ದೊಡ್ಡಬಳ್ಳಾಪುರ: ಶಾಲಾ ದಾಖಲಾತಿ ಆಂದೋಲನಕ್ಕೆ ಮಾತ್ರ ಸೀಮಿತವಾಗಿರದೇ ಜನಾಂದೋಲನವಾಗಬೇಕಿದ್ದು, ಶಾಲೆ ಬಿಟ್ಟ ಮಕ್ಕಳು ಪುನಃ ಸರ್ಕಾರಿ ಶಾಲೆಗೆ ದಾಖಲಾಗುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಹೇಳಿದರು.
ನಗರದ ರೋಜಿಪುರ ಶಾಲೆಯಿಂದ ವಿವಿಧ ಶಾಲೆಗಳ ವ್ಯಾಪ್ತಿಯಲ್ಲಿ ಆರಂಭವಾದ ಶಾಲೆಯಡೆಗೆ ನನ್ನ ನಡೆ- ಶಾಲೆಗೆ ಮರಳಲು ನನಗೊಂದು ಅವಕಾಶ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009ರನ್ವಯ 6 ರಿಂದ 14 ವಯೋಮಾನದ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಮಕ್ಕಳಿಗೆ ನಲಿ ಕಲಿ ಯೋಜನೆ, ಶಿಕ್ಷಕರಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಕ್ಷೀರ ಭಾಗ್ಯ, ಅನ್ನಭಾಗ್ಯ, ಉಚಿತ ಸಮವಸ್ತ್ರ, ಪುಸ್ತಕಗಳು 8ನೇ ತರಗತಿಯಿಂದ ಸೈಕಲ್ ವಿತರಣೆ, ಹಲವಾರು ವಿದ್ಯಾರ್ಥಿ ವೇತನಗಳು ಮೊದಲಾದ ಸೌಲಭ್ಯಗಳನ್ನು ನೀಡಿದೆ. ಈ ಬಗ್ಗೆ ಪೋಷಕರು ಗಮನ ಹರಿಸಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದಾಖಲಾತಿ ಆಂದೋೕಲನ: ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಪೋಷಕರ ಮನವೊಲಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ವಿಶೇಷ ದಾಖಲಾತಿ ಆಂದೋಲನವನ್ನು ನಡೆಸಲಾಗುತ್ತಿದೆ. ತಾಲೂಕಿನ ಎಲ್ಲಾ ಶಾಲೆಗಳಲ್ಲಿಯೂ ಈ ಕಾರ್ಯಕ್ರಮವನ್ನು ಜೂನ್ ತಿಂಗಳಿನಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗುತ್ತಿದೆ. ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಿಂದಲೇ ಶಾಲೆಗೆ ಹಾಜರಾಗುವಂತೆ ಮಾಡಲು ದಾಖಲಾತಿ ಆಂದೋೕಲನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆಂದೋಲನ ನಗರದ ರೋಜಿಪುರ ಸರ್ಕಾರಿ ಶಾಲೆಯಿಂದ ಆರಂಭವಾಗಿ ಸರ್ಕಾರಿ ಉರ್ದು ಶಾಲೆ, ವಿನಾಯಕನಗರ ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಮನವೊಲಿಸಲಾಯಿತು.
ಮನವೊಲಿಸಲು ಸಫಲ: ಕಾರ್ಯಕ್ರಮದ ಫಲಶೃತಿಯಂತೆ ರೋಜಿಪುರ ಬಡಾವಣೆಯ ಪವನ್ ಎಂಬ ಶಾಲೆ ಬಿಟ್ಟ ಮಗುವನ್ನು ರೋಜಿಪುರದ ಸ.ಹಿ.ಪ್ರಾ ಶಾಲೆಗೆ ದಾಖಲಿಸಲು ಉಪನಿರ್ದೇಶಕ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೈಯ ಪ್ಪರೆಡ್ಡಿ, ಪೋಷಕರ ಮನವೊಲಿಸಲು ಸಫಲರಾದರು. ಆಂದೋಲನದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಹನುಮಂತಪ್ಪ ಬಿ ಹಿಂದಿನ ಮನಿ ಶಿಕ್ಷಣ ಸಂಯೋಜಕರಾದ ಬಿ.ಹೆಚ್.ಮೂರ್ತಿ, ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರೋಜಿಪುರ, ಉರ್ದು ಶಾಲೆ, ವಿನಾಯಕನಗರಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.