Advertisement

ಬಾಲಕಿ ಅಪಹರಣ: ಜೈಲು ಸೇರಿದ ಚಾಲಕ

12:49 PM Apr 19, 2019 | pallavi |

ಬೆಂಗಳೂರು: ಹೆಣ್ಣುಮಗುವಿದೆ ಎಂದು ಸಂಬಂಧಿಕರಿಗೆ ಹೇಳಿದ್ದ ಒಂದು ಸುಳ್ಳು! ಈ ಸುಳ್ಳನ್ನು ನಿಜ ಎಂದು ನಂಬಿಸಲು ಬಾಲಕಿ ಅಪಹರಣ!! ಆ ತಪ್ಪಿಗೆ ಲಾರಿಚಾಲಕ ಜೈಲುಪಾಲಾಗಿರುವ ಘಟನೆ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ವರ್ತೂರಿನ ನಿವಾಸಿ ಎಚ್‌.ರಮೇಶ್‌ ಜೈಲು ಸೇರಿದವ.

Advertisement

ಏ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಾ. ಎಸ್‌. ಆರ್‌ ಕೆ ನಗರದಲ್ಲಿ ಅಂಗಡಿಗೆ ತಿನಿಸು ತರಲು ಹೋದ ಮೂರು ವರ್ಷದ ಬಾಲಕಿ ಅಪಹರಣ ಕ್ಕೊಳಗಾದ ಪ್ರಕರಣದ ಬೆನ್ನತ್ತಿದ್ದ ಸಂಪಿಗೆಹಳ್ಳಿ ಪೊಲೀಸರು ಕಡೆಗೂ ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರು ದಿನಗಳ ಕಾಲ ಪೋಷಕರಿಂದ ದೂರವಾಗಿದ್ದ ಬಾಲಕಿ ಮಮತಾ (3) ಳನ್ನು ಅವರ ಮಡಿಲಿಗೆ ಒಪ್ಪಿಸಿದ್ದಾರೆ. ಬಾಲಕಿ ಮಮತಾಳನ್ನು ಅಪಹರಿಸಿದ್ದ ಆರೋಪಿಗಳಾದ ವರ್ತೂರಿನ ನಿವಾಸಿ ಎಚ್‌.ರಮೇಶ್‌, ಮಾರತ್‌ಹಳ್ಳಿ ಬ್ರಿಡ್ಜ್ ಸಮೀಪದ ನಿವಾಸಿ ಮಂಜುನಾಥ್‌ ರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ದಾಗ, ಮಕ್ಕಳಿಲ್ಲದ ಕಾರಣಕ್ಕೆ ಬಾಲಕಿಯನ್ನು ಅಪಹರಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.

ಸುಳ್ಳು ತಂದ ಸಂಕಷ್ಟ: ಕೊಪ್ಪಳ ಮೂಲದ ಆರೋಪಿ ರಮೇಶ್‌ ಕ್ಯಾಬ್‌ ಚಾಲಕನಾಗಿದ್ದು ಪತ್ನಿಯ ಜತೆ ವಾಸವಿದ್ದಾನೆ. ಕಳೆದ ವರ್ಷ ಗರ್ಭಿಣಿ ಪತ್ನಿಯ ಅನಾರೋಗ್ಯದಿಂದ ಮಗು ಹೊಟ್ಟೆಯಲ್ಲಿಯೇ
ಮೃತಪಟ್ಟಿತ್ತು. ಹೀಗಿದ್ದರೂ, ತನಗೆ ಹೆಣ್ಣು ಮಗುವಿದೆ ಎಂದು ಸಂಬಂಧಿಕರ ಬಳಿ ರಮೇಶ್‌ ಸುಳ್ಳು ಹೇಳಿಕೊಂಡಿದ್ದ.

ಕೆಲದಿನಗಳ ಹಿಂದೆ ಕೊಪ್ಪಳದ ತನ್ನ ಹತ್ತಿರದ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಲು ದಂಪತಿ ನಿರ್ಧರಿಸಿದ್ದರು. ಆದರೆ, ಮಗುವಿದೆ ಎಂದು ಹೇಳಿಕೊಂಡಿದ್ದರು.

Advertisement

ಹೀಗಾಗಿ, ನಗರದ ಕೂಲಿ ಕಾರ್ಮಿಕ ಹೆಣ್ಣುಮಗುವೊಂದನ್ನು ಅಪಹರಿಸಿ ಸಾಕಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.ಈ ಯೋಜನೆಯನ್ನು ಸ್ನೇಹಿತ ಮಂಜುನಾಥ್‌ಗೆ ತಿಳಿಸಿದ್ದು, 50 ಸಾವಿರ ರೂ. ನೀಡಿದರೆ ಮಗುವನ್ನು ಕಳವು ಮಾಡಿಕೊಂಡು ಬಂದು ಕೊಡುವುದಾಗಿ ಹೇಳಿದ್ದ.

ಅದರಂತೆ ಏ.10ರಂದು ಮಗುವನ್ನು ಅಪಹರಣ ಮಾಡಲು ಬೈಕ್‌ನಲ್ಲಿ ನಗರದ ಹಲವೆಡೆ ತಿರುಗಾಡಿದ್ದರು. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಪಿಗೆಹಳ್ಳಿಯ ಎಸ್‌ಆರ್‌ಕೆ ನಗರದಲ್ಲಿ ಅಂಗಡಿಗೆ ಹೋಗುತ್ತಿದ್ದ ಬಾಲಕಿ ಮಮತಾಳನ್ನು ಅಪಹರಿಸಿದ್ದರು.

ಹೆತ್ತವರ ಪರದಾಟ- ಸಿಸಿಟಿವಿ ನೀಡಿದ ಸುಳಿವು!:
ಅಂಗಡಿಗೆ ತಿಂಡಿತರಲು ಹೋಗಿದ್ದ ಮಗಳು ಎಷ್ಟೊತ್ತಾದರೂ ಬರದಿದ್ದಕ್ಕೆ ಕಂಗಾಲದ ಬಾಲಕಿ ಮಮತಾ
ತಂದೆ ಶರಣಪ್ಪ ದಂಪತಿ ಮನೆಯಿಂದ ಹೊರಗಡೆ ಬಂದು ಸುತ್ತಮುತ್ತಲು ಹುಡುಕಾಡಿದ್ದರು ಸುಳಿವು ಸಿಕ್ಕಿರಲಿಲ್ಲ. ಅಂತಿಮವಾಗಿ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್‌ ಎಚ್‌.ಬಿ ರಮೇಶ್‌ಕುಮಾರ್‌ ನೇತೃತ್ವದ ತಂಡ, ಬಾಲಕಿ ಮಮತಾ ಮನೆಯ ಸಮೀಪದ ಅಂಗಡಿಗಳು ಸಮೀಪದ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರು ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಅಸ್ಪಷ್ಟವಾಗಿ ಹಾಗೂ ಬೈಕ್‌ ನಂಬರ್‌ ಕಾಣಿಸಿತ್ತು. ಇದನ್ನು ಆದರಿಸಿ ಏ. 16ರಂದು ವರ್ತೂರಿನಲ್ಲಿರುವ ರಮೇಶ್‌ ನಿವಾಸದ ಮೇಲೆ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ರಮೇಶ್‌, ಮಂಜುನಾಥ್‌ನನ್ನು ಬಂಧಿಸಲಾಗಿದೆ.

ಮಕ್ಕಳಿಲ್ಲದ ಕೊರಗು ಕೃತ್ಯಕ್ಕೆ ಕಾರಣ
“ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿತ್ತು. ಸಂಬಂಧಿಕರಿಗೆ ಬೇರೆ ಮಗುವಿದೆ ಎಂದು ಸುಳ್ಳು ಹೇಳಿದ್ದೆವು. ಹೀಗಾಗಿ ಸಾಕಿಕೊಳ್ಳುವ ಉದ್ದೇಶದಿಂದ ಮಮತಾಳನ್ನು ಅಪಹರಣ ಮಾಡಿದ್ದೆವು ” ಎಂದು ಆರೋಪಿ ರಮೇಶ್‌ ವಿಚಾರಣೆ ವೇಳೆ ಹೇಳಿದ್ದಾನೆ. ಮಗು ಮಮತಾಳನ್ನು ಆರು ದಿನಗಳು ನೋಡಿಕೊಂಡಿದ್ದು ಸಂಬಂಧಿಕರು ಎಂದೇ ನಂಬಿಸಿದ್ದರು. ಹೀಗಾಗಿ ಅವರ ಜತೆ ಬೆರೆತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next