Advertisement
ಮಾರ್ಚ್ ಅಂತ್ಯದಲ್ಲಿ ಲಾಕ್‌ಡೌನ್ ಜಾರಿಯಾದಂತೆ ಈವರೆಗೆ ಜಿಲ್ಲೆಯಲ್ಲಿ 149 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದೆ. ಇವುಗಳಲ್ಲಿ 131 ವಿವಾಹಗಳನ್ನು ತಡೆಯಲಾಗಿದ್ದು, 18 ಬಾಲ್ಯ ವಿವಾಹಗಳು ನಡೆದಿವೆ.ಈ ಸಂಬಂಧ ಜಿಲ್ಲೆಯ ವಿವಿಧ ಭಾಗಗಳಲ್ಲಿ 18 ಪ್ರಕರಣ ದಾಖಲಾಗಿದೆ. ಈ ನಡುವೆ ಬೆಳಕಿಗೆ ಬಾರದೆ ಹಲವು ಪ್ರಕರಣಗಳು ಉಳಿದಿರುವುದು ಇದೆ. ಬಾಲ್ಯ ವಿವಾಹ ತಡೆ ಕಾಯಿದೆ ಜಾರಿ ಮಾಡಿ ಹಲವು ವರ್ಷಗಳೇ ಕಳೆದರೂ, ಮಕ್ಕಳ ಪೋಷಕರು ತಮ್ಮ ಮರ್ಯಾದೆಗೆ ಅಂಜಿ ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ.
Related Articles
Advertisement
ಈ ಸಂಬಂಧ ದೂರು ಬಂದಾಕ್ಷಣ ಸ್ಥಳಕ್ಕೆ ತೆರಳಿ ಪೋಷಕರ ಮನವೊಲಿಸಿ ಮದುವೆ ನಿಲ್ಲಿಸಿದ್ದೇವೆ. ಅಲ್ಲದೇ ಬಾಲ್ಯ ವಿವಾಹ ನಡೆಸಿರುವ ಎರಡೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ರಕ್ಷಣೆ ಮಾಡಲಾದ ಹುಡುಗಿರನ್ನು ಬಾಲಕಿಯರ ಬಾಲ ಮಂದಿರದಲ್ಲಿ ಇಡಲಾಗಿದೆ. ಬಾಲ್ಯವಿವಾಹ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿಕೆ. ಪದ್ಮಾ ತಿಳಿಸಿದ್ದಾರೆ.
ಯಾವ ತಿಂಗಳು ಎಷ್ಟು ಪ್ರಕರಣ? : ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ ನಂತರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿರುವುದು ಬೆಳಕಿಗೆ ಬಂದಿದ್ದು, ಏಪ್ರಿಲ್‌ನಲ್ಲಿ21, ಮೇ-43, ಜೂನ್-58,ಜುಲೈ- 6 ಹಾಗೂ ಆಗಸ್ಟ್‌ನಲ್ಲಿ21 ಪ್ರಕರಣಗಳು ಸೇರಿದಂತೆ ಒಟ್ಟು149 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ131 ಮದುವೆಗಳನ್ನು ತಡೆಯಲಾಗಿದ್ದು,18 ವಿವಾಹಗಳು ನಡೆದಿವೆ. ಈ 18 ಮದುವೆಗಳಿಗೆ ಸಂಬಂಧಿಸಿದಂತೆ ವಧು-ವರಕುಟುಂಬಗಳ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲಾಗಿದೆ.
ಮಕ್ಕಳ ಮೇಲೆ ಪೋಷಕರಲ್ಲಿ ನಂಬಿಕೆ ಇಲ್ಲ : ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿದೆ. ಆದರೆ,149 ಪ್ರಕರಣಗಳಷ್ಟೇ ಬೆಳಕಿಗೆ ಬಂದಿದೆ. ಜನರು ಬಡತನ, ತಿಳಿವಳಿಕೆ ಇಲ್ಲ ಎಂಬ ನೆಪ ಹೇಳುತ್ತಾರೆಯಷ್ಟೇ. ಮಕ್ಕಳ ಮೇಲೆ ಪೋಷಕರಲ್ಲಿ ನಂಬಿಕೆ ಇಲ್ಲವಾದ್ದರಿಂದ ಈ ರೀತಿಯಾಗುತ್ತಿದೆ. ಬೇರೊಬ್ಬ ಯುವಕನನ್ನು ಮಕ್ಕಳು ಪ್ರೀತಿ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ವಿವಾಹ ಮಾಡಿಬಿಡುವಕೆಲಸ ಆಗುತ್ತಿದೆ ಎಂದು ಮಕ್ಕಳ ಸಹಾಯ ವಾಣಿ ಸಂಯೋಜಕ ಎಸ್. ಶಶಿಕುಮಾರ್ ತಿಳಿಸಿದ್ದಾರೆ.
ಮಧ್ಯರಾತ್ರಿಯೇ ವಿವಾಹ : ಮೈಸೂರು ಜಿಲ್ಲೆಯಲ್ಲಿಕಳೆದ ಆರು ತಿಂಗಳಿನಲ್ಲಿ ನಡೆದ 18 ಬಾಲ್ಯ ವಿವಾಹಗಳು ಮಧ್ಯರಾತ್ರಿ ಅಥವಾ ಮುಂಜಾನೆಯೇ ನಡೆದಿರುವುದು ವಿಶೇಷ. ಮಕ್ಕಳಿಗೆ ಮದುವೆ ಮಾಡುತ್ತಿರುವ ಬಗ್ಗೆ ಇತರರಿಗೆ ತಿಳಿಯದಂತೆ ಹಾಗೂ ಅಧಿಕಾರಿಗಳು ಬಂದು ವಿವಾಹವನ್ನು ತಡೆಯೊಡ್ಡಬಾರದೆಂಬ ಕಾರಣಕ್ಕೆ ಪೋಷಕರು ಮಧ್ಯರಾತ್ರಿ ಅಥವಾ ಮುಂಜಾನೆಯನ್ನೇ ಆಯ್ಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
–ಸತೀಶ್ ದೇಪುರ