ಹುಬ್ಬಳ್ಳಿ: ಬಾಲಕಾರ್ಮಿಕ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲಕಾರ್ಮಿಕ ವಿರೋಧಿ ಕಾಯ್ದೆ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರೀತಿ ಕೆ. ಹೇಳಿದರು.
ಗೋಕುಲ ರಸ್ತೆಯ ಕಾರ್ಮಿಕ ಭವನದಲ್ಲಿ ರವಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ವಾರ್ತಾ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಮಿತಿ ಆಶ್ರಯದಲ್ಲಿ ಬಾಲಕಾರ್ಮಿಕ ವಿರೋಧಿ ದಿನದ ನಿಮಿತ್ತ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎನ್ನದೇ ಇಂದಿನ ಪ್ರಜೆಗಳು ಎಂದೇ ಪರಿಗಣಿಸಬೇಕು. ಮಕ್ಕಳ ಮನಸ್ಸನ್ನು ಪಾಲಕರು, ಪೋಷಕರು ಅರಿತುಕೊಳ್ಳಬೇಕು. ಅವರ ಸಾಮರ್ಥ್ಯ, ದೌರ್ಬಲ್ಯ ಅರ್ಥೈಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲಕಾರ್ಮಿಕ ವಿರೋಧಿ ಕಾಯ್ದೆಯಡಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಅಪ್ರಾಪ್ತ ಬಾಲಕರನ್ನು ಗುರುತಿಸಿ, ಸಂಬಂಧಿಸಿದ ಮಾಲೀಕರು, ಪಾಲಕ ಪೋಷಕರ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ಬಾಲ ಕಾರ್ಮಿಕರ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಿರುಚಿತ್ರ ಹಾಗೂ ಬೀದಿನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ಮಾತನಾಡಿ, ಬಾಲ ಕಾರ್ಮಿಕತ್ವಕ್ಕೆ ಸಾಮಾಜಿಕ, ಆರ್ಥಿಕ ಕಾರಣಗಳಿವೆ. ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ದೂಡುವುದು ಅಪರಾಧವಾಗಿದೆ ಎಂದರು.
ವಾರ್ತಾ ಇಲಾಖೆ ಕಚೇರಿ ಅಧೀಕ್ಷಕ ವಿನೋದಕುಮಾರ ಮಾತನಾಡಿ, ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವಲ್ಲಿ ಪಾಲಕ, ಪೋಷಕರು ಜಾಗೃತಿ ವಹಿಸಬೇಕು ಎಂದರು.
ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮಾತನಾಡಿ, ಕಾರ್ಮಿಕ ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವುದು ಶಿಕ್ಷಾರ್ಹ ಅಪರಾಧ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಪ್ರತಿಜ್ಞಾ ಬೋಧನೆ, ಬಾಲ ಕಾರ್ಮಿಕ ವಿರೋಧಿ ದಿನ ಜಾಗೃತಿ ಜಾಥಾ ನಡೆಸಲಾಯಿತು. ಸಂಗೀತಾ ಪ್ರಾರ್ಥಿಸಿದರು. ಅಕ್ರಮ ಮಲ್ಲಾಪೂರ ನಿರೂಪಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ ವಂದಿಸಿದರು.