Advertisement

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

09:00 PM Apr 16, 2024 | Team Udayavani |

ವಿಜಯಪುರ : ಕಾನೂನು ಬಾಹೀರವಾಗಿ ಬಾಲ್ಯ ವಿವಾಹ ಮಾಡಿದ ಪ್ರಕರಣದಲ್ಲಿ ವಿಜಯಪುರದ ಸ್ಥಳೀಯ ನ್ಯಾಯಾಲಯ ಮಂಗಳವಾರ 7 ಜನರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

Advertisement

ವಿಜಯಪುರ ನಗರದ ಆದಿಲ್ ಶಾಹಿ ಮಂಗಲ ಕಾರ್ಯಾಲಯದಲ್ಲಿ 2018 ಆಗಸ್ಟ್ 30 ರಂದು ಗೋಡಿಹಾಳ ಕಾಲೋನಿಯ ಅಪ್ರಾಪ್ತ ಬಾಲಕಿಯನ್ನು ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದ ಸದ್ದಾಂ ಹುಸೇನ್ ಎಂಬ ಯುವಕನಿಗೆ ಕೊಟ್ಟು ಬಾಲ್ಯ ವಿವಾಹ ಮಾಡಲಾಗಿತ್ತು.

ಸದರಿ ವಿಷಯ ತಿಳಿಯುತ್ತಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿದ್ದ ನಿರ್ಮಲಾ ಸುರಪುರ, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅನ್ವಯ ಕಾನೂನು ಉಲ್ಲಂಘೀಸಿ ಬಾಲ್ಯ ವಿವಾಹ ಮಾಡಿರುವ ಕುರಿತು ಮಾಹಿತಿ ಸಂಗ್ರಹಿಸಿದ್ದರು.

ಬಳಿಕ ವಿವಾಹ ಮಾಡಿಕೊಂಡ ಸದ್ದಾಂ ಹುಸೇನ್ ಸಲೀಮ್ ಶೇಖ್, ಬಾಲ್ಯ ವಿವಾಹ ಮಾಡಿದ ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಅರಳಗುಂಡಗಿ ಮೂಲದ ಕಾಸೀಮ ಶೇಖ್, ರಾಜಾಬಿ ಶೇಖ, ಮಜರ ಸಲೀಮ ಶೇಖ್, ಶಹಜಾನ್ ಶೇಖ, ಅಬ್ದುಲ್ ರಜಾಕ್ ಬಿದ್ನಾಳ, ಕಲೀದ ಪಟೇಲ್ ಸೇರಿದಂತೆ 7 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗೋಲಗುಂಬಜ ಠಾಣೆ ಎಸೈ ಆರ್.ಬಿ.ಹಳ್ಳಿ, ತನಿಖೆಯ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರದ 3ನೇ ಅಧಿಕ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾದೇಶ ಎಂ.ವಿ. ಎಲ್ಲ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

Advertisement

ಇವರು ಸಾರ್ವಜನಿಕ ಅಭಿಯೋಜಕರು ಸಲ್ಲಿಸಿದ ಸಾಕ್ಷಿ-ಪುರಾವೆ ಆಧರಿಸಿ ಬಾಲ್ಯ ವಿವಾಹ ಮಾಡಿರುವ ಎಲ್ಲ ಏಳೂ ಆರೋಪಿಗಳಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿಶ್ವನಾಥ ಪಾಟೀಲ ಸಾಕ್ಷಾಧಾರ ಸಮೇತ ವಾದ ಮಂಡಿಸಿದ್ದರು.

ಇದನ್ನೂ ಓದಿ: UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Advertisement

Udayavani is now on Telegram. Click here to join our channel and stay updated with the latest news.

Next