ಯಲಬುರ್ಗಾ: ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಕಠಿಣ ಕಾನೂನುಗಳು ಇದ್ದರೂ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಾಯ್ದೆ ಉದ್ದೇಶ ಸಫಲವಾಗಬೇಕಾದರೆ ಸಾಮಾಜಿಕ ಅರಿವು ಅಗತ್ಯ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶರಣಮ್ಮ ಕಾರನೂರು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಹಾಗೂ ರೋಣ ಸಮನ್ವಯ ಕಲಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬಾಲ್ಯ ವಿವಾಹ ನಿಷೇಧ ಹಾಗೂ ಇಲಾಖೆಯ ವಿವಿಧ ಕಾರ್ಯಕ್ರಮಗಳ ಜಾಗೃತಿ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯವಿವಾಹ ಎಂಬುದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಅಪ್ರಾಪ್ತ ವಯಸ್ಸಿನ ಮಕ್ಕಳು ಇದರಿಂದ ಪರದಾಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಪ್ರಾಪ್ತ ವಯಸ್ಸಿನ ಮಕ್ಕಳು ಹಸಿ ಮಡಕೆ ಇದ್ದ ಹಾಗೆ. ಈ ಹಸಿ ಮಡಕೆಗೆ ನೀರು ತುಂಬಿದರೆ ಹೇಗೆ ಒಡೆಯುತ್ತದೆಯೋ ಅದೇ ರೀತಿ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವ ನಿಮ್ಮ ಮಕ್ಕಳ ಭವಿಷ್ಯ ಕೂಡ ಅದೇ ರೀತಿ ಹಾಳಾಗುತ್ತದೆ ಎಂದರು.
ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಿ, ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೇ ಹೊರತು, ಚಿಕ್ಕ ವಯಸ್ಸಿನ ಮಕ್ಕಳನ್ನು ಬಾಲ್ಯವಿವಾಹದ ನರಕಕ್ಕೆ ತಳ್ಳಿ ಅವರ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ಮಕ್ಕಳನ್ನು ಗೃಹಬಂಧನಕ್ಕೆ ಒಳಪಡಿಸದೇ ಸರಕಾರದಿಂದ ಸಿಗುವ ಸೌಲಭ್ಯ ಪಡೆದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಲು ಅವಕಾಶ ಕೊಡಿ, ರಾಜರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ ಮುಂತಾದ ಹೋರಾಟಗಾರರ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಗೆ ಹೋರಾಡಿದ್ದಾರೆ. ನಮ್ಮ ದೇಶದಲ್ಲಿ ಅನಕ್ಷರಸ್ಥ ಹಾಗೂ ಬಡ ಕುಟುಂಬಗಳು ಬಾಲ್ಯವಿವಾಹ ಮಾಡುತ್ತಿವೆ. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಾಗಲೂ ಬಾಲ್ಯದಲ್ಲೇ ಮಕ್ಕಳಿಗೆ ಮದುವೆ ಮಾಡಲಾಗುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡುವಂತಹವರು. ಯಾರೇ ಆಗಿದ್ದರೂ ಅವರ ಮೇಲೆ ಮೊಕದ್ದಮೆ ಹೂಡಿ ಕಾನೂನಿನ ಪ್ರಕಾರ ಒಂದು ಲಕ್ಷ ರೂ. ದಂಡ ಮತ್ತು ಕಠಿಣ ಕಾರಾಗೃಹ ವಾಸದ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಎಲ್ಲೇ ಬಾಲ್ಯವಿವಾಹ ನಡೆದರೆ ತಕ್ಷಣ ಮಕ್ಕಳ ಸಹಾಯವಾಣಿಗೆ ದೂರು ಸಲ್ಲಿಸಿದರೆ, ಅವರು ತಕ್ಷಣ ಒಂದು ಮಗುವಿನ ರಕ್ಷಣೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದ್ಬಳಕೆ ಪಡಿಸಿಕೊಳ್ಳಬೇಕು. ಜಾಗೃತಿ ಬೀದಿ ನಾಟಕ ಕಾರ್ಯಕ್ರಮ ಪಟ್ಟಣದ 5 ಸ್ಥಳಗಳಲ್ಲಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶವಾದ ಮುಧೋಳ, ಸಂಗನಾಳದಲ್ಲಿಯೂ ಜಾಗೃತಿ ಬೀದಿನಾಟಕ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮೇಲ್ವಿಚಾರಕಿ ಮಾಧವಿ ವೈದ್ಯ, ಕಲಾ ಸಂಘದ ಶರಣಪ್ಪ ಹಿರೇಮನಿ, ಮಂಜುನಾಥ ತೆಗ್ಗಿ ಇತರರು ಇದ್ದರು.