Advertisement

ಬಾಲ್ಯ ವಿವಾಹಕ್ಕೆ ಲಾಕ್‌ಡೌನ್‌ ವೇದಿಕೆ

06:06 PM Sep 23, 2020 | Suhan S |

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ ದೇಶದ ಎಲ್ಲ ವ್ಯವಸ್ಥಗೆ ಬಹುತೇಕ ನಕಾರಾತ್ಮಕ ಫಲಿತಾಂಶ ನೀಡಿದ್ದರೂ, ಬಾಲ್ಯ ವಿವಾಹಕ್ಕೆ ಹೆಸರಾದ ವಿಜಯಪುರ ಜಿಲ್ಲೆಯ ಮಟ್ಟಿಗೆ ಶುಭ ಕಾಲವಾಗಿ ಪರಿಣಮಿಸಿದೆ. ಪರಿಣಾಮ ಏಪ್ರಿಲ್‌ ನಂತರ ಕಳೆದ 4 ತಿಂಗಳಲ್ಲಿ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಮಕ್ಕಳನ್ನು ಬಾಲ್ಯ ವಿವಾಹ ಮಾಡಲು ಮುಂದಾದ 75 ಪ್ರಕರಣಗಳು ಬೆಳಕಿಗೆ ಬಂದಿರುವುದೇ ಇದಕ್ಕೆ ಸಾಕ್ಷಿ. ಇದರಲ್ಲಿ ಆಘಾತಕಾರಿ ಅಂಶ ಎಂದರೆ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುವ ಕೃತ್ಯಗಳು ಅಧಿಕಾರಿಗಳ ಸಕಾಲಿಕ ಮಧ್ಯಪ್ರವೇಶದಿಂದ ತಪ್ಪಿರುವುದು ನೆಮ್ಮದಿ ತಂದಿದೆ.

Advertisement

ಪಂಚ ನದಿಗಳ ನಾಡು ಎಂಬ ಹಿರಿಮೆ ಹೊಂದಿದ್ದರೂ ವಿಜಯಪುರ ಜಿಲ್ಲೆ ಭೀಕರ ಬರದಿಂದಾಗಿ ಬಡತನವೇ ಇಲ್ಲಿನ ಶ್ರೀಮಂತಿಕೆ ಮೈದುಂಬಿಕೊಂಡಿದೆ. ದುಡಿಯುವ ಕೈಗಳಿಗೆ ನಿರಂತರ ಕೆಲಸ ಇಲ್ಲದ ಕೃಷಿ ಆಧಾರಿತ ಜಿಲ್ಲೆಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೋಗುವುದು ಸಾಮಾನ್ಯ. ಹೀಗಾಗಿ ಲಕ್ಷಾಂತರ ಕುಟುಂಬಗಳು ಬೆಂಗಳೂರು, ಮಂಗಳೂರು, ಮುಂಬೈ, ಪುಣೆ, ಗೋವಾ ಹೀಗೆ ದೂರದ ನಗರಗಳಿಗೆ ಗುಳೆ ಹೋಗಿ ಅಲ್ಲಿಯೇ ನೆಲೆಸಿವೆ.

ಬಾಲ್ಯ ವಿವಾಹಕ್ಕೂ ವಿಜಯಪುರ ಜಿಲ್ಲೆಗೂ ಪಾರಂಪರಿಕ ನಂಟಿದೆ. ದೇವದಾಸಿ ಹೆಸರಿನಲ್ಲಿ ಬಾಲೆಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುವುದು ಜಿಲ್ಲೆಯಲ್ಲಿ ಹೊಸದೇನಲ್ಲ. ಹೀಗಾಗಿಯೇ 2019-20 ಒಂದೇ ವರ್ಷದಲ್ಲಿ 123 ಬಾಲ್ಯ ವಿವಾಹ ತಡೆಗಟ್ಟಿದ್ದರೆ, ಲಾಕ್‌ಡೌನ್‌ ಸಂದರ್ಭದ ಏಪ್ರಿಲ್‌-ಜುಲೈ ಅವ ಧಿಯಲ್ಲಿ ಬಾಲ್ಯ ವಿವಾಹ ತಡೆಗಾಗಿ 106 ದೂರು ಸ್ವೀಕರಿಸಿ, 75 ಪ್ರಕರಣಗಳಲ್ಲಿ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ. ಆಡುವ ಮಕ್ಕಳನ್ನು ಮದುವೆ ಬಂಧನಕ್ಕೆ ಕಟ್ಟಿ ಹಾಕುವ ಕೃತ್ಯಗಳಿಗೆ ಲಾಕ್‌ಡೌನ್‌ ಸಂದರ್ಭದ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ.

ಕಾರಣ ಹಲವು: ಬಡತನ ಹಾಗೂ ಗುಳೆ ಸಂಕಷ್ಟದ ಬದುಕು ದೂಡುವ ಕುಟುಂಬ ಗಳಿಗೆ ಹದಿಹರೆಯದ ಬಾಲೆಯರ ಮೇಲೆ ನಿಗಾ ವಹಿಸುವುದು ಕಷ್ಟವಾಗುತ್ತಿದೆ. ಕೊನೆಯ ಮಗನ ಮದುವೆಯನ್ನು ಪ್ರತ್ಯೇಕವಾಗಿ ಮಾಡುವಂತಿಲ್ಲ, ಸೋದರ ಮಾವನ ಮದುವೆಯಲ್ಲಿ ಸೋದರ ಅಳಿಯನ ಮದುವೆ ಮಾಡಿದರೆ ಸಮೃದ್ಧಿ ಹೆಚ್ಚಳ. ಒಂದೇ ಮದುವೆಯಲ್ಲಿ ಹಲವು ಮದುವೆ ಮಾಡಿದರೆ ಖರ್ಚಿನ ಉಳಿತಾಯ ಹೀಗೆ ಸಾಮಾಜಿಕ, ಆರ್ಥಿಕ, ಕೌಟುಂಬಿಕವಾಗಿ ಹಲವು ಕಾರಣಗಳು ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ವೇದಿಕೆ ರೂಪಿಸುವಂತೆ ಮಾಡುತ್ತಿದೆ.

ಈಚಿನ ದಿನಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಸಿಲುಕುತ್ತಿರುವ ಮಕ್ಕಳು, ಹರೆಯಕ್ಕೆ ಮುನ್ನವೇ ದೈಹಿಕ ವಾಂಚೆಗಳಿಗೆ ಸಿಲಕುತ್ತಿದ್ದಾರೆ. ಇಂಥ ಘಟನೆಗಳಿಂದ ಹೆಣ್ಣುಮಕ್ಕಳ ಪಾಲಕರು ಆತಂಕಕ್ಕೀಡಾಗುತ್ತಿದ್ದಾರೆ.

Advertisement

ಅಪ್ರಾಪ್ತ ವಯಸ್ಸಿನಲ್ಲೇ ಋತುಮತಿಯಾಗುವ ಹೆಣ್ಣು ಮಕ್ಕಳು ಪ್ರೀತಿ-ಪ್ರೇಮದ ಸೆಳೆತದಿಂದ ಮನೆ ಬಿಟ್ಟು ಓಡಿ ಹೋಗುವ ಆತಂಕವೂ ಹೆತ್ತವರನ್ನು ಕಾಡಿದೆ. ಹಲವು ಸಂದರ್ಭದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆದಾಗ, ಪ್ರಕರಣ ದಾಖಲಿಸಿ ಪೊಲೀಸ್‌ ಮೆಟ್ಟಿಲೇರಿದರೆ ತಮ್ಮ ಮಗಳ ಭವಿಷ್ಯ ಹಾಗೂ ಕುಟುಂಬದ ಮಾನ ಹೋಗುತ್ತದೆಂಬ ಭಯವೂ ಜನರಲ್ಲಿದೆ.

ಇಂತ ಸಂದರ್ಭದಲ್ಲಿ ಅತ್ಯಾಚಾರಿಯೊಂದಿಗೆ ಕದ್ದುಮುಚ್ಚಿ ಅಪ್ರಾಪ್ತ ಬಾಲಕಿಯರ ಮದುವೆ ಮಾಡಿಸುತ್ತಾರೆ. ಇಂಥ ಕಾರಣಗಳೇ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಪ್ರೇರಣೆ ನೀಡುತ್ತಿವೆ ಎಂಬ ಅಂಶ ಹೊರಬಿದ್ದಿದೆ. ಇದರಲ್ಲಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಹೀಗೆ ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆ ವಿಷಯದಲ್ಲಿ ವಿವಿಧ ಸ್ಥರಗಳಲ್ಲಿ ನಿಯೋಜಿಸಿರುವ ವ್ಯವಸ್ಥೆಗಳೆಲ್ಲ ಒಗ್ಗೂಡಿ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

ವೇಶ್ಯಾವಾಟಿಕೆಗೆ ತಳ್ಳುವ ಯತ್ನ ವಿಫಲ : ನಗರದಲ್ಲಿ ಮಾಜಿ ದೇವದಾಸಿ ತಾಯಿಯೊಬ್ಬಳು 14 ಹಾಗೂ 16 ವರ್ಷದ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ದೇವದಾಸಿ ಬಿಟ್ಟು, ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದಳು. ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿರುವ ಈ ಪ್ರಕರಣದಲ್ಲಿ ಬಡತನ ಹಾಗೂ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ಸಹೋದರಿಯರನ್ನು ನಿಷೇಧಿ ತ ದೇವದಾಸಿ ಪದ್ಧತಿಗೆ ನೂಕಲು ಯತ್ನ ನಡೆಸಲಾಗಿತ್ತು. ದೂರು ಸ್ವೀಕರಿಸಿದ ಮಕ್ಕಳ ಸಹಾಯವಾಣಿ ಸಂಬಂಧಿಸಿದ ಅಧಿಕಾರಿಗಳ ನೆರವಿನಿಂದ ಸ್ಥಳಕ್ಕೆ ಧಾವಿಸಿ ಬಾಲೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

14ರ ಬಾಲೆಗೆ 40 ವರ್ಷದ ವರ : ಸಿಂದಗಿ ಮೂಲದ 14 ವರ್ಷದ ಬಾಲಕಿಯನ್ನು ಒಂದು ಕಣ್ಣಿಲ್ಲದ 40 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಪತಿಯಿಂದ ದೂರವಾಗಿದ್ದ ಮಹಿಳೆ ತನ್ನ ಮೂರು ಹೆಣ್ಣುಮಕ್ಕಳನ್ನು ಸಾಕುವಲ್ಲಿ ಹೆಣಗಾಡುತ್ತಿದ್ದಳು. ಈ ಹಂತದಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಒಂದು ಕಣ್ಣಿಲ್ಲದ, ಇದ್ದೊಂದು ಕಣ್ಣೂ ಸೂಕ್ತ ದೃಷ್ಟಿಸದ 40 ವರ್ಷದ ವ್ಯಕ್ತಿ 14ರ ಬಾಲೆಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದ. 40 ಎಕರೆ ಜಮೀನಿದ್ದ ಆತ ಬಾಲಕಿ ತಾಯಿಗೆ ಚಿನ್ನ ಹಾಗೂ ಹಣ ನೀಡುವ ಆಸೆ ತೋರಿಸಿ ಅಪ್ರಾಪ್ತಳನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಸ್ಥಳೀಯರ ದೂರಿನ ಅನ್ವಯ ಬಾಲಕಿಯನ್ನು 26 ವರ್ಷದ ಅಂತರ ಇರುವ ಅಂಧನಿಗೆ ಮದುವೆ ಮಾಡಿಕೊಡುವ ಬಾಲ್ಯ ವಿವಾಹ ತಡೆಯುವಲ್ಲಿ ಜಿಲ್ಲೆಯ ಅಧಿಕಾರಿಗಳು ಯಶಸ್ವಿಯಾಗಿದ್ದರು.

ಸೋದರತ್ತೆ ವಂಚನೆಯಿಂದ ಬಾಲ್ಯ ವಿವಾಹ : ನಗರ ನಿವಾಸಿ ಮಹಿಳೆಯೊಬ್ಬಳು ಬಬಲೇಶ್ವರ ತಾಲೂಕಿನ ತನ್ನ ಅಣ್ಣನ ಅಪ್ತಾಪ್ತ ಮಗಳನ್ನು ತಂದು ಮನೆಯಲ್ಲಿ ಇರಿಸಿಕೊಂಡಿದ್ದಳು. ಲಾಕ್‌ಡೌನ್‌ ಸಂದರ್ಭದಲ್ಲಿ ಬಾಲಕಿಯ ಹೆತ್ತವರಿಗೂ ತಿಳಿಯದಂತೆ ತನ್ನ ಮಗನಿಗೆ ಮದುವೆ ಮಾಡಿಸಿದ್ದಳು. ತತನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ಅರಿಯದ ಬಾಲಕಿಯ ಲಿಂಗಕಾಯಿ (ಇಷ್ಟಲಿಂಗ ಇರಿಸುವ ಬೆಳ್ಳಿಯ ಸಾಧನ)ದಲ್ಲಿ ಮಾಂಗಲ್ಯಗಳನ್ನು ಇರಿಸಿ ಬಾಲ ಮದುವೆಯನ್ನು ಮುಚ್ಚಿಡಲಾಗಿತ್ತು. ನಂತರ ವಿಷಯ ಗೊತ್ತಾಗಿ ಪಾಲಕರು ನಗರದ ಜಲನಗರ ಠಾಣೆಗೆ ದೂರು ನೀಡಿದ್ದರು.

ಮೂರನೇ ಪತ್ನಿಯ ಅಪ್ರಾಪ್ತ ತಂಗಿ ಮೇಲೆ ಆಸೆ : ನಗರದಿಂದ ಅನತಿ ದೂರದಲ್ಲಿರುವ ತಾಂಡಾವೊಂದರಲ್ಲಿ 30 ವರ್ಷದಲ್ಲೇ ಮೂರು ಮದುವೆ ಆಗಿರುವ ಭೂಪನೊಬ್ಬ, ಮೂರನೇ ಮಡದಿಯ ಅಪ್ರಾಪ್ತ ತಂಗಿಯ ಮೇಲೂ ಕಣ್ಣು ಹಾಕಿ ನಾಲ್ಕನೇ ಮದುವೆಗೆ ಸಿದ್ಧನಾಗಿದ್ದ. ಇದನ್ನರಿತ ಬಾಲಕಿಯ ಅಕ್ಕ ತವರಿನವರಿಗೆ ವಿಷಯ ತಿಳಿಸಿದ್ದಳು, ಇದರಿಂದ ಕಂಗಾಲಾದ ಹೆತ್ತವರು ಮಗಳ ರಕ್ಷಣೆಗಾಗಿ ಬೇರೊಬ್ಬನೊಂದಿಗೆ ಬಾಲ್ಯ ವಿವಾಹ ಮಾಡಿಕೊಡಲು ಮುಂದಾಗಿದ್ದರು. ಇದರಿಂದ ಬಾಲಕಿ ತನ್ನ ಕೈ ತಪ್ಪುತ್ತಾಳೆಂದು ಸ್ವಯಂ ಆರೋಪಿಯೇ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿ ಬಾಲ್ಯ ವಿವಾಹದ ಸಿದ್ಧತೆ ವಿಷಯ ತಿಳಿಸುತ್ತಿದ್ದ. ಅಧಿಕಾರಿಗಳನ್ನೇ ಬೆದರಿಸಿ, ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದ ಈತನ ವಿರುದ್ಧ ಪೊಲೀಸ್‌ ದೂರು ದಾಖಲಾಗಿದ್ದರೂ, ಬಾಲಕಿಗೆ ಕಿರುಕುಳ ನೀಡುವ ಕೃತ್ಯವನ್ನೂ ಈಗಲೂ ಮುಂದುವರಿಸಿದ್ದಾನೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಪೊಲೀಸರ ಓಡಾಟವಿಲ್ಲ, ಅಧಿಕಾರಿಗಳು ಬರುವುದಿಲ್ಲ ಎಂಬ ಕಾರಣಕ್ಕೆ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಬಡತನ ಹಾಗೂ ಗುಳೆ ಹೋಗುವ ಕುಟುಂಬಗಳು, ಮೂಡನಂಬಿಕೆಯ ಕಾರಣಗಳಿಂದಾಗಿ ತಮ್ಮ ಮಕ್ಕಳ ರಕ್ಷಣೆಗಾಗಿ ಬಾಲ್ಯ ವಿವಾಹಕ್ಕೆ ಮುಂದಾಗಿರುವುದು ಕಂಡು ಬಂದಿದೆ.  –ಸುನಂದಾ ತೋಳಬಂದಿ, ಜಿಲ್ಲಾ ಸಂಯೋಜಕಿ, ಮಕ್ಕಳ ಸಹಾಯವಾಣಿ

ಬಡತನ ಹಾಗೂ ಅಪ್ರಾಯದಲ್ಲೇ ಋತುಮತಿಯಾಗುವ ಬಾಲೆಯರನ್ನು ಈಚಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಂರಕ್ಷಣೆ ಮಾಡುವುದು ಪಾಲಕರಿಗೆ ಆತಂಕ ಹಾಗೂ ಸವಾಲಾಗಿದೆ. ನೆರೆ-ಹೊರೆಯವರ ಕಾಟದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲಾಗದ ಬಡ ಕುಟುಂಬಗಳು ಅಪ್ರಾಪ್ತ ಮಕ್ಕಳ ಮದುವೆ ಮೂಲಕ ಹೊಣೆಗಾರಿಕೆಯಿಂದ ಮುಕ್ತವಾಗಲು ಧಾವಂತ ತೋರುತ್ತಿದ್ದಾರೆ. –ನಿರ್ಮಲಾ ಸುರಪುರ, ಸಿಡಿಪಿಒ, ವಿಜಯಪುರ

ಸಮಾಜದಲ್ಲಿ ಇನ್ನೂ ಬೇರೂರಿರುವ ಮೂಢನಂಬಿಕೆಗಳ ಜತೆಗೆ ಈಚಿನ ಸಾಮಾಜಿಕ ವ್ಯವಸ್ಥೆ ಬಾಲ್ಯ ವಿವಾಹಕ್ಕೆ ಹೆಚ್ಚಿನ ಪ್ರೇರಣೆ ನೀಡುತ್ತಿವೆ. ಬಾಲ್ಯ ವಿವಾಹ ಅಮೂಲಾಗ್ರ ನಿಮೂರ್ಲನೆಗೆ ಸರ್ಕಾರದ ಕಾಳಜಿ, ಕಾನೂನುಗಳಿಗಿಂತ ಸಮಾಜ ಹಾಗೂ ಯುವ ಸಮೂಹದ ಮನಸ್ಥಿತಿ ಬದಲಾಗಬೇಕಿದೆ.- ಬಸವರಾಜ ಬೆಟಗೇರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ವಿಜಯಪುರ

 

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next