ಉಪ್ಪುಂದ : ಇಲ್ಲಿನ ಮಂಗಳವಾರದ ಸಂತೆಗೆ ಜಿಲ್ಲಾ ಮಕ್ಕಳ ರಕ್ಷಣ ಘಟಕದಿಂದ ದಾಳಿ ನಡೆಸಿ ಭಿಕ್ಷಾಟನೆ ನಿರತ ಹಾಗೂ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಕ್ಕಳ ರಕ್ಷಣೆ ಮಾಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ಘಟಕ ಉಡುಪಿ, ಬೈಂದೂರು ಪೊಲೀಸ್ ಠಾಣೆ, ಉಪ್ಪುಂದ ಗ್ರಾ.ಪಂ. ಜಂಟಿ ಕಾರ್ಯಾಚರಣೆಯಲ್ಲಿ ಭಿಕ್ಷಾಟನೆ ನಿರತ ಹಾಗೂ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ 6 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
ಉಪ್ಪುಂದ ಪೇಟೆ ಹಾಗೂ ಸಂತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 5 ಗಂಡು ಮತ್ತು 1 ಹೆಣ್ಣು ಒಟ್ಟು 6 ಮಕ್ಕಳನ್ನು ಈ ಸಂದರ್ಭ ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ರಕ್ಷಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಅಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಮಹೇಶ ದೇವಾಡಿಗ, ಕಪಿಲಾ, ಸಮಾಜ ಕಾರ್ಯಕರ್ತರಾದ ಯೋಗೀಶ, ಸುರಕ್ಷಾ, ಸಂದೇಶ, ಬೈಂದೂರು ಠಾಣಾ ಸಿಬಂದಿ ಯಶೋದಾ, ಉಪ್ಪುಂದ ಗ್ರಾ.ಪಂ. ಸದಸ್ಯ ಮೋಹನಚಂದ್ರ, ಕಾರ್ಯದರ್ಶಿ ಗಿರಿಜಾ, ಸಿಬಂದಿ ನರಸಿಂಹ ಭಾಗವಹಿಸಿದ್ದರು.
ಆಟಿಕೆ ಲಾರಿಗಾಗಿ ಭಿಕ್ಷಾಟನೆ
ಪೇಟೆಯಲ್ಲಿ ಬಾಲಕನೊಬ್ಬ ತನ್ನಿಷ್ಟದ ಆಟಿಕೆಗಳನ್ನು ಖರೀದಿಸಿ ಅವುಗಳೊಂದಿಗೆ ಆಟ ಆಡುವ ಆಸೆಯಿಂದ ಭಿಕ್ಷೆ ಬೇಡಲು ತೊಡಗಿಕೊಂಡಿರುವುದು ಮನಕಲಕುವಂತಿತ್ತು. ಮಾರಿ ಅಮ್ಮನ ಮೂರ್ತಿ ಹೊತ್ತು ಭಿಕ್ಷೆ ಬೇಡುತ್ತಿದ್ದ ಹಾವೇರಿ ಮೂಲದ ಮಹಿಳೆಯೊಂದಿಗೆ 6 ವರ್ಷದ ಬಾಲಕ ತಾಯಿ ಆಟದ ಸಾಮಗ್ರಿ ತೆಗೆದು ಕೊಟ್ಟಿಲ್ಲ ಎಂದು ತಾನೆ ಬೇರೆಯಾಗಿ ಭಿಕ್ಷೆ ಬೇಡಿ ಬಣ್ಣ ಬಣ್ಣದ ಚಿಕ್ಕ ಚಿಕ್ಕ ಲಾರಿಗಳನ್ನು ತೆಗೆದುಕೊಂಡು ಖುಷಿ ಪಡುತ್ತಿರುವ ಬಗ್ಗೆ ಬಾಲಕನ ಮಾತು ಮನಕಲಕುವಂತಿತ್ತು.