Advertisement
ಈ ಮೂಲಕ 11 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಆರೋಪಿಗಳಾದ ದೇವಿ ಷಣ್ಮುಗಮ್ಮ(38), ಮಹೇಶ್(32), ರಂಜನಾ(37), ಜನಾರ್ಧನ್ (34), ಧನಲಕ್ಷ್ಮೀ (42) ಅವರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ, ಪ್ರಮುಖ ಆರೋಪಿ ರತ್ನ ಎಂಬಾಕೆ ಕೋವಿಡ್‌ನಿಂದ ಮೃತಪಟ್ಟಿರುವುದು ಪತ್ತೆಯಾಗಿದೆ. ಬಸವನಗುಡಿ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು 11 ಮಕ್ಕಳನ್ನು ರಕ್ಷಣೆ ಮಾಡಿ ಸಿಡಬ್ಲುಸಿಗೆ ಹಸ್ತಾಂತರಿಸಲಾಗಿದೆ.
Related Articles
Advertisement
ಬಂಧಿತ ಆರೋಪಿಗಳು 2 ಮಕ್ಕಳನ್ನು ಮುಂಬೈನಿಂದ ಖರೀದಿಸಿ ಬೆಂಗಳೂರಿನ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿ, ಬೆಂಗಳೂರಿನಲ್ಲಿ 2 ಮಕ್ಕಳನ್ನು ಖರೀದಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡಲು ಮುಂದಾದಾಗ ಪೊಲೀಸರಿಗೆ ಸಿಕ್ಕಿ ಬಿದಿದ್ದಾರೆ.
ಈ ಪ್ರಕರಣದಲ್ಲಿ 4 ಪ್ರತ್ಯೇಕ ಎಫ್ ಐಆರ್ ದಾಖಲಿಸಿಕೊಂಡು ಮಕ್ಕಳನ್ನು ರಕ್ಷಣೆ ಮಾಡಿ ಸಿಡಬ್ಲೂಸಿ ಚೈಲ್ಡ್ ವೆಲ್‌ಫೇರ್ ಕಮಿಟಿಗೆ ಹಸ್ತಾಂತರಿಸಲಾಗಿತ್ತು. ಸಮಿತಿ ಆದೇಶದ ಮೇರೆಗೆ ಸದ್ಯ 4 ಮಕ್ಕಳನ್ನೂ ಆರೋಪಿಗಳಿಂದ ಖರೀದಿ ಮಾಡಿದ ದಂಪತಿಗೆ ಹಸ್ತಾಂತರಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
28 ನಕಲಿ ತಾಯಿ ಕಾರ್ಡ್ ಪತ್ತೆ
ತನಿಖೆ ಮುಂದುವರಿಸಿ ಬೆಂಗಳೂರಿನಲ್ಲಿರುವ ಮೃತ ಆರೋಪಿ ರತ್ನ ಮನೆ ಪರಿಶೀಲಿಸಿದಾಗ 28 ತಾಯಿ ಕಾರ್ಡ್ ಪತ್ತೆಯಾಗಿದ್ದವು. ಆರೋಪಿಗಳು ಕೆಂಗೇರಿಯ ಖಾಸಗಿ ಆಸ್ಪತ್ರೆಯೊಂದರ ನರ್ಸ್ ಹಾಗೂ ಡಿದರ್ಜೆ ನೌಕರನ ಸಹಾಯದಿಂದ ಈ ತಾಯಿ ಕಾರ್ಡ್‌ನ್ನು ಪಡೆದು ವೈದ್ಯರ ನಕಲಿ ಸಹಿ ಮಾಡಿರುವುದು ಕಂಡು ಬಂದಿದೆ. ನಕಲಿ ತಾಯಿ ಕಾರ್ಡ್ ಸಹಾಯದಿಂದ ಮಕ್ಕಳನ್ನು ಖರೀದಿಸಿರುವ ದಂಪತಿಯೇ ಮಗುವಿನ ನೈಜ ಪಾಲಕರು ಎಂದು ಬಿಂಬಿಸಲು ಹೊರಟಿದ್ದರು.
ಮಗು ಮಾರಾಟ ಡೀಲ್ ಹೇಗೆ ?
ಆರೋಪಿಗಳು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸುತ್ತಾಡಿ ಹೆರಿಗೆಗಾಗಿ ಬಂದಿರುವ ಬಡ ಕುಟುಂಬಸ್ಥರನ್ನು ಗುರುತಿಸುತ್ತಿದ್ದರು. ಅವರ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಮೊಬೈಲ್ ನಂಬರ್ ಪಡೆಯುತ್ತಿದ್ದರು. ಹೆರಿಗೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡಿ ಮಗು ಕೊಡುವಂತೆ ಒತ್ತಾಯಿಸುತ್ತಿದ್ದರು.
ಆರೋಪಿಗಳ ಪೈಕಿ ಇಬ್ಬರು ನಗರದ 3 ಫರ್ಟಿಲಿಟಿ ಸೆಂಟರ್‌ಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದರು. 3 ವರ್ಷಗಳ ಹಿಂದೆ ಇವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ, ಅಲ್ಲಿಗೆ ಚಿಕಿತ್ಸೆಗಾಗಿ ಬರುವ ದಂಪತಿಗಳ ನಂಬರ್‌ಗಳು ಸಿಗುತ್ತಿದ್ದವು. ಮಗುವಿಲ್ಲದ ದಂಪತಿಗಳನ್ನು ಸಂಪರ್ಕಿಸಿ ಬಾಡಿಗೆ ತಾಯಿ ಮೂಲಕ ಮಕ್ಕಳು ಮಾಡಿಸಿಕೊಡುತ್ತೇವೆ ಎಂದು ಹಣ ವಸೂಲಿ ಮಾಡುತ್ತಿದ್ದರು. ಬಳಿಕ ಬಡಕುಟುಂಬದ ಮಕ್ಕಳನ್ನು ಕಡಿಮೆ ಹಣಕ್ಕೆ ಕೊಂಡು, ಬಾಡಿಗೆ ತಾಯಿಯ ಮಗು ಎಂದು ಮಾರಾಟ ಮಾಡುತ್ತಿದ್ದರು.