Advertisement
ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ ಏನು ಎಂಬುದನ್ನು ತಿಳಿಯಲು ಮಕ್ಕಳ ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ವಿಶ್ಲೇಷಣೆ ನೆರವಾಗಬಲ್ಲುದು. ಇವುಗಳನ್ನು ಸ್ಥೂಲವಾಗಿ ಜೀವಶಾಸ್ತ್ರೀಯ (ಅಂದರೆ, ಮಿದುಳಿನಲ್ಲಿ ಆಗುವ ಬದಲಾವಣೆಗಳು), ಮನಶಾಸ್ತ್ರೀಯ (ಅಂದರೆ ಮಗುವಿನ ಸ್ವಭಾವ, ಹೊಂದಿಕೊಳ್ಳುವ ವ್ಯವಸ್ಥೆ, ಹೆತ್ತವರ ಜತೆಗಿನ ಸಂಬಂಧ) ಮತ್ತು ಸಾಮಾಜಿಕ (ಅಂದರೆ, ಮಕ್ಕಳು ಆಡುವ ಮತ್ತು ಬೆಳೆಯುವ ಶಾಲೆ/ಮನೆ/ನೆರೆಹೊರೆಯಲ್ಲಿ) ಎಂದು ವರ್ಗೀಕರಿಸಬಹುದು.
Related Articles
Advertisement
ಮಕ್ಕಳು ಮತ್ತು ಹದಿಹರಯದವರಲ್ಲಿ ಮಾನಸಿಕ ಅನಾರೋಗ್ಯ ಉಂಟಾಗುವುದನ್ನು ತಡೆಗಟ್ಟುವುದು ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ವಿಭಾಗವು ಗಮನಹರಿಸುವ ಇನ್ನೊಂದು ಕ್ಷàತ್ರ. ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಪ್ರತಿಕೂಲ ಸ್ಥಿತಿ (ಉದಾಹರಣೆಗೆ, ಬಡತನ, ಅನಾಥ ಸ್ಥಿತಿ, ಪುನರ್ವಸತಿ ಕೇಂದ್ರಗಳಲ್ಲಿರುವ ಮಕ್ಕಳು, ಕಾನೂನು ಬಿಕ್ಕಟ್ಟಿಗೀಡಾದ ಮಕ್ಕಳು) ಅಥವಾ ದೀರ್ಘಕಾಲೀನ ದೈಹಿಕ ಅನಾರೋಗ್ಯಗಳಿಂದಾಗಿ (ಉದಾಹರಣೆಗೆ, ಮಧುಮೇಹ, ಕ್ಯಾನ್ಸರ್, ಮೂಛೆìರೋಗ) ಅನೇಕ ಮಕ್ಕಳು ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮಕ್ಕಳ ಮನೋರೋಗ ಶಾಸ್ತ್ರವು, ಮಕ್ಕಳ ಆಂತರಿಕ ಸಮಸ್ಯೆಗಳನ್ನು ಹೋಗಲಾಡಿಸಿ, ಒತ್ತಡ ನಿವಾರಿಸುವ ಸಾಮರ್ಥ್ಯವನ್ನು ವರ್ಧಿಸುವತ್ತ ಗಮನ ಹರಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಕ್ಕಳು ಮತ್ತು ಹದಿಹರಯದವರ ಮನಶಾÏಸ್ತ್ರ ವಿಭಾಗದ ಸೇವೆಗಳಲ್ಲಿ ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ, ಮಾನಸಿಕ ಆರೋಗ್ಯ ಹೆಚ್ಚಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸೇವೆಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗವು ಮಕ್ಕಳ ಹೆತ್ತವರು, ಮಕ್ಕಳ ತಜ್ಞರು/ ಸಹ ಆರೋಗ್ಯ ಸೇವಾದಾರರು, ಮಕ್ಕಳು ಮತ್ತು ಹದಿಹರಯದವರಿಗೆ ಅಗತ್ಯವಾದ ವಿವಿಧ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸುವ ಮೂಲಕ ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತದೆ. ಮಕ್ಕಳು ಮತ್ತು ಹದಿಹರಯದವರು ತಾವು ಸಂತಸದಾಯಕ, ಆರೋಗ್ಯಯುತ ಮತ್ತು ಸುರಕ್ಷಿತವಾದ ಬಾಲ್ಯವನ್ನು ಅನುಭವಿಸುವ ಹಕ್ಕನ್ನು ಪಡೆಯುವಂತೆ ಮಾಡುವುದು ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗದ ಅಂತಿಮ ಗುರಿ ಮತ್ತು ಉದ್ದೇಶವಾಗಿದೆ.
ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗದಲ್ಲಿ ನಿರ್ವಹಿಸಲಾಗುವ ಸಾಮಾನ್ಯ ಸಮಸ್ಯೆಗಳು ಈ ಕೆಳಗಿನಂತಿವೆ:– ಬೆಳವಣಿಗೆಯ ಮೈಲಿಗಲ್ಲುಗಳನ್ನು ಮುಟ್ಟಲು ವಿಳಂಬವಾಗುವುದು: ಇದರಲ್ಲಿ ಮಗು ಮಾತನಾಡದಿರುವುದು, ಸಾಮಾಜಿಕವಾಗಿ ಒಳಗೊಳ್ಳುವುದಕ್ಕೆ ಕಷ್ಟ, ವಯಸ್ಸಿಗೆ ತಕ್ಕಂತೆ ಕಲಿಯದಿರುವುದು ಅಥವಾ ಒಟ್ಟಾರೆಯಾಗಿ ಸಮಾನ ವಯಸ್ಕರಿಗಿಂತ ಮಂದಗತಿಯಲ್ಲಿ ಇರುವುದು ಸೇರಿರಬಹುದು.
– ಆಟಿಸಂ: ಕುಟುಂಬದವರ ಜತೆಗೆ ಕೂಡ ಕಡಿಮೆ ಸಂವಹನ, ಸಮಾನ ವಯಸ್ಕರ ಜತೆಗೆ ಆಟವಾಡಲು ಅಥವಾ ಸಂವಹನದಲ್ಲಿ ನಿರಾಸಕ್ತಿ ಇತ್ಯಾದಿ ಲಕ್ಷಣಗಳಿರುವ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ.
– ಅಟೆನ್ಶನ್ ಡಿಫಿಸಿಟ್ ಹೈಪರ್‌ಆ್ಯಕ್ಟಿವ್ ಡಿಸಾರ್ಡರ್ (ಎಡಿಎಚ್‌ಡಿ): ಮಗು ಸತತವಾಗಿ ಅತ್ತಿಂದಿತ್ತ ಚಲಿಸುವ ಅಥವಾ ಅತಿಯಾದ ಚಟುವಟಿಕೆಯಿಂದಿರುವ, ಯಾವುದೇ ಕೆಲಸದಲ್ಲಿ ಏಕಾಗ್ರತೆಯ ಕೊರತೆ ಹೊಂದಿರುವ ಮತ್ತು ಬಹಳ ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ.
– ವರ್ತನೆಯ ಸಮಸ್ಯೆಗಳು: ಒಪೊಸಿಶನಲ್ ಡೀಫಿಯಂಟ್ ಡಿಸಾರ್ಡರ್‌ನಲ್ಲಿ ಇರುವಂತೆ ಪದೇಪದೆ ತಾಳ್ಮೆ ಕಳೆದುಕೊಳ್ಳುವುದು, ಹಿರಿಯರ ಜತೆಗೆ ಜಗಳವಾಡುವುದು, ಅವಿಧೇಯರಾಗಿರುವುದು. ಕಾಂಡಕ್ಟ್ ಡಿಸಾರ್ಡರ್‌ನಲ್ಲಿ ಕಂಡುಬರುವಂತೆ ಮನೆ ಅಥವಾ ಶಾಲೆಯಲ್ಲಿ ಪದೇಪದೆ ಸುಳ್ಳು ಹೇಳುವುದು, ಕದಿಯುವುದು ಅಥವಾ ನಿಯಮಗಳನ್ನು ಮುರಿಯುವುದು.
– ಭಾವನಾತ್ಮಕ ಸಮಸ್ಯೆಗಳು: ದೈನಿಕ ಚಟುವಟಿಕೆಗಳಲ್ಲಿ ಅತಿಯಾದ ಆತಂಕ, ಚಿಂತೆ ಹೊಂದಿರುವ ಆ್ಯಂಕ್ಸೆಟಿ ಡಿಸಾರ್ಡರ್, ಆರೈಕೆದಾರರಿಗೆ ಅತಿಯಾಗಿ ಜೋತುಬೀಳುವುದು, ನಿರ್ದಿಷ್ಟ ಸನ್ನಿವೇಶ/ ವಸ್ತುವಿನ ಬಗ್ಗೆ ಅತಿಯಾದ ಭಯ. ಬಹುತೇಕ ಸಮಯ ದುಃಖದಿಂದ ಇರುವುದು, ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವುದು, ಇತರರ ಜತೆಗೆ ಸಂವಹನದಲ್ಲಿ ನಿರಾಸಕ್ತಿ, ಚಟುವಟಿಕೆಗಳಲ್ಲಿ ನಿರಾಸಕ್ತಿ ಇತ್ಯಾದಿ ಲಕ್ಷಣಗಳಿರುವ ಖನ್ನತೆ (ಡಿಪ್ರಶನ್).
– ಸಮಸ್ಯಾತ್ಮಕ ದೈನಿಕ ಚಟುವಟಿಕೆಗಳು: ಅತಿಯಾಗಿ ತಿನ್ನುವುದು/ ತಿನ್ನದೆ ಇರುವುದು ಮತ್ತು ಇದರಿಂದಾಗಿ ತೂಕ ಹೆಚ್ಚುವುದು ಅಥವಾ ಕಳೆದುಕೊಳ್ಳುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮತ್ತು ನಿದ್ದೆ ಬಾರದೆ ಇರುವುದು.
– ಮಾದಕ ದ್ರವ್ಯ ವ್ಯಸನ, ಆನ್‌ಲೈನ್ ಗೇಮಿಂಗ್ ಚಟ: ಇವು ಶಾಲೆಯ ಕಲಿಕಾ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲವು, ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲವು. ಈ ಎಲ್ಲ ಸಮಸ್ಯೆಗಳು ಮಕ್ಕಳು ಮತ್ತು ಅವರ ಕುಟುಂಬಗಳಲ್ಲಿ ತೊಂದರೆಯನ್ನು ಸೃಷ್ಟಿಸಬಲ್ಲವಾಗಿದ್ದು, ಮಕ್ಕಳ ಕಲಿಕಾ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಮಗುವಿನ ಆರೋಗ್ಯಪೂರ್ಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತವೆ. -ಮುಂದಿನ ವಾರಕ್ಕೆ -ಡಾ| ಅಮೃತವರ್ಷಿಣಿ ಆರ್.
ಮಕ್ಕಳು ಮತ್ತು ಹದಿಹರಯದವರ ಮಾನಸಿಕ ರೋಗ ತಜ್ಞರು,
ಮಾನಸಿಕ ರೋಗ ವಿಭಾಗ, ಕೆಎಂಸಿ, ಮಣಿಪಾಲ