿ ಬುದ್ಧಿ ಹೇಳದಿದ್ದರೆ ಇಂದಿಗೆ ನಾವು ಇಷ್ಟು ದೊಡ್ಡ ಮರವಾಗಿ ಬೆಳೆಯುತ್ತಿರಲಿಲ್ಲ. ನನ್ನ ಬದುಕಿನಲ್ಲಿ ಕಳೆದ ಕೆಲ ಬಾಲ್ಯ ನೆನಪುಗಳಂತೂ ಇಡೀ ಜೀವನದುದ್ದಕ್ಕೂ ಮರೆಯಲು ಸಾಧ್ಯವಿಲ್ಲ. ಆ ಭಾವನೆಗಳು ಮನದಾಳದಲ್ಲಿ ಅವಿತು ಕೂತಿವೆ. ಅಂದು ಏನೂ ತಿಳಿಯದ ಈ ಮುಗ್ಧ ಮನಸ್ಸುಗಳನ್ನ ಇಲ್ಲಿವರೆಗೆ ತಂದು ನಿಲ್ಲಿಸಿದ ಶಿಕ್ಷಕರು ಇಂದಿಗೂ ನಮಗೆ ಕರೆ ಮಾಡಿ ಪ್ರೇರಣೆ ನೀಡುತ್ತಿರುತ್ತಾರೆ ಅವರಿಗೂ ಧನ್ಯವಾದ ಹೇಳಿದರೆ ಸಾಲದು.
-ಸದಾಶಿವ ಬಿ.ಎನ್.
ಉಡುಪಿ