Advertisement

ಬೀದಿ ನಾಯಿಗಳ ದಾಳಿಗೆ ಬಾಲಕ ಸಾವು

01:25 AM Jun 26, 2019 | Lakshmi GovindaRaj |

ಬೆಂಗಳೂರು: ನಗರದ ಹೊರವಲಯದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಿಂಡಿನ ದಾಳಿಯಿಂದ ಐದು ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.
ಸೋಲದೇವನಹಳ್ಳಿ ಬಳಿಯ ಅಜ್ಜೆàಗೌಡನಪಾಳ್ಯ ನಿವಾಸಿ ಮಲ್ಲಪ್ಪ ಮತ್ತು ಮಲ್ಲಮ್ಮ ದಂಪತಿಯ ನಾಲ್ಕನೇ ಪುತ್ರ ದುರ್ಗೇಶ್‌(5) ಮೃತ ಬಾಲಕ.

Advertisement

ತಂದೆ ನೋಡಲು ಹೋಗುತ್ತಿದ್ದ ಆತನ ಮೇಲೆ ಹತ್ತಾರು ನಾಯಿಗಳು ಏಕಾಏಕಿಯಾಗಿ ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ ಆತ ತೀವ್ರ ಗಾಯಗೊಂಡಿದ್ದ. ಆತನ ಕೂಗಾಟ ಕೇಳಿ ತಂದೆ ಹಾಗೂ ಸ್ಥಳೀಯರು ನಾಯಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಸ್ಥಳದಲ್ಲೇ ದುರ್ಗೇಶ್‌ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿರುವುದಾಗಿ ಪೊಲೀಸರು ಹೇಳಿದರು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಲ್ಲಪ್ಪ ಮತ್ತು ಮಲ್ಲಮ್ಮ ಹಲವು ವರ್ಷಗಳ ಹಿಂದೆಯೇ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದಾರೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸೋಲದೇವನಹಳ್ಳಿಯ ಕಸಘಟ್ಟಪುರ ಗ್ರಾಪಂ ವ್ಯಾಪ್ತಿಯ ಅಜ್ಜೆàಗೌಡಪಾಳ್ಯದ ಹೊರ ಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರತಿ ನಿತ್ಯ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ರಾತ್ರಿಯೇ ವಾಪಸ್‌ ಬರುತ್ತಿದ್ದರು. ಕೆಲವೊಮ್ಮೆ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಆದರೆ, ಮಂಗಳವಾರ ದುರ್ಗೇಶ್‌ ತಾಯಿಯೊಂದಿಗೆ ಮನೆಯಲ್ಲಿ ಇದ್ದ.

ತಂದೆ ನೋಡಲು ಹೋದಾಗ ದುರ್ಘ‌ಟನೆ: ಬೆಳಗ್ಗೆ ಮನೆ ಮುಂಭಾಗದಲ್ಲಿ ಒಬ್ಬನೇ ಆಟವಾಡುತ್ತಿದ್ದ ದುರ್ಗೇಶ್‌ ಮಧ್ಯಾಹ್ನದ ವೇಳೆಗೆ ಮನೆಯಿಂದ ಅರ್ಧ ಕಿ.ಮೀಟರ್‌ ದೂರದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮಲ್ಲಪ್ಪರನ್ನು ನೋಡಲು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ. ಮಾರ್ಗ ಮಧ್ಯೆ ಕಸದ ತೊಟ್ಟಿ ಬಳಿ ಗುಂಪು ಕಟ್ಟಿಕೊಂಡು ನಿಂತಿದ್ದ ನಾಯಿಗಳು ದುರ್ಗೇಶ್‌ನನ್ನು ಕಂಡು ಬೊಗಳಿವೆ.

ಇದರಿಂದ ಆತಂಕಗೊಂಡ ಬಾಲಕ ಓಡಲು ಆರಂಭಿಸಿದ್ದಾನೆ. ಆತನನ್ನು ಹಿಂಬಾಲಿಸಿದ ಹತ್ತಕ್ಕೂ ಹೆಚ್ಚು ನಾಯಿಗಳು ಆತನ ಮೇಲೆ ಮುಗಿ ಬಿದ್ದು ದೇಹದ ನಾನಾ ಭಾಗಗಳನ್ನು ಕಚ್ಚಿ ಎಳೆದಾಡಿವೆ. ತೀವ್ರ ರಕ್ತಸ್ರಾವದಿಂದ ಆತ ಜೋರಾಗಿ ಕೂಗಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಆತನ ನೆರವಿಗೆ ಬಂದರೂ ಪ್ರಯೋಜವಾಗಿಲ್ಲ.

Advertisement

ಆಕ್ರಂದನ: ಮಗುವಿನ ಚಿರಾಟದ ಸದ್ದು ಕೇಳಿ ತಂದೆ ಮಲ್ಲಪ್ಪ ಕೂಡ ಸ್ಥಳಕ್ಕೆ ಬಂದು ನೋಡುತ್ತಿದ್ದಂತೆ “ನನ್ನ ಮಗ. ನನ್ನ ಮಗ’ ಎಂದು ಮೃತ ದೇಹವನ್ನು ತಬ್ಬಿಕೊಂಡು ಗೋಳಾಡಿದರು. ತಾಯಿ ಮಲ್ಲಮ್ಮ ದಾರುಣ ದಾಳಿಯನ್ನು ಕಂಡು ಆಳಲು ಆರಂಭಿಸಿದರು. ಸ್ಥಳಕ್ಕೆ ಬಂದ ಸೋಲದೇವನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ದೂರು ನೀಡುವಂತೆ ತಂದೆ ಮಲ್ಲಪ್ಪನಿಗೆ ಮನವಿ ಮಾಡಿದ್ದಾರೆ.

“ನಮ್ಮ ಮಗ ವಾಪಸ್‌ ಬರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಬುದ್ದಿ ಹೇಳಿ. ನನ್ನ ಮಗನಿಗೆ ಬಂದ ಸಾವು ಬೇರೆ ಯಾರಿಗೂ ಬರಬಾರದು’ ಎಂದು ಮನವಿ ಮಾಡಿದರು. ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ವೇಳೆಗೆ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಹೆಣ್ಣು ಮಗುವಿನ ಮೇಲೂ ದಾಳಿ: ಈ ಮಧ್ಯೆ ಎರಡು ದಿನಗಳ ಹಿಂದೆ ನೀಲಸಂದ್ರದ ರೋಸ್‌ಗಾರ್ಡ್‌ನಲ್ಲಿ ಬೀದಿನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿದ ನಾಯಿಗಳ ಗುಂಪು ಆಕೆಯ ಕೆನ್ನೆ, ಕಣ್ಣಿನ ಭಾಗಗಳಲ್ಲಿ ಕಚ್ಚಿವೆ. ಅದನ್ನು ಕಂಡ ಸ್ಥಳೀಯರು ಕೂಡಲೇ ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಇದುವರೆಗೂ ಯಾರು ದೂರು ನೀಡಿಲ್ಲ ಎಂದು ಅಶೋಕನಗರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next