ಬೆಂಗಳೂರು: ಐ-ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳನ್ನು ಸಂಜಯನಗರ ಪೊಲೀಸರು ಗೋವಾದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ನಾಗಶೆಟ್ಟಿಹಳ್ಳಿ ಮತ್ತು ಹೆಬ್ಟಾಳದ ಕೆಂಪಾಪುರ ಮೂಲದ 15 ವರ್ಷದ ಬಾಲಕರನ್ನು ರಕ್ಷಿಸ ಲಾಗಿದೆ. ಇಬ್ಬರು ಬಾಲಕರು ಭೂಪಸಂದ್ರದ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಸೆ.1ರಂದು ಮದರಸಾದಿಂದ ಇಬ್ಬರೂ ಏಕಾಏಕಿ ನಾಪತ್ತೆಯಾಗಿದ್ದರು.
ನಾಗಶೆಟ್ಟಿಹಳ್ಳಿಯ ಬಾಲಕ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಮದರಾಸಗೆ ತೆರಳಿ ರಾತ್ರಿ 10 ಗಂಟೆಗೆ ವಾಪಾಸ್ ಮನೆಗೆ ಬರುತ್ತಿದ್ದ. ಕೆಂಪಾಪುರದ ಬಾಲಕ ಮದರಸಾದಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದ. ಸೆ.1ರಂದು ಮದರಸಾಗೆ ರಜೆ ಇತ್ತು. ಆದರೂ, ಸಂಜೆ 4.30ಕ್ಕೆ ನಾಗಶೆಟ್ಟಿಹಳ್ಳಿಯಿಂದ ಬಾಲಕ ಮದರಸಾಗೆ ಹೋಗಿದ್ದ. ರಾತ್ರಿಯಾದರೂ ಬಾಲಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಮೊಬೈಲ್‌ಗೆ ಪೋಷಕರು ಕರೆ ಮಾಡಿದ್ದಾರೆ. ಈ ವೇಳೆ ಸ್ವಿಚ್x ಆಫ್ ಆಗಿತ್ತು. ಮದರಸಾದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಇಬ್ಬರು ಬಾಲ ಕರು ಲಗೇಜ್ ತೆಗೆದುಕೊಂಡು ಮದರಸಾ ದಿಂದ ಹೊರಗೆ ಹೋಗಿರುವುದು ಸೆರೆಯಾಗಿತ್ತು.
ದುಡಿದು ಐ-ಫೋನ್ ಖರೀದಿಗೆ ನಿರ್ಧಾರ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ಸಿಸಿ ಕ್ಯಾಮೆರಾ ಪರಿಶೀಲಿಸಿದ ಬಳಿಕ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಈ ವೇಳೆ ಇಬ್ಬರು ಬಾಲಕರು ಗೋವಾ ರೈಲು ಹತ್ತಿರುವುದು ಗೊತ್ತಾಗಿದೆ. ಬಳಿಕ ಬಾಲಕರ ಮೊಬೈಲ್ ಲೋಕೇಷನ್ ಪರಿಶೀಲಿಸಿದಾಗ ಗೋವಾದಲ್ಲಿ ಇಬ್ಬರು ಬಾಲಕರು ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಬಳಿಕ ಒಂದು ಪೊಲೀಸ್ ತಂಡ ಗೋವಾಕ್ಕೆ ತೆರಳಿ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದಿದೆ.
ಇಬ್ಬರು ಬಾಲಕ ಹೇಳಿಕೆ ದಾಖಲಿಸುವ ವೇಳೆ, “ಇತ್ತೀಚೆಗೆ ಐ-ಫೋನ್ ಕೊಡಿಸುವಂತೆ ಪೋಷಕರ ಬಳಿ ಬೇಡಿಕೆ ಇರಿಸಿದ್ದರು. ಆದರೆ, ಈಗಾಗಲೇ ಆ್ಯಂಡ್‌ರಾಯ್ಡ ಮೊಬೈಲ್ ಇದೆ. ಐ-ಫೋನ್ ಕೊಡಿಸುವಷ್ಟು ಅನುಕೂಲ ಇಲ್ಲ’ ಎಂದು ಮಕ್ಕಳಿಗೆ ಬುದ್ದಿವಾದ ಹೇಳಿದ್ದಾರೆ. ಅದರಿಂದ ಬೇಸರಗೊಂಡ ಬಾಲಕರು, “ಮುಂಬೈಗೆ ತೆರಳಿ ಕೆಲಸಕ್ಕೆ ಸೇರಿ ತಾವೇ ದುಡಿದು ಐ-ಫೋನ್ ತೆಗೆದುಕೊಳ್ಳುತ್ತೇವೆ’ ಎಂದು ಪೋಷಕರ ಬಳಿ ಹೇಳಿದ್ದರು. ಆದರೆ, ಪೋಷಕರು ಈ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಐ-ಫೋನ್‌ಗಾಗಿ ಇಬ್ಬರು ಬಾಲಕರು ಮದರಸಾದಿಂದ ನಾಪತ್ತೆಯಾಗಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.