ಮಂಗಳೂರು: ಮನೆಯಲ್ಲಿ ಮಗು ಅನಾರೋಗ್ಯವಾಗಿದ್ದರೆ ಇಡೀ ಮನೆ ಮಂದಿ ಅನಾರೋಗ್ಯವಾಗುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣದಿಂದಾಗಿ ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಕಾಳಜಿಯನ್ನು ಹೆತ್ತವರು ಬೆಳೆಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು. ಅತ್ತಾವರ ಕೆಎಂಸಿ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ಅಂಗವಾಗಿ 3ನೇ ಹಂತದ ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯದ ಬಗ್ಗೆ ಹೆತ್ತವರು ಯಾವುದೇ ಕಾರಣಕ್ಕೂ ನಿರಾಸಕ್ತಿ ತೋರಬಾರದು. ತಜ್ಞ ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರೆ ಎಲ್ಲವೂ ಪರಿಪೂರ್ಣವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಮಣಿಪಾಲ ಸಮೂಹ ಸಂಸ್ಥೆಯ ಸೇವೆ ದೇಶಕ್ಕೆ ಮಾದರಿ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಕೆಎಂಸಿ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕೆಎಂಸಿ ಆಸ್ಪತ್ರೆಯು ಲಕ್ಷಾಂತರ ಜನರಿಗೆ ಪುನರಪಿ ಜೀವನ ಕಲ್ಪಿಸಿಕೊಟ್ಟಿದೆ. ಸರಕಾರ ಮಾಡಬೇಕಾದ ಸಮಾಜಮುಖೀ ಕಾರ್ಯಗಳನ್ನು ಕೆಎಂಸಿ ಆಸ್ಪತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಅಂತಾರಾಷ್ಟ್ರೀಯ ಮಾದರಿಯಲ್ಲಿ ಚಿಕಿತ್ಸೆ ಒದಗಿಸಿಕೊಡುವಲ್ಲಿ ಕೆಎಂಸಿ ಪಾತ್ರ ಹಿರಿದು ಎಂದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆ ಅತ್ಯಂತ ಯಶಸ್ವಿ ಯೋಜನೆಯಾಗಿದ್ದು, ಇದನ್ನು ಎರಡೂ ಜಿಲ್ಲೆಗಳಿಗೂ ವಿಸ್ತರಿಸಬಹುದಾಗಿದೆ. ಈ ಬಗ್ಗೆ ಮಣಿಪಾಲ ಸಂಸ್ಥೆ ಅತ್ಯಂತ ಮುತುವರ್ಜಿಯಿಂದ ನೇತೃತ್ವ ವಹಿಸಿಕೊಳ್ಳಲಿದೆ ಎಂದರು.
ಶಸ್ತ್ರಚಿಕಿತ್ಸೆಗೆ ಗುರುತಿಸಲ್ಪಟ್ಟ ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು. ಅನಂತ ಮಲ್ಯ ಚಾರಿಟೆಬಲ್ ಟ್ರಸ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ಅವಶ್ಯ ಔಷಧ, ಆಹಾರ, ಪೋಷಣಾ ವೆಚ್ಚ ಭರಿಸಲಿದೆ. ಜ. 21ರ ವರೆಗೆ ಉಚಿತ ಶಸ್ತ್ರಚಿಕಿತ್ಸಾ ಸಮಾಲೋಚನೆಯನ್ನೂ ಹಮ್ಮಿಕೊಳ್ಳಲಾಗಿದೆ. ಪೋಷಕರು ರೋಗ ಲಕ್ಷಣ ಉಳ್ಳ ತಮ್ಮ ಮಕ್ಕಳನ್ನು ಪರಿಶೀಲನೆಗಾಗಿ ಕರೆತರಬಹುದು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ಅಮೆರಿಕದ ಪೀದ್ ಪರಾಯಿ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಡಾ| ಅಶ್ವಿನ್ ಪಿಂಪಲ್ವರ್, ಅನಂತ ಮಲ್ಯ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಜಿತೇಂದ್ರ ನಾಯಕ್, ಮಾಹೆ ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಿಲರ್ ಡಾ| ವಿ. ಸುರೇಂದ್ರ ಶೆಟ್ಟಿ, ಕೆಎಂಸಿ ಮಂಗಳೂರು ಡೀನ್ ಡಾ| ಎಂ. ವೆಂಕಟ್ರಾಯ ಪ್ರಭು, ಕೆಎಂಸಿಯ ರೀಜಿನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಾಘಿರ್ ಸಿದ್ದಿಕಿ ಉಪಸ್ಥಿತರಿದ್ದರು.