Advertisement

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

12:01 AM Jun 27, 2024 | Team Udayavani |

ತುಮಕೂರು: ಅವಿವಾಹಿತರು ಹಾಗೂ ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆ ಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು, 7 ಮಂದಿ ಆರೋಪಿಗಳನ್ನು ಬಂಧಿಸಿ 5 ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ. ಅಶೋಕ್‌ ತಿಳಿಸಿದ್ದಾರೆ.

Advertisement

ಈ ಹಿಂದೆ ಕುಣಿಗಲ್‌ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಎಎನ್‌ಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಸದ್ಯ ಖಾಸಗಿ ನರ್ಸಿಂಗ್‌ ಕಾಲೇಜಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಶೋಕ ನಗರದ 2ನೇ ಕ್ರಾಸ್‌ ವಾಸಿ ಮಹೇಶ್‌ ಯು.ಡಿ. (39), ಹುಳಿಯಾರಿನ ನಿವಾಸಿ, ಫಾರ್ಮಸಿಸ್ಟ್‌ ಮೆಹಬೂಬ್‌ ಷರೀಫ್ (52), ಜಾತ್ರೆಗಳಲ್ಲಿ ಟ್ಯಾಟೂ ಬರೆಯುತ್ತಿದ್ದ ಗುಬ್ಬಿ ತಾಲೂಕು ಬಿಕ್ಕೇಗುಡ್ಡ ಗ್ರಾಮದ ಕೆ.ಎನ್‌. ರಾಮಕೃಷ್ಣ (53), ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು (45), ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರಿನ ಮುಬಾರಕ್‌ ಪಾಷಾ (44), ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್‌ ಆಗಿದ್ದ ಪೂರ್ಣಿಮಾ ಎನ್‌. (39), ಶಿರಾದ ಜ್ಯೋತಿನಗರ ನಿವಾಸಿ, ಹಂಗಾಮಿ ನರ್ಸ್‌ ಸೌಜನ್ಯಾ (48) ಬಂಧಿತರು ಎಂದು ಎಸ್‌ಪಿ ಹೇಳಿದರು.

2ರಿಂದ 3 ಲಕ್ಷ ರೂ. ವರೆಗೆ ಮಕ್ಕಳ ಮಾರಾಟ
ಆರೋಪಿಗಳು ಮಕ್ಕಳನ್ನು 2ರಿಂದ 3 ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ಆರೋಪಿಗಳಿಂದ ಮಕ್ಕಳನ್ನು ಹಣ ಕೊಟ್ಟು ಖರೀದಿ ಮಾಡಿದವ ರ ನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಹೇಳಿದರು. ಕೃತ್ಯಕ್ಕೆ ಸಹಕರಿಸಿದ ಆರೋಪಿ ಮೆಹಬೂಬ್‌ ಷರೀಫ್ ಹುಳಿಯಾರಿನಲ್ಲಿ ಪತ್ನಿಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ ಎಂದವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next