ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್ ಮತ್ತು ಹಂಚಿಕೆ ಮಾಡುವ ಪ್ರಕರಣ ಸಂಬಂಧ ಸಿಬಿಐ ಹಾಗೂ ಕೇಂದ್ರದ ಇತರೆ ತನಿಖಾ ಸಂಸ್ಥೆಗಳು ಶನಿವಾರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿವೆ.
ಬೆಂಗಳೂರಿನ 4 ಕಡೆ, ರಾಮನಗರ, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಸಿಬಿಐ ಏಕಕಾಲಕ್ಕೆ ದಾಳಿ ನಡೆಸಿದೆ. ಇತ್ತೀಚೆಗೆ ಮಕ್ಕಳಿಗೆ ಸಂಬಂಧಿಸಿ ಲೈಂಗಿಕ ಪ್ರಚೋದನಿಯ ವಿಡಿಯೋಗಳನ್ನು ಕೆಲವರು ಡೌನ್‌ಲೋಡ್ ಮಾಡಿಕೊಂಡು ವೀಕ್ಷಣೆ ಮತ್ತು ಅವುಗಳನ್ನು ವೆಬ್ ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಕುರಿತು ಕೇಂದ್ರದ ತನಿಖಾ ಸಂಸ್ಥೆಗಳು ನಿಗಾ ವಹಿಸಿದ್ದವು. ಈ ಕುರಿತು ಆಗಾಗ್ಗೆ ರಾಜ್ಯದ ಸಿಐಡಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದು, ಈ ಕುರಿತು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಿದ ವ್ಯಕ್ತಿ ವಾಸವಾಗಿರುವ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ (ಟಿಪ್‌ಲೈನ್) ಪ್ರಕರಣಗಳು ದಾಖಲಾಗುತ್ತಿವೆ. ಈ ಬೆನ್ನಲ್ಲೇ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಕಳೆದ 8 ತಿಂಗಳಲ್ಲಿ ನಗರದಲ್ಲಿ ಸುಮಾರು 60ಕ್ಕೂ ಹೆಚ್ಚು ಟಿಪ್‌ಲೈನ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮಕ್ಕಳ ಅಶ್ಲೀಲ ವಿಡಿಯೋ, ಫೋಟೋಗಳ ವೀಕ್ಷಣೆ, ಅಪ್‌ಲೋಡ್, ಡೌನ್‌ಲೋಡ್ ಮತ್ತು ಹಂಚುವುದು ಹಾಗೂ ಗೂಗಲ್ ಸರ್ಜ್ ಎಂಜಿನ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಬಗ್ಗೆ ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಹಿನ್ನೆಲೆಯಲ್ಲಿ ಅಂತಹ ಜಾಲತಾಣಗಳಿಗೆ ಭೇಟಿ ಕೊಡುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಅಲ್ಲದೆ, ಅವರ ವಿರುದ್ಧ ಐಟಿ ಕಾಯ್ದೆ 67(ಬಿ) ಅಡಿ ಪ್ರಕರಣ ದಾಖಲಾಗುತ್ತದೆ.
ಹೇಗೆ ಪತ್ತೆ ಹಚ್ಚುತ್ತಾರೆ?: ಮಕ್ಕಳ ಅಶ್ಲೀಲ ವಿಡಿಯೋ ಕುರಿತು 2019ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್‌ಫ್ಲಾಯೆrಡ್(ಎನ್‌ಸಿಎಂಇಸಿ) ಎಂಬ ಸಂಸ್ಥೆ ಆರಂಭಿಸಿದ್ದು, ಅದು ಸೈಬರ್ ಟಿಪ್‌ಲೈನ್ ಮೂಲಕ ಅಶ್ಲೀಲ ವೆಬ್‌ಸೈಟ್ ವೀಕ್ಷಕರ ಪತ್ತೆ ಹಚ್ಚುತ್ತದೆ. ದೇಶದ ಯಾವುದೇ ಸ್ಥಳದಲ್ಲಿ ಕುಳಿತು ಮಕ್ಕಳ ಅಶ್ಲೀಲ ಚಿತ್ರದ ಬಗ್ಗೆ ಜಾಲತಾಣದಲ್ಲಿ ಶೋಧಿಸಿದ ಕೂಡಲೇ ಸೈಬರ್ ಟಿಪ್‌ಲೈನ್‌ಗೆ ಸಂದೇಶ ರವಾನೆಯಾಗುತ್ತದೆ. ನಂತರ ಯಾವ ಜಾಗದಲ್ಲಿ? ಯಾವ ಐಪಿ ವಿಳಾಸ? ಆ ವ್ಯಕ್ತಿ ಹೆಸರು, ಮೊಬೈಲ್ ನಂಬರ್ ಪತ್ತೆ ಹಚ್ಚಲಾಗುತ್ತದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ(ಎನ್‌ಸಿಆರ್‌ಬಿ) ಪಡೆದುಕೊಂಡು, ನಂತರ ಆಯಾ ರಾಜ್ಯದ ಸೈಬರ್ ಘಟಕದ ಮುಖ್ಯ ಕಚೇರಿಗೆ ಆರೋಪಿತ ವ್ಯಕ್ತಿ ಹೆಸರು, ಐಪಿ ವಿಳಾಸ ಅಥವಾ ಸಿಮ್‌ಕಾರ್ಡ್ ನಂಬರ್ ನಮೂದಿಸಿ ಕಳುಹಿಸುತ್ತಾರೆ. ಈ ಆಧಾರದ ಮೇಲೆ ಸಿಐಡಿ ಸೂಚನೆ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸೆನ್ ಠಾಣೆಗಳಲ್ಲಿ ಸೈಬರ್ ಟಿಪ್‌ಲೈನ್ ಪ್ರಕರಣ ಗಳು ದಾಖಲಾಗುತ್ತವೆ ಎಂದು ಪೊಲೀಸರು ಮಾಹಿತಿ ನೀಡಿದರು.