ಓಡುತ್ತಿರುವ ಸಮಯದ ನಡುವೆ ಒಂದು ಕ್ಷಣ ಸುಮ್ಮನೇ ಕುಂತಾಗ ಮನಸ್ಸು ಬಾಲ್ಯದ ನೆನಪಿನಲ್ಲಿ ಕಳೆದುಹೋಗುವಾಗ ಜತೆ ಕಂಬನಿ ತುಸು ನಗೆಯು ಜತೆಯಾಗಿಬಿಡುತ್ತದೆ. ಬಾಲ್ಯದ ಆ ತುಂಟಾಟ, ಖುಷಿ, ನಗು, ಅಪ್ಪನ ಭಯ, ಅಮ್ಮನ ಅಪರೂಪದ ಪೆಟ್ಟು ಇವೆಲ್ಲ ಇಂದಿಗೂ ಹಾಗೇ ಮನಸ್ಸಲ್ಲಿ ಉಳಿದುಬಿಟ್ಟಿವೆ.
ಆ ದಿನದ ಖುಷಿಯ ಗುಟ್ಟು ಇವತ್ತು ನೆನಪೇ ಹೋಗಿದೆ. ಮನೆ ಮುಂದೆ ಸೀಟಿ ಹೊಡೆಯುತ್ತಿದ್ದ ಸ್ನೇಹಿತನ ಫೋನ್ ಇವತ್ತು ಮಿಸ್ಡ್ಕಾಲ್‌ನಲ್ಲಿ ಉಳಿದು ಬಿಟ್ಟಿದೆ. ಹಿಂದೆ ಮಾವಿನ ಮರ ಹತ್ತಿ ಹಾರಿ ಬಿದ್ದು ನೋವು ಮಾಡಿಕೊಂಡ ಗುರುತುಗಳು ಬಿಟ್ಟರೆ ಮಾವಿನ ಮರವೀಗ ಪಕ್ಕದ ಮನೆಯ ಮಾಡಿಯ ಸೂರಾಗಿದೆ.
ಇಂದು ಆ ತುಂಟ ಯೋಚನೆಗಳಿಲ್ಲ ಚಿಕ್ಕ ಪುಟ್ಟ ಜಗಳಗಳೂ ಇಲ್ಲ, ಅಪ್ಪನ ಹಿಂದೆ ಬಿದ್ದು ತೆಗೆದುಕೊಂಡ ಆಟಿಕೆಗಳು ಬೇಕಾಗಿಲ್ಲ. ಈಗ ಬುದ್ಧಿಯ ಜತೆ ಆಸೆ, ಆಕಾಂಕ್ಷೆ, ಅಹಂಕಾರದ ನೆರಳು ಮೈಯ ಮೇಲೆ ಬಿದ್ದು ಸ್ನೇಹ ಕೂಡ ನೆನಪಲ್ಲಷ್ಟೇ ಉಳಿದುಬಿಟ್ಟಿವೆ. ಮಳೆಗಾಲದ ಸಮಯ ಸಿಡಿಲ ಕಾಣುತ್ತ ನಿಂತವರು ಬೆಚ್ಚಿ ಬಿದ್ದು ಅಮ್ಮನ ಎಡ ಕೈ ಏಟು ತಿಂದ ಅನುಭವಗಳು, ರವಿವಾರದ ಐಸ್ ಕ್ರೀಮ್ ಗಾಡಿಯ ಸದ್ದು ಇವತ್ತು ನೆನಪಾದರೆ ನಗು ಬಂದು ಬಿಡುತ್ತದೆ. ಇವತ್ತು ದುಡ್ಡು ಕೊಟ್ಟರೂ ಸಿಗದ ನಿಯತ್ತು ಯಾರನ್ನೂ ನಗಿಸೋ ಮುಗ್ಧತೆ ತುಂಟಾಟ ಬಾಲ್ಯದಲ್ಲಷ್ಟೇ ಸಿಗಲು ಸಾಧ್ಯ. ಬಾಲ್ಯದ ಮೆಲಕು ಹಾಕುತ್ತಾ ಕುಳಿತರೆ ಸಮಯವೇ ಸಾಕಾಗುವುದಿಲ್ಲ ಬಿಡಿ, ಯೋಚಿಸಿದಷ್ಟು ಜಾಸ್ತಿಯಾಗುವ ಬಾವಿಯ ಅಂತರ್ಜಲದಂತೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತೂ ಬಾಲ್ಯ ದಾಟಿಯಾಗಿದೆ ಈಗ ಬಾಲ್ಯದಲ್ಲಿರೋ ನಮ್ಮ ಮಕ್ಕಳು ಅಥವಾ ಸಹೋದರರಿಗೆ ಅವರ ಬಾಲ್ಯದ ಅನುಭವಗಳನ್ನ ಕಿತ್ತುಕೊಳ್ಳುವ ಕೆಲಸವೆಂದೂ ಮಾಡದಿರೋಣ. ನಾಳೆಯ ಯೋಚನೆ ತಾನಾಗಿಯೇ ಬರುತ್ತದೆ ಇಂದಿಗಾಗಿ ಬದುಕೋ ಬಾಲ್ಯವೆಂದಿಗೂ ಬಂಧನವಾಗದಿರಲಿ.
ದೇವಿಪ್ರಸಾದ ಶೆಟ್ಟಿ
ಬಿಬಿ ಹೆಗ್ಡೆ ಕಾಲೇಜು, ಕುಂದಾಪುರ