ಬೆಂಗಳೂರು: ಪಾಲಿಕೆ ಮುಖ್ಯ ಎಂಜಿನಿಯರ್ ಒಳಗೊಂಡ ಸಮಿತಿಯು ಇತ್ತೀಚೆಗೆ ಮಲ್ಲೇಶ್ವರದ ಆಟದ ಮೈದಾನದಲ್ಲಿ ಗೇಟ್ ಬಿದ್ದು ಬಾಲಕ ಸಾವಿಗೀಡಾದ ಪ್ರಕರಣದ ವೈಫಲ್ಯದ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಿದೆ.
ಸಮರ್ಪಕವಾಗಿ ಗೇಟ್ ವೆಲ್ಡಿಂಗ್ ಮಾಡದಿರುವುದು ಈ ಘಟನೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ತನಿಖಾ ಸಮಿತಿ ಬೆಳಕು ಚೆಲ್ಲಿದೆ. ಈ ಮಧ್ಯೆ ಪೂರ್ಣ ವರದಿ ನೀಡುವಂತೆ ಪಾಲಿಕೆ ಮುಖ್ಯ ಆಯುಕ್ತರು ತನಿಖಾ ಸಮಿತಿಗೆ ಮತ್ತೆ ಸೂಚಿಸಿದ್ದಾರೆ.
ಸೆ.22ರಂದು ಆಟದ ಮೈದಾನದಲ್ಲಿ ಆಟವಾಡಲು ಬಂದಿದ್ದ 11 ವರ್ಷದ ಶಾಲಾ ಬಾಲಕನ ಮೇಲೆ ಗೇಟ್ ಬಿದ್ದು ಆತ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಕುರಿತು ವರದಿ ನೀಡುವ ಸಂಬಂಧ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮುಖ್ಯ ಎಂಜಿನಿಯರ್ ಒಳಗೊಂಡ ತನಿಖಾ ಸಮಿತಿ ರಚಿಸಿ, 1 ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದರು.
ಪೂರ್ಣ ವರದಿ ನೀಡುವಂತೆ ಸೂಚನೆ: ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಮುಖ್ಯ ಆಯುಕ್ತರು, ಘಟನೆ ಸಂಬಂಧಿಸಿದಂತೆ ವರದಿಯನ್ನು ನೀಡಲಾಗಿದ್ದು, ಈ ವರದಿ ಪೂರ್ಣವಾ ಗಿಲ್ಲ. ಅಪೂರ್ಣವಾಗಿದೆ. ಆದರೆ, ಗೇಟು ಬಿದ್ದ ಕಾರಣವನ್ನು ಮಾತ್ರ ತಿಳಿಸಲಾಗಿದೆ. ಪೂರ್ಣ ವರದಿಯನ್ನು ನೀಡಬೇಕು ಎಂದು ಮುಖ್ಯ ಆಯುಕ್ತರು ಸಮಿತಿಗೆ ಸೂಚಿಸಿದ್ದಾರೆ. ಈಗ ನೀಡುವ ವರದಿ ಪ್ರಕಾರ, ವೆಲ್ಡಿಂಗ್ ಸರಿಯಾಗಿರಲಿಲ್ಲ. ಭಾರವಾಗಿದ್ದ ರಿಂದ ಬಿದ್ದಿದೆ ಎಂದಿದೆ. ಆದರೆ, 51 ಲಕ್ಷ ರೂ. ವೆಚ್ಚದಲ್ಲಿ ಗೇಟ್ ನಿರ್ಮಾಣವಾಗಿರು ವುದರಿಂದ ಹೇಗೆ ಬೀಳಲು ಸಾಧ್ಯ. 226 ಕೆ.ಜಿ. ಭಾರವಿರುವ ಈ ಗೇಟ್ ಅನ್ನು ಹೇಗೆ ನಿರ್ಮಿಸಬೇಕಾಗಿತ್ತು. ಲೋಪವಾಗಿದ್ದು ಹೇಗೆ ಎಂಬೆಲ್ಲಾ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.