Advertisement

ಬಾಲ್ಯವಿವಾಹ ಮಾಡಿದರೆ ಶಿಕ್ಷಾರ್ಹ ಅಪರಾಧ: ಮಲ್ಲಣ್ಣ

04:31 PM Jun 05, 2017 | Team Udayavani |

ಶಹಾಬಾದ: ಗಂಡಿಗೆ 21 ಮತ್ತು ಹೆಣ್ಣಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಬೇಕು. ಒಂದು ವೇಳೆ ಈ ವಯಸ್ಸಿನ ಒಳಗಿರುವ ಗಂಡು ಅಥವಾ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಅದು ಬಾಲ್ಯವಿವಾಹವಾಗುತ್ತದೆ. ಆದ್ದರಿಂದ ಕಾನೂನಿನ ಬಾಲ್ಯವಿವಾಹ ಕಾಯ್ದೆ ಅರಿತು ಮದುವೆ ಮಾಡಬೇಕು ಎಂದು ಶಿಶು ಅಭಿವೃದ್ಧಿ  ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ ಹೇಳಿದರು.

Advertisement

ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು  ಅಭಿವೃದ್ಧಿ ಯೋಜನೆ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಬಾಲ್ಯ ವಿವಾಹ ನಿಷೇಧ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದ ಸಮಾರೋಪ ಸಮಾರಂಭದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿದ ವಧುವರರ ವಯಸ್ಸಿನ ದೃಢೀಕರಣ ಪತ್ರ ಪಡೆದು ಕೂಲಂಕುಷವಾಗಿ ಪರಿಶೀಲಿಸಿದ  ನಂತರವೇ ಕಲ್ಯಾಣ ಮಂಟಪದ ವ್ಯವಸ್ಥಾಪಕರು, ದೇವಾಲಯಗಳ ಅರ್ಚಕರು ಇತರೆ ಸಂಘ ಸಂಸ್ಥೆಗಳ ಆಯೋಜಕರು ವಿವಾಹ ಮಾಡಿಸಲು ಮುಂದಾಗಬೇಕು.  

ಬಾಲ್ಯವಿವಾಹ ಕಾಯ್ದೆ 2006ರಲ್ಲಿ ಜಾರಿಯಾಗಿದೆ. ಈ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು. ಒಂದು ವೇಳೆ ಬಾಲ್ಯ ವಿವಾಹ ಮಾಡಿದರೆ ಹಾಗೂ ಅವರಿಗೆ ಉತ್ತೇಜನ ನೀಡಿದವರಿಗೆ 2 ವರ್ಷ ಜೈಲು ಶಿಕ್ಷೆ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಪೋಷಕರು ಚಿಕ್ಕ ಮಕ್ಕಳ ಮದುವೆಗೆ ಒತ್ತಡ ಹೇರದೇ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು. 

ಶಹಾಬಾದ ವಲಯ ಸಮೂಹ ಸಂಪನ್ಮೂಲ ಅಧಿಕಾರಿ ಶಿವಪುತ್ರ ಕರಣಿಕ್‌ ಮಾತನಾಡಿದರು. ಅತಿಥಿಗಳಾಗಿ ಬಸವರಾಜ ಬಿರಾಳ, ಶೋಭಾ ಅರಳಿ ಇದ್ದರು. ಇಲಾಖೆ ಮಹಿಳಾ ಮೇಲ್ವಿಚಾರಕಿ ಸರನಾ, ಶಕುಂತಲಾ ಸಾಕರೆ, ಲಕ್ಷಿ, ನೇತ್ರಾವತಿ, ನಾಗಮ್ಮ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next