ಧಾರವಾಡ: ಕೃಷಿ, ಕೂಲಿ, ಕಟ್ಟಡ ಕಾರ್ಮಿಕರು ಸೇರಿದಂತೆ ಶಾಲಾ ಮಕ್ಕಳನ್ನು ನಿಯಮ ಬಾಹಿರವಾಗಿ ಸರಕು ಸಾಗಾಣಿಕೆ ವಾಹನದಲ್ಲಿ ಒಯ್ಯುವುದು ಅಪರಾಧ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಸರಕು ಸಾಗಾಣಿಕೆ ವಾಹನದಲ್ಲಿ ಯಾವುದೇ ಕಾರಣಕ್ಕೂ ಕಾರ್ಮಿಕರನ್ನು, ಶಾಲಾ ಮಕ್ಕಳನ್ನು ಸಾಗಿಸುವಂತಿಲ್ಲ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಮನೆಯಿಂದ ಕರೆ ತಂದು ಶಾಲೆಯಿಂದ ಮರಳಿ ಅವರ ಮನೆಗೆ ತಲುಪುವಂತೆ ಮಾಡುವುದು ಆಯಾ ಶಾಲಾ ಆಡಳಿತ ಮಂಡಳಿ ಜವಾಬ್ದಾರಿ. ನಿಯಮ ಮೀರಿ ಮಕ್ಕಳನ್ನು ಸಾಗಿಸುವುದು ಹಾಗೂ ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಒಯ್ಯುವುದು ಅಪರಾಧ. ಆದ್ದರಿಂದ ಎಲ್ಲ ಉದ್ಯೋಗದಾತರು ಕಾರ್ಮಿಕರ, ಶಾಲಾ ಮಕ್ಕಳ ಸುರಕ್ಷತೆ, ಕ್ಷೇಮದ ಬಗ್ಗೆ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಉಚ್ಛ ನ್ಯಾಯಾಲಯ ಆದೇಶದಂತೆ ಮುಂದಿನ ತಿಂಗಳು ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಕುರಿತು ಕ್ರಿಯಾಯೋಜನೆ ಸಲ್ಲಿಸಲಾಗುತ್ತಿದೆ. ಕ್ರಿಯಾಯೋಜನೆಯಲ್ಲಿ ಕಾರ್ಮಿಕರಿಗೆ ಉದ್ಯೋಗದಾತ ಕಾರ್ಖಾನೆ, ಕಂಪನಿ ಹಾಗೂ ಶಾಲಾ-ಕಾಲೇಜುಗಳಿಗೆ ಪ್ರತ್ಯೇಕವಾಗಿ ಜನಜಾಗೃತಿ-ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಕಾರ್ಮಿಕ ಇಲಾಖೆ ಆಯುಕ್ತ ಪಾಲಯ್ಯ ಮಾತನಾಡಿ, ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸುರಕ್ಷತೆಗೆ ಇಲಾಖೆ ಹಲವಾರು ನಿಯಮಗಳನ್ನು ಜಾರಿ ಮಾಡಿ ಅನುಷ್ಠಾನಗೊಳಿಸಿದೆ. ಮಾನ್ಯ ಉಚ್ಛ ನ್ಯಾಯಾಲಯವು ಕಾರ್ಖಾನೆಗಳಿಗೆ, ಕಂಪನಿಗಳಿಗೆ ಅಗತ್ಯವಿರುವ ಕೆಲಸಗಾರರು ಅಸುರಕ್ಷಿತ ವಾಹನ ಬಳಸುತ್ತಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮಾರ್ಗಸೂಚಿ ನೀಡಿದೆ. ಅದರಂತೆ ಕಾರ್ಖಾನೆ, ಕಂಪನಿ ಮತ್ತು ಶಾಲಾ-ಕಾಲೇಜು ಆಡಳಿತ ಮಂಡಳಿಗಳು ತಮ್ಮ ಕಾರ್ಮಿಕರ, ವಿದ್ಯಾರ್ಥಿಗಳ ಸುರಕ್ಷತೆಗೆ ಕಾಳಜಿ ವಹಿಸಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆಯೂ ಸಹ ಇತರ ಇಲಾಖೆಗಳ ನೆರವಿನೊಂದಿಗೆ ಸಹಕಾರ ನೀಡುತ್ತಿದ್ದು, ತಮ್ಮ ಬೇಡಿಕೆಗಳಿದ್ದರೆ ಚರ್ಚಿಸಿ ಸಲಹೆ ನೀಡಬೇಕು ಎಂದರು.
Advertisement
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಪ್ರಕರಣ ಕುರಿತಂತೆ ಜರುಗಿದ ಉದ್ಯೋಗದಾತರ ಹಾಗೂ ಕಾರ್ಮಿಕ ವರ್ಗದ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ, ಜಿಪಂ ಸಿಇಒ ಡಾ|ಬಿ.ಸಿ.ಸತೀಶ್, ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಮಹಾನಗರ ಉಪ ಪೊಲೀಸ್ ಆಯುಕ್ತ ಶಿವಕುಮಾರ ಗುಣಾತಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಾರಿಗೆ ಇಲಾಖೆ, ಎನ್‌ಡಬ್ಲ್ತ್ರ್ಯೂ ಕೆಎಸ್‌ಆರ್‌ಟಿಸಿ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ವಿವಿಧ ಕಾರ್ಮಿಕ ಪ್ರತಿನಿಗಳ ಸಂಘ ಸಂಸ್ಥೆಗಳು, ಉದ್ಯೋಗದಾತರುಗಳ ಸಂಘದ ಪ್ರತಿನಿಧಿಗಳು, ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು ಸಭೆಯಲ್ಲಿ ಪಾಲ್ಗೊಂಡಿದ್ದರು.