ವಾಡಿ: ಪಟ್ಟಣ ಸಮೀಪದ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ ಗ್ರಾಮದಲ್ಲಿ ಕಳೆದ ಐದಾರು ದಿನಗಳಿಂದ ಕಾಣಿಸಿಕೊಂಡಿರುವ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳ ನರಳಾಟ ಮುಂದುವರಿದಿದೆ. ಭೀಮಾ ನದಿ ದಡದಲ್ಲಿರುವ ಚಾಮನೂರ ಗ್ರಾಮಸ್ಥರಿಗೆ ಕುಡಿಯಲು ಕಲುಷಿತ ನೀರು ಸರಬರಾಜು ಮಾಡಿದ್ದೇ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣ ಹೆಚ್ಚಲು ಕಾರಣ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಆರಂಭದಲ್ಲಿ ಹಿರಿಯರಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ ರೋಗ ಮಕ್ಕಳಿಗೂ ವ್ಯಾಪಿಸಿದೆ. ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗದ ಕಾರಣ ಪೋಷಕರು, ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಜೀವ ಹಿಂಡುವ ವಾಂತಿ ಭೇದಿ ರೋಗಕ್ಕೆ ತುತ್ತಾದ ಜನರು, ಸಂಬಂಧಿಕರು ಆರೋಗ್ಯ ಇಲಾಖೆ, ಗ್ರಾಪಂ ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲೂ ದಾಖಲಾಗಿ ಚಾಮನೂರಿನ ಸುಮಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಮತ್ತು ರವಿವಾರ ಬೆಳಗ್ಗೆ ಪಟ್ಟಣದ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಗೆ ದಾಖಲಾದ 15ಕ್ಕೂ ಹೆಚ್ಚು ಮಕ್ಕಳು ಹೆತ್ತವರ ಮಡಿಲಲ್ಲಿ ನರಳಾಡುತ್ತಿದ್ದಾರೆ. ಆಸ್ಪತ್ರೆಯ ಪ್ರತಿಯೊಂದು ಬೆಡ್‌ಗಳ ಮೇಲೆ ಐದಾರು ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಚಿಕಿತ್ಸೆಗೆ ದಾಖಲಾಗಿದ್ದು, ಪೋಷಕರ ಸಂಕಟ ಹೇಳತೀರದಾಗಿದೆ.
ಪ್ರಕರಣಕ್ಕೆ ಏನು ಕಾರಣ: ಭೀಮಾ ನದಿಯಿಂದ ಗ್ರಾಮಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಜಾಕ್‌ವೆಲ್‌ನಲ್ಲಿ ಕಲುಷಿತ ನೀರು ಸಂಗ್ರಹವಾಗಿತ್ತು ಎನ್ನಲಾಗಿದ್ದು, ನೀರು ಶುದ್ಧೀಕರಿಸದೆ ನೇರವಾಗಿ ನಳಗಳಿಗೆ ಸರಬರಾಜು ಮಾಡಲಾಗಿದೆ. ಮಣ್ಣು ಮಿಶ್ರಿತ ಕಲುಷಿತ ನೀರು ಕುಡಿದು ಜನರು ವಾಂತಿ ಭೇದಿಗೆ ತುತ್ತಾಗಿದ್ದಾರೆ. ಗ್ರಾಪಂ ಆಡಳಿತದ ಬೇಜವಾಬ್ದಾರಿ ಎದ್ದು ಕಂಡಿದೆ. ಅಧಿಕಾರಿಗಳ ನಿಷ್ಕಾಳಜಿಗೆ ಊರಿನ ಜನ ರೋಗಿಗಳಾಗಿ ಆಸ್ಪತ್ರೆಗಳಲ್ಲಿ ಸಂಕಟ ಅನುಭವಿಸುತ್ತಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗಿದ್ದರೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಿತ್ತು. ಖಾಸಗಿ ಆಸ್ಪತ್ರೆಗಳಿಗೆ ನೂರಾರು ಜನರು ಹೋಗಿ ಹಣ ಸುರಿಯುತ್ತಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಈ ಕುರಿತು ದೂರು ನೀಡಬೇಕು ಎಂದರೆ ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್ ಅವರ ಮೊಬೈಲ್ ಯಾವಾಗಲು ಸ್ವಿಚ್‌ಆಫ್ ಆಗಿರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಆರೋಗ್ಯ ಶಿಬಿರ ಆರಂಭಿಸಬೇಕು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.