ಚಾಮರಾಜನಗರ: ಬಾಲ ಕಾರ್ಮಿಕ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ. ಬಸವರಾಜ ಹೇಳಿದರು.
ನಗರದ ಜಿಲ್ಲಾ ಹಾಗೂ ಸೆಷೆನ್ಸ್ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಬಾಲಕಾರ್ಮಿಕ ಪದ್ಧತಿ ತಡೆ ಜಾಗೃತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಮಾತನಾಡಿ, 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸುವ ಸಲುವಾಗಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಜಾಗೃತಿ ರಥ ಹಮ್ಮಿಕೊಂಡು ಜಿಲ್ಲಾದ್ಯಂತ ಸಂಚರಿಸಿ ಜಾಗೃತಿ ಉಂಟು ಮಾಡಲಾಗುತ್ತದೆ ಎಂದರು.
15ರಿಂದ 18 ವರ್ಷದೊಳಗಿನವರು ತಮ್ಮ ಇಲಾಖೆ ಅನುಮತಿ ಪಡೆದು ಅಪಾಯಕಾರಿ ಅಲ್ಲದ ಉದ್ಯಮದಲ್ಲಿ ದುಡಿಮೆ ಮಾಡಬಹುದು. ಅಪಾಯಕಾರಿಯಾದ ಸ್ಫೋಟಕ, ಗಣಿಗೆ ಸಂಬಂಧಿಸಿ ಕಾರ್ಖಾನೆಗಳಲ್ಲಿ ಕೆಲಸ ಮಾಡಬಾರದು. ಇದು ಕಂಡುಬಂದರೆ 2 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಬಾಲಕಾರ್ಮಿಕ ಯೋಜನಾಧಿಕಾರಿ ಎಂ.ಮಹೇಶ್, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ವಕೀಲರಾದ ಗಿರೀಶ್, ರಂಗಸ್ವಾಮಿ ಇತರರಿದ್ದರು.