ಬೆಂಗಳೂರು: ನಗರದಲ್ಲಿ ಮತ್ತೆ ಮಕ್ಕಳ ಮಾರಾಟ ದಂಧೆ ಸಕ್ರಿಯವಾಗಿದ್ದು, ಹೆತ್ತ ತಾಯಿಯೇ ತನ್ನ 20 ದಿನದ ಹಸುಗೂಸು ಮಾರಾಟಕ್ಕೆ ಮುಂದಾಗಿರುವ ಅಮಾನವೀಯ ಘಟನೆ ಬಳಕಿಗೆ ಬಂದಿದೆ.
ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ತಮಿಳುನಾಡಿನ ಈರೋಡ್ ಮೂಲದ ಮುರುಗೇಶ್ವರಿ(22) ಮತ್ತು ಪರಿಚಯಸ್ಥರಾದ ಕಣ್ಮನ್ ರಾಮಸ್ವಾಮಿ(51), ಹೇಮಲತಾ (27), ಶರಣ್ಯಾ (33) ಎಂಬವರನ್ನು ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬಂಧಿಸಲಾಗಿದೆ.
ಬೆಂಗಳೂರು ನಿವಾಸಿ ಮಹಾಲಕ್ಷ್ಮೀ ಎಂಬಾಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಮರುಗೇಶ್ವರಿಗೆ ಸೇರಿದ 20 ದಿನದ ಗಂಡು ಮಗುವನ್ನು ರಕ್ಷಿಸಿ, ತಾಯಿ, ಮಗನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೂಂದೆಡೆ ತಲೆಮರೆಸಿಕೊಂಡಿರುವ ಮಹಾಲಕ್ಷ್ಮೀ ನಗರದಲ್ಲಿ ಮಕ್ಕಳ ಮಾರಾಟ ದಂಧೆಯ ಮಧ್ಯವರ್ತಿಯಾಗಿದ್ದಾಳೆ. ಈಕೆಗೆ ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು, ಕೆಲ ಮಕ್ಕಳಾಗದೆ ಇರುವ ದಂಪತಿ ಪರಿಚಯವಿದೆ. ಅಂತಹವರ ಕೋರಿಕೆ ಮೇರೆಗೆ ಪ್ರತಿ ಮಗುವಿಗೆ 5-8 ಲಕ್ಷ ರೂ.ಗೆ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದಳು. ಈ ಮಧ್ಯೆ ತಮಿಳುನಾಡಿನ ರಾಮಸ್ವಾಮಿ ಮತ್ತು ಹೇಮಲತಾ, ಮರುಗೇಶ್ವರಿ ಮಗುವಿನ ಬಗ್ಗೆ ಮಹಾಲಕ್ಷ್ಮೀಗೆ ಹೇಳಿದ್ದರು. ಆಕೆಯ ಮಗುವನ್ನು ಬೆಂಗಳೂರಿಗೆ ಕರೆತರುವಂತೆ ಹೇಳಿದ್ದಳು. ಆದರಿಂದ ನ.24ರಂದು ಮಗುವಿನ ಜತೆ ನಾಲ್ವರು ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನ ಬಳಿ ಬಂದಿದ್ದರು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದು ಮಗುವನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅವಿವಾಹಿತೆ ಮುರುಗೇಶ್ವರಿ?: ಪ್ರಕರಣದಲ್ಲಿ ಬಂಧನಕ್ಕೊಳಗಾದ ಮುರುಗೇಶ್ವರಿ ಅವಿವಾಹಿತೆ ಎಂಬುದು ಗೊತ್ತಾಗಿದೆ. ಆದರೂ, ಆಕೆ ಇದು ತನ್ನ ಮಗು ಎಂದು ಹೇಳುತ್ತಿದ್ದಾಳೆ. ಹೀಗಾಗಿ ತಾಯಿ, ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತ ಪಡಿಸಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
60 ಮಕ್ಕಳ ಮಾರಾಟ ಶಂಕೆ: ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಇದುವರೆಗೂ 60 ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ನಗರದಲ್ಲೇ ಅಂದಾಜು 10ಕ್ಕೂ ಹೆಚ್ಚು ಮಕ್ಕಳನ್ನು ಮಹಾಲಕ್ಷ್ಮೀ ಮೂಲಕವೇ ವೈದ್ಯರು ಹಾಗೂ ಕೆಲ ಮಕ್ಕಳಿಲ್ಲದ ದಂಪತಿಗೆ ಲಕ್ಷಾಂತರ ರೂ.ಗೆ ಮಾರಲಾಗಿದೆ ಎನ್ನಲಾಗಿದೆ. ಹೀಗಾಗಿ ಯಾರಿಗೆಲ್ಲ ಮಕ್ಕಳ ಮಾರಾಟ ಮಾಡಲಾಗಿದೆ. ಮಕ್ಕಳ ಖರೀದಿದಾರರ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕೆಲ ತಿಂಗಳ ಹಿಂದಷ್ಟೇ ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಎಂಟು ದಿನಗಳ ಹಸುಗೂಸು ಕಳವು ಮಾಡಿದ್ದ ರಾಮನಗರ ಮೂಲದ ದಿವ್ಯಾ ರಶ್ಮಿಯನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದರು. ಆಕೆ ತುಮಕೂರಿನ ತಿಪಟೂರು ಮೂಲದ ಪ್ರಸನ್ನ ದಂಪತಿಗೆ ಮಗು ಮಾರಾಟ ಮಾಡಿದ್ದಳು.